ADVERTISEMENT

ಮೋದಿ ಆರ್‌ಎಸ್‌ಎಸ್‌ ಕೀಲುಗೊಂಬೆ; ಕೇಶವ ಕೃಪ ನಿರ್ದೇಶನದಂತೆ ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 15:45 IST
Last Updated 5 ಅಕ್ಟೋಬರ್ 2021, 15:45 IST
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ   

ರಾಮನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ಆರ್‌ಎಸ್‌ಎಸ್ ಕೀಲುಗೊಂಬೆಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಮರಾಜಪೇಟೆಯ ಕೇಶವ ಕೃಪದ ಕೃಪಾಕಟಾಕ್ಷ ಮತ್ತು ನಿರ್ದೇಶನದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬಿಡದಿಯಲ್ಲಿ ಮಂಗಳವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ಕಳೆದ ಹಲವು ದಿನಗಳಿಂದ ಆರ್‌ಎಸ್‌ಎಸ್‌ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ. ಈ ಸಂಘಟನೆ ಹೇಗೆ ಕೆಲಸ ಮಾಡುತ್ತದೆ ಹಾಗೂ ಚುನಾಯಿತ ಸರ್ಕಾರಗಳನ್ನು ಹೇಗೆ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುತ್ತದೆ ಎಂಬುದನ್ನು ತಿಳಿದು ಆಘಾತ ಆಯಿತು. ಸಂಘದ ಐಡಿಯಾಲಜಿ ಹೊಂದಿರುವ ಅಧಿಕಾರಿಗಳನ್ನು ತನ್ನ ತಾಳಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುತ್ತಿದೆ. ನಾಲ್ಕು ಸಾವಿರಕ್ಕೂ ಹೆಚ್ಚು ಅಧಿಕಾರಿಗಳು ಸಂಘದ ತರಬೇತಿ ಪಡೆದು ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ನಾಯಕರಿಗೆ ಸ್ವಾತಂತ್ರ್ಯ ಇಲ್ಲ. ನಮ್ಮ ರಾಜ್ಯದ ಬಿಜೆಪಿ ಸರ್ಕಾರದ ಎರಡನೇ ಮುಖ್ಯಮಂತ್ರಿ ಕೇಶವಕೃಪಕ್ಕೆ ಏಕೆ ಹೋಗುತ್ತಾರೆ? ಎಲ್ಲಿಯೇ ಹೋದರೂ ಆರೆಸ್ಸೆಸ್ ಕಚೇರಿಗಳಿಗೆ ಯಾಕೆ ಹೋಗುತ್ತಾರೆ?’ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ‘ರಾಜ್ಯದಲ್ಲಿ ಇರುವುದು ಸಂಪೂರ್ಣ ಆರ್‌ಎಸ್‌ಎಸ್‌ ಸರ್ಕಾರ. ಆದರೆ ಕೇಶವಕೃಪಕ್ಕೆ ಜನ ಮತ ಹಾಕಿಲ್ಲ ಎಂಬುದನ್ನು ಆಡಳಿತ ನಡೆಸುವವರು ಅರ್ಥ ಮಾಡಿಕೊಳ್ಳಬೇಕು ಎಂದರು.

