ರಾಮನಗರ: ಹವಾಮಾನ ವೈಪರೀತ್ಯದ ಕಾರಣಕ್ಕೆ ಕಳೆದ ವರ್ಷ ನಷ್ಟದ ಕೂಪದಲ್ಲಿದ್ದ ಜಿಲ್ಲೆಯ ಮಾವು ಬೆಳೆಗಾರರ ಖಾತೆಗೆ 2023ನೇ ಸಾಲಿನಲ್ಲಿ ಬರೋಬ್ಬರಿ ₹25 ಕೋಟಿ ಮಾವು ವಿಮೆ ಪಾವತಿಯಾಗಿದೆ. ಬೆಳೆ ಕೈ ಕೊಟ್ಟಿದ್ದರಿಂದ ಮುಂದೇನು ಎಂಬ ಚಿಂತೆಯಲ್ಲಿದ್ದ ಜಿಲ್ಲೆಯ 10,964 ರೈತರಿಗೆ ವಿಮೆಯು ಆಸರೆಯಾಗಿದೆ.
ರಾಜ್ಯದಲ್ಲಿ ಮಾವು ಬೆಳೆಯುವ ಜಿಲ್ಲೆಗಳ ಪೈಕಿ ರಾಮನಗರ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಇಲ್ಲಿ ವರ್ಷದಿಂದ ವರ್ಷಕ್ಕೆ ಮಾವು ವಿಮೆ ಮಾಡಿಸುತ್ತಿರುವ ಬೆಳೆಗಾರರ ಸಂಖ್ಯೆಯೂ ಹೆಚ್ಚಾಗುತ್ತಿದೆ. 2023ನೇ ಸಾಲಿನ 10,964 ಬೆಳೆಗಾರರ ನೋಂದಣಿ ಕಳೆದ 8 ವರ್ಷಗಳಲ್ಲಿ ಆಗಿರುವ ದಾಖಲೆಯ ನೋಂದಣಿಯಾಗಿದೆ. ಅದೇ ರೀತಿ ₹25 ಕೋಟಿ ಮೊತ್ತ ಪಾವತಿಯೂ ಇಷ್ಟು ವರ್ಷಗಳಲ್ಲಿನ ಗರಿಷ್ಠ ಮೊತ್ತವಾಗಿದೆ.
₹2.49 ಕೋಟಿ ವಂತಿಗೆ: ‘ವಿಮೆಗೆ ನೋಂದಣಿ ಮಾಡಿಕೊಂಡಿದ್ದ ಬೆಳೆಗಾರರು ತಮ್ಮ ಪಾಲಿನ ವಂತಿಗೆಯಾಗಿ ಪ್ರತಿ ಹೆಕ್ಟೇರ್‌ಗೆ ಶೇ 5ರಂತೆ ವಿಮಾ ಕಂಪನಿ ಎಚ್‌ಡಿಎಫ್‌ಸಿ–ಇಆರ್‌ಜಿಒಗೆ ₹4 ಸಾವಿರ ಪಾವತಿಸಿದ್ದಾರೆ. ಕಂಪನಿಗೆ ರೈತರಿಂದ ಒಟ್ಟು ₹2.49 ಕೋಟಿ ಪ್ರೀಮಿಯಂ ಪಾವತಿಯಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಜು ಎಂ.ಎಸ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೆಳೆಗಾರರ ವಿಮೆಗಾಗಿ ರಾಜ್ಯ ಸರ್ಕಾರ ಹೆಕ್ಟೇರ್‌ಗೆ ಶೇ 17.50ರಂತೆ ₹14 ಸಾವಿರ ಮತ್ತು ಕೇಂದ್ರ ಸರ್ಕಾರ ಶೇ 12.50ರಂತೆ ₹10 ಸಾವಿರ ಪ್ರೀಮಿಯಂ ಮೊತ್ತವನ್ನು ವಿಮಾ ಕಂಪನಿಗೆ ಭರಿಸಿವೆ. ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಗರಿಷ್ಠ ₹80 ಸಾವಿರದವರೆಗೆ ವಿಮೆ ಮೊತ್ತ ಪಾವತಿಯಾಗಿದೆ’ ಎಂದು ಹೇಳಿದರು.
