ಮಾಗಡಿ: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕರ್ತವ್ಯ ಫೌಂಡೇಶನ್ ವತಿಯಿಂದ ಹಲಸು ಹಾಗೂ ಮಾವು ಹಣ್ಣಿನಿಂದ ತಯಾರಿಸಬಹುದಾದ ವಿವಿಧ ಖಾದ್ಯಗಳ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ನಡೆಯಿತು.
ಕೇಂದ್ರದ ಗೃಹ ವಿಜ್ಞಾನಿಗಳಾದ ಡಾ.ಎಸ್.ಅನಿತಾ ಮಾತನಾಡಿ, ಹಣ್ಣುಗಳು ನಮ್ಮ ದಿನನಿತ್ಯದ ಸಮತೋಲನ ಆಹಾರದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಎಲ್ಲರೂ ಪ್ರತಿನಿತ್ಯ ಹಣ್ಣುಗಳನ್ನು ಸೇವಿಸಬೇಕು. ಋತುಗಳಲ್ಲಿ ಸಿಗುವ ಹಣ್ಣುಗಳನ್ನು ಸಂಸ್ಕರಿಸುವುದು ಅವಶ್ಯಕ ಎಂದರು.
ಹಲಸಿನ ಹಣ್ಣಿನ ಜಾಮ್, ಹಲಸಿನ ಚಿಪ್ಸ್, ಮಾವಿನ ಲೆದರ್, ಮಾವಿನ ಪಾನಕ, ಉಪ್ಪಿನಕಾಯಿ ಮತ್ತು ಮಾವಿನ ಕ್ಯಾಂಡಿ ತಯಾರಿಕಾ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.
ವಿಸ್ತರಣಾ ವಿಜ್ಞಾನಿ ಡಾ.ಎಸ್. ಸೌಜನ್ಯ ಮಾತನಾಡಿ, ಹೆಚ್ಚು ಉತ್ಪಾದನೆಯಾಗುವ ಮತ್ತು ಬೇಗ ಕೊಳೆಯುವ ಹಣ್ಣು ಹಾಗೂ ತರಕಾರಿಗಳನ್ನು ಸಂಸ್ಕರಿಸಿ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವುದರಿಂದ ಹಣ್ಣುಗಳ ಸಂಗ್ರಹಣಾ ಅವಧಿ ಹೆಚ್ಚುತ್ತದೆ. ಜೊತೆಗೆ ಇತ್ತೀಚೆಗೆ ಈ ವಿವಿಧ ಖಾದ್ಯಗಳಿಗೆ ಬೇಡಿಕೆಯೂ ಹೆಚ್ಚಿದೆ. ಇದರಿಂದ ಲಾಭಗಳಿಸಬಹುದು. ತಯಾರಿಕೆಗೆ ಗುಣಮಟ್ಟದ ಹಣ್ಣುಗಳ ಆಯ್ಕೆ, ಉತ್ಪಾದಿಸುವಾಗ ಕೈಗೊಳ್ಳಬೇಕಾದ ಕ್ರಮಗಳು, ಸ್ವಚ್ಛತೆ ಮತ್ತು ಲೇಬಲಿಂಗ್, ಬ್ರಾಂಡಿಂಗ್ ಕುರಿತು ಮಾಹಿತಿ ನೀಡಿದರು.
ಕರ್ತವ್ಯ ಫೌಂಡೇಶನ್ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಲೈಸನ್ಸ್ ಪಡೆಯಲು ಅನುಸರಿಸಬೇಕಾದ ಕ್ರಮ ಹಾಗೂ ಸ್ವಸಹಾಯ ಸಂಘಗಳ ಮಹತ್ವದ ಕುರಿತು ತಿಳಿಸಿದರು.
ತರಬೇತಿಯಲ್ಲಿ ರೈತ ಮಹಿಳೆಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.