ADVERTISEMENT

ಅರಸು ಮೇಲಲ್ಲ; ಅಗಸ ಕೀಳಲ್ಲ: ತಹಶೀಲ್ದಾರ್ ಡಾ.ಪ್ರತಿಭಾ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 4:45 IST
Last Updated 4 ಫೆಬ್ರುವರಿ 2026, 4:45 IST
ಮಾಗಡಿಯಲ್ಲಿ ತಾಲ್ಲೂಕು ಮಾಚಿದೇವ ಮಡಿವಾಳರ ಸಂಘದಿಂದ ಏರ್ಪಡಿಸಿದ್ದ ಜಯಂತಿಯಲ್ಲಿ ತಾಲ್ಲೂಕು ತಹಶೀಲ್ದಾರ್ ಡಾ.ಪ್ರತಿಭಾ  ಇತರ ಗಣ್ಯರು ಪುಷ್ಪನಮನ ಸಲ್ಲಿಸಿದರು   
ಮಾಗಡಿಯಲ್ಲಿ ತಾಲ್ಲೂಕು ಮಾಚಿದೇವ ಮಡಿವಾಳರ ಸಂಘದಿಂದ ಏರ್ಪಡಿಸಿದ್ದ ಜಯಂತಿಯಲ್ಲಿ ತಾಲ್ಲೂಕು ತಹಶೀಲ್ದಾರ್ ಡಾ.ಪ್ರತಿಭಾ  ಇತರ ಗಣ್ಯರು ಪುಷ್ಪನಮನ ಸಲ್ಲಿಸಿದರು      

ಮಾಗಡಿ: 12ನೇ ಶತಮಾನದಲ್ಲಿ ಶರಣ ಮಡಿವಾಳ ಮಾಚಿದೇವ ಸಮಾಜದ ಅಭಿವೃದ್ಧಿ, ಅಸ್ಪೃಶ್ಯತೆ ನಿವಾರಣೆ ಮತ್ತು ಸಮತಾವಾದಿ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ತಹಶೀಲ್ದಾರ್ ಡಾ.ಪ್ರತಿಭಾ ಆರ್.ಅಭಿಪ್ರಾಯಪಟ್ಟರು.

ತಾಲ್ಲೂಕು ಆಡಳಿತ ಮತ್ತು ಮಾಚಿದೇವ ಮಡಿವಾಳರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಅರಸು ಮೇಲಲ್ಲ. ಅಗಸ ಕೀಳಲ್ಲ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ತತ್ವವನ್ನು ಮಾಚಿದೇವ 12ನೇ ಶತಮಾನದಲ್ಲೇ ಸಾರಿದ್ದರು. ಈ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗೆ ಅರ್ಥವಿದೆ’ ಎಂದರು.

ಮಾಚಿದೇವ ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ಎಲ್ಲ ಸಮುದಾಯಕ್ಕೂ ಸೇರಿದವರು. ಅಸ್ಪೃಶ್ಯತೆ ಮತ್ತು ತಾರತಮ್ಯದಿಂದ ಬಳಲುತ್ತಿದ್ದ ದುರ್ಬಲರಿಗೆ ಸಮಪಾಲು ಮತ್ತು ಸಮಬಾಳು ಒದಗಿಸಲು ಶ್ರಮಿಸಿದ ಅವರ ಸಂದೇಶವನ್ನು ಅರ್ಥಮಾಡಿಕೊಳ್ಳಬೇಕು ಎಂದರು. 

ADVERTISEMENT

ನಿಸರ್ಗ ಪರಿಚರಣ ಟ್ರಸ್ಟ್ ಅಧ್ಯಕ್ಷ ಎಚ್.ಎನ್.ಶಿವಲಿಂಗಯ್ಯ, ಮಡಿವಾಳ ಮಾಚಿದೇವ ಕ್ರಿ.ಶ.1120-30ರ ಸುಮಾರಿಗೆ ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿಯಲ್ಲಿ ಜನಿಸಿದರು.  ನೂರಾರು ವಚನಗಳನ್ನು ಸಂರಕ್ಷಿಸಿದ ಕೀರ್ತಿಗೆ ಅವರು ಪಾತ್ರರು ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಟಿ.ಎಂ.ಶ್ರೀನಿವಾಸ್, ಅನುಭವ ಮಂಟಪದಲ್ಲಿ ಶಿವಶರಣರ ವಸ್ತ್ರಗಳನ್ನು ಶುದ್ಧಿ ಮಾಡುವ ಮಹತ್ವದ ಕಾರ್ಯ ಮಾತ್ರವಲ್ಲದೆ, ವಚನ ಸಾಹಿತ್ಯದ ಸಂರಕ್ಷಣೆ ಜವಾಬ್ದಾರಿ ಹೊತ್ತಿದ್ದರು ಎಂದು ಹೇಳಿದರು.

ಬೆಂಗಳೂರು ದಕ್ಷಿಣ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಮಂಟೆದಯ್ಯ, ಸಂಘಕ್ಕೆ ಎರಡು ಎಕರೆ ಜಮೀನು ಮಂಜೂರಾಗಲು ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಶ್ರಮಿಸಲಿದ್ದಾರೆ ಭರವಸೆ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯದರ್ಶಿ ಲೋಕೇಶ್, ಕಲ್ಕೆರೆ ಶಿವಣ್ಣ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.