ADVERTISEMENT

ಇವರಿಗೆ ದೇಶದ ಮತ್ತು ರಾಜ್ಯದ ಪ್ರಗತಿಯ ಅಜೆಂಡಾ ಇಲ್ಲ. ಜನರನ್ನು ಮನುಸ್ಮೃತಿ ಯುಗಕ್ಕೆ ತೆಗೆದುಕೊಂಡು ಹೋಗುವುದೇ ಅವರ ಅಜೆಂಡಾ. ನಾವು ಕೂಡ ಹಿಂದುಗಳೇ. ಆದರೆ ನಮಗೆ ಹಿಂದುತ್ವಕ್ಕಿಂತ ಮೊದಲು ದುಡಿಯುವ ಕೈಗೆ ದುಡಿಮೆ ಬೇಕು. ಅನ್ನ ಬೇಕು. ಸರ್ಕಾರ ಈ ರಾಜ್ಯದ, ದೇಶದ ಬಡವರ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಅಟಲ್ ಬಿಹಾರಿ ವಾಜಪೇಯಿ ಎಂಥ ನಾಯಕರು ಎಂಬುದು ನಮಗೆಲ್ಲರಿಗೂ ಗೊತ್ತು. ಹೆಜ್ಜೆ ಹೆಜ್ಜೆಗೂ ಅವರ ಸರ್ಕಾರಕ್ಕೆ ಅಡ್ಡಿ ಮಾಡಿದ್ದು ಆರ್‌ಎಸ್‌ಎಸ್‌. ಜಿನ್ನಾ ಅವರನ್ನು ಹೊಗಳಿದ ಒಂದೇ ಕಾರಣಕ್ಕೆ ಅಡ್ವಾಣಿ ಅವರನ್ನು ರಾಜಕೀಯವಾಗಿ ಮುಗಿಸಲಾಯಿತು. ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಅಪಮಾನಕರ ರೀತಿಯಲ್ಲಿ ಕೆಳಗಿಳಿಸಲಾಯಿತು ಎಂದು ಟೀಕಿಸಿದರು.

ಹಿಂದುತ್ವ ಹಾಗೂ ಕೋಮುವಾದವನ್ನು ಹರಡುವ ಕೆಲಸವನ್ನು ಬಿಟ್ಟರೆ ಬೇರೆ ಯಾವ ಸಾಧನೆಯನ್ನೂ ಅದು ಮಾಡಿಲ್ಲ. ದೇಶದ ಬಡತನದ ಬಗ್ಗೆ, ಸಮಸ್ಯೆಗಳ ಬಗ್ಗೆ ಆರ್‌ಎಸ್‌ಎಸ್‌ ಸಭೆಗಳಲ್ಲಿ ಚರ್ಚೆ ಆಗಿಲ್ಲ. ದೇಶವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವುದು ಒಂದೇ ಅವರ ಅಜೆಂಡಾ. ಆರ್‌ಎಸ್‌ಎಸ್‌ ಅನ್ನೇ ಕೇಂದ್ರಬಿಂದು ಆಗಿಸಿಕೊಂಡು ಬಿಜೆಪಿ ಕೆಲಸ ಮಾಡುತ್ತಿದೆ. ರಾಜಕೀಯವಾಗಿ ಪಕ್ಷಕ್ಕೆ ಸ್ವಾತಂತ್ರ್ಯ ಇಲ್ಲ. ಕೆಲ ವರ್ಷಗಳ ಹಿಂದೆ ಬಿಜೆಪಿಯನ್ನೇ ವಿಸರ್ಜಿಸಿ ಹೊಸ ಪಕ್ಷ ರಚನೆಯತ್ತ ಅದು ಅಲೋಚನೆ ಮಾಡಿತ್ತು ಎಂದು ಕುಮಾರಸ್ವಾಮಿ ದೂರಿದರು.

ವಿಶ್ವಾಸ ಮೂಡಿಸಿ: ರಾಜ್ಯದಲ್ಲಿ ಮತಾಂತರ ನಿಷೇಧ ವಿಧೇಯಕದಿಂದ ಮತಾಂತರವನ್ನು ನಿಲ್ಲಿಸಲು ಸಾಧ್ಯವಿಲ್ಲ. ಶಿಕ್ಷಣ, ಆರೋಗ್ಯ, ವಸತಿ ಮುಂತಾದ. ಸೌಲಭ್ಯಗಳನ್ನು ಉತ್ತಮವಾಗಿ ಒದಗಿಸಿದ್ದಿದ್ದರೆ ಮತಾಂತರ ಎನ್ನುವ ಶಬ್ದವೇ ಕೇಳುತ್ತಿರಲಿಲ್ಲ. ಸ್ವಯಂ ಪ್ರೇರಿತರಾಗಿ ಬೇರೆ ಧರ್ಮಕ್ಕೆ ಜನ ಹೋಗುತ್ತಿರುವ ಉದಾಹರಣೆ ಇದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಬೌದ್ಧ ಧರ್ಮಕ್ಕೆ ಹೋದರು. ಇದು ಇಂದಿನ ಸಮಸ್ಯೆ ಅಲ್ಲ ಎಂದರು.

