ADVERTISEMENT

ಮಾಗಡಿಯಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 8:27 IST
Last Updated 18 ಡಿಸೆಂಬರ್ 2025, 8:27 IST
<div class="paragraphs"><p>ಬಂಧಿತ ಯುವಕರು</p></div>

ಬಂಧಿತ ಯುವಕರು

   

ಮಾಗಡಿ:‌ ಪದವಿ ವಿದ್ಯಾರ್ಥಿನಿಯನ್ನು ಪ್ರೀತಿ ಹೆಸರಿನಲ್ಲಿ ಪುಸಲಾಯಿಸಿ ಆಕೆ ಜೊತೆ ದೈಹಿಕ ಸಂಪರ್ಕ ಬೆಳೆಸಿದ ಸಹಪಾಠಿ, ನಂತರ ಆಕೆಯನ್ನು ಬ್ಲಾಕ್‌ಮೇಲ್ ಮಾಡಿ ತನ್ನಿಬ್ಬರು ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಾಗಡಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಠಾಣೆ ವ್ಯಾಪ್ತಿಯ ಯುವಕರಾದ ವಿಕಾಸ್ (25), ಪ್ರಶಾಂತ್ (19) ಹಾಗೂ ಚೇತನ್‌ನನ್ನು (28) ಬಂಧಿಸಿದ್ದಾರೆ. ಆರೋಪಿಗಳ ಪೈಕಿ ವಿಕಾಸ್ ಮತ್ತು ಪ್ರಶಾಂತ್ ಸಹ ಪದವಿ ವಿದ್ಯಾರ್ಥಿಗಳಾಗಿದ್ದಾರೆ. ಎಲೆಕ್ಟ್ರಿಷಿಯನ್ ಆಗಿರುವ ಚೇತನ್ ವಿವಾಹಿತ.

ADVERTISEMENT

ಪ್ರೀತಿ ಹೆಸರಲ್ಲಿ ಕೃತ್ಯ: ಬೆಂಗಳೂರಿನಲ್ಲಿ ಬಿ.ಕಾಂ ಓದುತ್ತಿದ್ದ ವಿದ್ಯಾರ್ಥಿನಿಯನ್ನು ವಿಕಾಸ್ ಪರಿಚಯಿಸಿಕೊಂಡು ಆಕೆಯೊಂದಿಗೆ ಪ್ರೀತಿಯ ನಾಟಕವಾಡಿದ್ದ. ಅದೇ ಸಲುಗೆಯಲ್ಲಿ ಆಕೆ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಗೊತ್ತಾಗದಂತೆ ವಿಡಿಯೊ ಚಿತ್ರೀಕರಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದರು.

ಬಳಿಕ ವಿಕಾಸ್, ವಿದ್ಯಾರ್ಥಿನಿಗೆ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಕಳಿಸಿ ಬ್ಲಾಕ್‌ಮೇಲ್‌ ಮಾಡತೊಡಗಿದ. ತನ್ನಿಬ್ಬರ ಸ್ನೇಹಿತರ ಜೊತೆಗೂ ಸಹಕರಿಸಬೇಕು. ಇಲ್ಲದಿದ್ದರೆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಬೆದರಿಸುತ್ತಿದ್ದ. ವಿದ್ಯಾರ್ಥಿನಿ ಎಷ್ಟೇ ಬೇಡಿಕೊಂಡರೂ ಆರೋಪಿ ಸುಮ್ಮನಾಗದೆ ತನ್ನ ಚಾಳಿ ಮುಂದುವರಿಸಿದ್ದ.

ವಿಡಿಯೊ ಬಹಿರಂಗವಾದರೆ ತನ್ನ ಮತ್ತು ಕುಟುಂಬದ ಮರ್ಯಾದೆ ಹೋಗುತ್ತದೆ ಎಂದು ಭಯಗೊಂಡ ವಿದ್ಯಾರ್ಥಿನಿ, ಕಡೆಗೆ ಆರೋಪಿಗಳಿದ್ದ ಸ್ಥಳಕ್ಕೆ ಹೋಗಿ ವಿಡಿಯೊ ಡಿಲೀಟ್ ಮಾಡುವಂತೆ ಕೋರಿದ್ದರು. ಈ ವೇಳೆ ಆರೋಪಿಗಳು ಆಕೆಯ ಅಸಹಾಯಕತೆ ದುರುಪಯೋಗಪಡಿಸಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿ, ಆಗಲೂ ವಿಡಿಯೊ ಮಾಡಿಕೊಂಡಿದ್ದರು.

ವಿಡಿಯೊ ಹರಿಬಿಟ್ಟ: ಕೃತ್ಯದ ಬಳಿಕವೂ ಆರೋಪಿಗಳು ವಿದ್ಯಾರ್ಥಿನಿಗೆ ಬ್ಲಾಕ್‌ಮೇಲ್ ಮಾಡುವುದನ್ನು ಮುಂದುವರಿಸಿದ್ದರು. ಕೆಲ ದಿನಗಳ ಹಿಂದೆ ಪ್ರಮುಖ ಆರೋಪಿ ವಿಕಾಸ್, ಇನ್‌ಸ್ಟಾಗ್ರಾಂನಲ್ಲಿ ಕೃತ್ಯದ ವಿಡಿಯೊ ಹರಿಬಿಟ್ಟಿದ್ದ. ವಿಷಯ ಗೊತ್ತಾಗುತ್ತಿದ್ದಂತೆ ವಿದ್ಯಾರ್ಥಿನಿ, ಆರೋಪಿಗಳು ತನಗೆ ಬ್ಲಾಕ್‌ಮೇಲ್ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದನ್ನು ಕುಟುಂಬದವರಿಗೆ ತಿಳಿಸಿದ್ದಾರೆ.

ಬಳಿಕ ಕುಟುಂಬದವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಬುಧವಾರ ಭೇಟಿ ಮಾಡಿ ದೂರು ಕೊಟ್ಟಿದ್ದರು. ವರಿಷ್ಠಾಧಿಕಾರಿ ಅವರ ಸೂಚನೆ ಮೇರೆಗೆ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಯಿತು. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದರು.

ಎಸ್‌ಪಿಗೆ ದೂರು ಕೊಟ್ಟಿದ್ದ ವಿದ್ಯಾರ್ಥಿನಿ

ಮೂವರು ಯುವಕರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಕುರಿತು, ವಿದ್ಯಾರ್ಥಿನಿ ತನ್ನ ಕುಟುಂಬದೊಂದಿಗೆ ಡಿ. 17ರಂದು ನನ್ನನ್ನು ಭೇಟಿ ಮಾಡಿ ದೂರು ಕೊಟ್ಟಿದ್ದರು. ತಕ್ಷಣ ಮಾಗಡಿ ಪೊಲೀಸರಿಗೆ ದೂರನ್ನು ಕಳಿಸಿ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಅದಾದ ಕೆಲವೇ ತಾಸಿನಲ್ಲಿ ಇನ್‌ಸ್ಪೆಕ್ಟರ್ ಗಿರಿರಾಜ್ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.