‘2023ರಲ್ಲಿ ಬೆಳೆಗಾರರು ವಿಮೆ ನೋಂದಣಿಗೆ ತೋರಿದ ಉತ್ಸಾಹ 2024ರಲ್ಲಿ ತಗ್ಗಿದೆ. ಈ ವರ್ಷ 6,591 ರೈತರು ಮಾತ್ರ ನೋಂದಣಿ ಮಾಡಿಸಿದ್ದಾರೆ. ಒಟ್ಟು 4927.60 ಹೆಕ್ಟೇರ್ ಮಾವು ಪ್ರದೇಶ ವಿಮೆ ವ್ಯಾಪ್ತಿಗೆ ಒಳಪಟ್ಟಿದ್ದು, ಬೆಳೆಗಾರರು ₹1.99 ಕೋಟಿ ವಂತಿಗೆ ಪಾವತಿಸಿದ್ದಾರೆ’ ಎಂದು ಮಾಹಿತಿ ನೀಡಿದರು.
ನಷ್ಟ ಆಧರಿಸಿ ವಿಮೆ: ಹವಾಮಾನದ ಏರುಪೇರಿನಿಂದಾಗುವ ಮಾವು ನಷ್ಟದ ಅಂದಾಜಿನ ಆಧಾರದ ಮೇಲೆ ವಿಮೆ ಪರಿಹಾರದ ಮೊತ್ತ ನಿಗದಿಯಾಗುತ್ತದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (ಕೆಎಸ್‌ಎನ್‌ಡಿಎಂಸಿ) ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಳೆ ಮಾಪಕಗಳನ್ನು ಅಳವಡಿಸಿದೆ. ಮಳೆ ಕುರಿತ ಅಲ್ಲಿನ ವರದಿ ಜೊತೆಗೆ ವಾತಾವರಣದ ತಾಪಮಾನ, ಗಾಳಿಯ ವೇಗ, ಆದ್ರತೆ ಸೇರಿದಂತೆ ಇತರ ಅಂಶಗಳು ಸಹ ವಿಮೆ ಪರಿಹಾರ ನಿಗದಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.
ರೈತರು ಬೆಳೆ ಸಾಲದ ಅರ್ಜಿಗಳೊಂದಿಗೆ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಸ್ವಯಂಘೋಷಿತ ಬ್ಯಾಂಕ್ ವಿವರಗಳನ್ನು ನೀಡಿ ತಮ್ಮ ಹತ್ತಿರದ ಬ್ಯಾಂಕ್, ಸಾಮಾನ್ಯ ಕೇಂದ್ರ, ಗ್ರಾಮ ಒನ್ ಹಾಗೂ ನೋಂದಾಯಿತ ಎಫ್‌ಪಿಒಗಳ ಮೂಲಕ ವಿಮೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಮಾವು ವಿಮೆಯು ಬೆಳೆಗಾರರಿಗೆ ಆಶಾಕಿರಣವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ನಾಲ್ಕು ಎಕರೆಯಲ್ಲಿ ನಾವು ಬೆಳೆದಿದ್ದ ಮಾವು ಸಂಪೂರ್ಣವಾಗಿ ನೆಲ ಕೆಚ್ಚಿತ್ತು. ವಿಮೆ ಮಾಡಿಸಿದ್ದರಿಂದ ₹1.08 ಲಕ್ಷ ಮೊತ್ತ ಸಿಕ್ಕಿತುಮುಕುಂದ ರಾವ್ ಮಾವು ಬೆಳೆಗಾರ ಚೋಳಮಾರನಹಳ್ಳಿ ಚನ್ನಪಟ್ಟಣ ತಾಲ್ಲೂಕು
ಹದಿನಾರು ಎಕರೆಯಲ್ಲಿ ಮಾವು ಬೆಳೆದಿದ್ದ ನನಗೆ ಎಕರೆಗೆ ₹16 ಸಾವಿರದಂತೆ ಒಟ್ಟು ₹2.56 ಲಕ್ಷ ವಿಮೆ ಮೊತ್ತ ಸಿಕ್ಕಿದೆ. ಸತತ ಐದು ವರ್ಷಗಳಿಂದ ವಿಮೆ ಮಾಡಿಸುತ್ತಾ ಬಂದಿದ್ದು ಮಾವು ವಿಮೆಯು ಬೆಳೆಗಾರರಿಗೆ ಜೀವದಾನವಾಗಿದೆಅಶ್ವತ್ಥನಾರಾಯಣ ಕೆ.ಪಿ ಮಾವು ಬೆಳೆಗಾರ ಕುರುಬರಹಳ್ಳಿ ಕನಕಪುರ ತಾಲ್ಲೂಕು