ವಿಧಾನಸಭಾ ಕಲಾಪದಲ್ಲಿ ಮತಾಂತರದ ಬಗ್ಗೆ ಚರ್ಚೆಯನ್ನು ಗಮನಿಸಿದ್ದೇನೆ. ಶಾಸಕರ ತಾಯಿ ಒಬ್ಬರು ಮತಾಂತರ ಆಗಿದ್ದರ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಆದರೆ, ಬೈಬಲ್‌ನಲ್ಲಿ ಒತ್ತಾಯ ಮಾಡಿ ಮತಾಂತರ ಮಾಡುವುದಕ್ಕೆ ಬೆಂಬಲ ಇಲ್ಲ ಎಂದು ಕ್ರೈಸ್ತ ಧರ್ಮಗುರುಗಳು ಹೇಳುತ್ತಾರೆ. ರಾಜ್ಯದಲ್ಲಿ ಮತಾಂತರ ನಿಷೇಧ ವಿಧೇಯಕದ ಬದಲು ಜನರಲ್ಲಿ ವಿಶ್ವಾಸ ತುಂಬಬೇಕು. ಉದ್ಯೋಗ ಶಿಕ್ಷಣ ಕೊಡಬೇಕು. ಆರ್ಥಿಕ ಶಕ್ತಿ ತಂದುಕೊಡೆಬೇಕು ಎಂದರು.

ಕಾಂಗ್ರೆಸ್ ತಪ್ಪು ಮಾಡಿದೆ: ಬಿಜೆಪಿ ಬೆಳೆಯಲು ಕಾಂಗ್ರೆಸ್ ಸಹ ಕಾರಣ. ಅವರ ಸ್ವೇಚ್ಛಾ ವರ್ತನೆಯಿಂದಲೇ ಇಂತಹ ವಾತಾವರಣ ನಿರ್ಮಾಣ ಆಯಿತು. ರಾಜ್ಯದಲ್ಲೂ ಆ ಪಕ್ಷದ್ದು ಆದೆ ಕತೆ. ಸುದೀರ್ಘ ಅಧಿಕಾರ ಇದ್ದಾಗ ಏನು ಮಾಡಲಿಲ್ಲ. ಮೂರು ಸಾವಿರ ರೈತರು ಸಾಯುವರೆಗೂ ಏನೂ ಗೊತ್ತಿಲ್ಲ ಅಂತ ಆಗಿನ ಮುಖ್ಯಮಂತ್ರಿ ಇದ್ದರು. ಈಗ ರಾಜಕೀಯಕ್ಕೆ ಹಾಗೂ ಅಧಿಕಾರ ಹಿಡಿಯಲು ತರಾತುರಿಯಲ್ಲಿ ಪಂಜಿನ ಮೆರವಣಿಗೆ ಮಾಡುತ್ತಿದ್ದಾರೆ ಎಂದು ದೂರಿದರು.

ಬಂಧನಕ್ಕೆ ಆಗ್ರಹ: ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಸಚಿವರ ಬೆಂಗಾವಲು ವಾಹನ ಹತ್ತಿಸಿ ನಾಲ್ವರ ಸಾವಿಗೆ ಕಾರಣರಾದವರನ್ನು ತಕ್ಷಣ ಬಂಧಿಸಬೇಕು. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಸಚಿವರ ಪುತ್ರನನ್ನು ಹಾಗೂ ಆತನ ಪುಂಡ ಬೆಂಬಲಿಗರನ್ನು ಬಂಧಿಸಿ ಎಫ್ಐಆರ್ ಹಾಕಬೇಕು ಎಂದು ಕುಮಾರಸ್ವಾಮಿ ಒತ್ತಾಯ ಮಾಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.