ನೋಂದಣಿಯಲ್ಲಿ ಭಾರಿ ಜಿಗಿತ
‘ಮಾವು ಬೆಳೆಗಾರರನ್ನು ನಷ್ಟದಿಂದ ಪಾರು ಮಾಡಲು 2016ರಿಂದ ಶುರುವಾಗಿರುವ ಮಾವು ವಿಮೆಯ ಬಗ್ಗೆ ಜಿಲ್ಲೆಯ ಬೆಳೆಗಾರರು ಇತ್ತೀಚೆಗೆ ಜಾಗೃತರಾಗುತ್ತಿದ್ದಾರೆ. ವರ್ಷದಿಂದ ವರ್ಷದಿಂದ ಹೆಚ್ಚುತ್ತಿರುವ ನೋಂದಣಿ ಇದಕ್ಕೆ ಸಾಕ್ಷಿ. 2022ರಲ್ಲಿ 4789 ಇದ್ದ ನೋಂದಣಿ ಒಂದೇ ವರ್ಷದಲ್ಲಿ 7160ರಷ್ಟು ಜಿಗಿತ ಕಂಡಿದೆ. ಜಿಲ್ಲೆಯಲ್ಲಿ 30067 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಸುಮಾರು 28 ಸಾವಿರ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಕಳೆದ ವರ್ಷ ವಿಪರೀತ ಬಿಸಿಲು ಸೇರಿದಂತೆ ಹವಾಮಾನ ವೈಪರೀತ್ಯಕ್ಕೆ ಮಾವು ಬೆಳೆ ಬಹುತೇಕ ನೆಲ ಕಚ್ಚಿತ್ತು. ಶೇ 8– 10ರಷ್ಟು ಬೆಳೆ ಮಾತ್ರ ಕೈ ಸೇರಿದ್ದರಿಂದ ರೈತರು ಕಂಗಾಲಾಗಿದ್ದರು. ಈ ಪೈಕಿ ವಿಮೆ ಮಾಡಿಸಿದ್ದವರಿಗೆ ಬಂದಿರುವ ಮೊತ್ತವು ನಷ್ಟದಿಂದ ಚೇತರಿಸಿಕೊಳ್ಳುವಂತೆ ಮಾಡಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಜು ಎಂ.ಎಸ್ ತಿಳಿಸಿದರು.
985 ಮಂದಿಗಿಲ್ಲ ವಿಮೆ ಭಾಗ್ಯ
‘ಜಿಲ್ಲೆಯಲ್ಲಿ 2023ನೇ ಸಾಲಿನಲ್ಲಿ ವಿಮೆ ನೋಂದಣಿ ಮಾಡಿಸಿದ್ದ 11949 ಮಾವು ಬೆಳೆಗಾರರ ಪೈಕಿ 10964 ಮಂದಿಗೆ ಮಾತ್ರ ವಿಮೆ ಮೊತ್ತ ಪಾವತಿಯಾಗಿದೆ. ಉಳಿದ 985 ಮಂದಿಗೆ ವಿವಿಧ ಕಾರಣಗಳಿಗಾಗಿ ವಿಮೆ ಭಾಗ್ಯ ಸಿಕ್ಕಿಲ್ಲ. ಹವಾಮಾನ ವೈಪರೀತ್ಯದಿಂದಾದ ಭಾರಿ ನಷ್ಟಕ್ಕೆ ವಿಮೆಯು ಆಸರೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ನಿರಾಶೆಯಾಗಿದೆ. ತಾಂತ್ರಿಕ ದೋಷ ಹಾಗೂ ದಾಖಲೆಗಳಲ್ಲಾಗಿರುವ ವ್ಯತ್ಯಾಸದಿಂದಾಗಿ ವಿಮೆ ನೋಂದಣಿ ಮಾಡಿಸಿದ್ದ 985 ರೈತರಿಗೆ ವಿಮೆ ಮೊತ್ತ ಪಾವತಿಯಾಗಿಲ್ಲ. ಆರ್‌ಟಿಸಿಯಲ್ಲಿ ಮಾವು ಬೆಳೆ ಬದಲು ರಾಗಿ ಸೇರಿದಂತೆ ಬೇರೆ ಬೆಳೆಗಳ ಹೆಸರು ಇದ್ದರೂ ವಿಮೆ ಸಿಗುವುದಿಲ್ಲ. ಇಂತಹ ಒಂದೊಂದೇ ಪ್ರಕರಣಗಳನ್ನು ಗುರುತಿಸಿ ಸರಿಪಡಿಸಿ ಅವರಿಗೆ ವಿಮೆ ಮೊತ್ತ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಮನಗರದ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.