ADVERTISEMENT

ಮಾಗಡಿ: ಇತಿಹಾಸ ಪುಟ ಸೇರಿದ ‘ನಿರ್ಮಲಾ’ ಚಿತ್ರಮಂದಿರ

ಪ್ರಜಾವಾಣಿ ವಿಶೇಷ
Published 29 ಜುಲೈ 2025, 7:23 IST
Last Updated 29 ಜುಲೈ 2025, 7:23 IST
ಮಾಗಡಿ ಪಟ್ಟಣದ ಕಲ್ಯಾಗೇಟ್ ನ ನಿರ್ಮಲ ಚಿತ್ರಮಂದಿರ ಪ್ರೇಕ್ಷಕರಿಲ್ಲದೆ ಕಟ್ಟಡ ತೆರವು ಗೊಳಿಸುತ್ತಿರುವುದು
ಮಾಗಡಿ ಪಟ್ಟಣದ ಕಲ್ಯಾಗೇಟ್ ನ ನಿರ್ಮಲ ಚಿತ್ರಮಂದಿರ ಪ್ರೇಕ್ಷಕರಿಲ್ಲದೆ ಕಟ್ಟಡ ತೆರವು ಗೊಳಿಸುತ್ತಿರುವುದು   

ಮಾಗಡಿ: ಅವಿಭಿಜಿತ ಬೆಂಗಳೂರು ಜಿಲ್ಲೆಯಲ್ಲೇ ಮೊದಲ ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಾಗಡಿ ಕಲ್ಯಾಗೇಟ್ ವೃತ್ತದ ಬಳಿಯ ನಿರ್ಮಲಾ ಚಿತ್ರಮಂದಿರ ಕೊನೆಯ ಆಟ ಮುಗಿಸಿದ್ದು ಇತಿಹಾಸ ಪುಟ ಸೇರಲಿದೆ. 

ಹಲವು ದಶಕ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರೇಕ್ಷಕರಿಗೆ ರಸದೌತಣ ನೀಡಿದ್ದ ನಿರ್ಮಲಾ ಟಾಕೀಜ್‌ ಹಲವು ದಿನಗಳಿಂದ ಪ್ರೇಕ್ಷಕರಿಲ್ಲದೆ ಸೊರಗಿತ್ತು. ಹಾಗಾಗಿ ಚಿತ್ರಮಂದಿರದ ಮಾಲೀಕರು ಕಟ್ಟಡ ನೆಲಸಮ ಮಾಡಿ ವಾಣಿಜ್ಯ ಕಟ್ಟಡ ನಿರ್ಮಿಸಲು ತೀರ್ಮಾನಿಸಿದ್ದಾರೆ.

1962ರಲ್ಲಿ ನಾಲ್ವರು ಸೇರಿ ಚಿತ್ರಮಂದಿರ ನಿರ್ಮಾಣಕ್ಕೆ ಮುಂದಾದರು. 1968ರಲ್ಲಿ ಜಿ.ಆರ್. ನಾಗರಾಜಪ್ಪ ಹರಾಜಿನಲ್ಲಿ 19 ಗುಂಟೆ ಜಾಗ ಖರೀದಿಸಿದರು. 1971ರಲ್ಲಿ ಬೆಂಗಳೂರು ಟೌನ್ ಪ್ಲಾನ್ ಇಲಾಖೆಯಿಂದ ಅನುಮತಿ ಪಡೆದರು. ಆರು ವರ್ಷ ಪರಿಶ್ರಮದಿಂದ ಚಿತ್ರಮಂದಿರ ಕಟ್ಟಡ ತಲೆ ಎತ್ತಿತು.  

ADVERTISEMENT

ನಾಗರಾಜು ಅವರು ಚಿತ್ರಮಂದಿರಕ್ಕೆ ತಮ್ಮ ಮುದ್ದಿನ ಮಗಳು ನಿರ್ಮಲಾ ಹೆಸರಿಟ್ಟರು. ಅವಿಭಿಜಿತ ಬೆಂಗಳೂರು ಜಿಲ್ಲೆಯಲ್ಲಿ ಮೊದಲ ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ನಿರ್ಮಲಾ ಚಿತ್ರಮಂದಿರ ಪಾತ್ರವಾಯಿತು.

1976ರಲ್ಲಿ ದಿ. ಜಿ.ಆರ್. ನಾಗರಾಜಪ್ಪ ಈ ಚಿತ್ರಮಂದಿರ ಆರಂಭಿಸಿದರು. ಆಗ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ, ಸಚಿವ ಚನ್ನಪ್ಪ,  ದೇವರಾಜು ಅರಸು ಅವರ ಸಹೋದರ, ಫಿಲ್ಮ್‌ ಚೇಂಬರ್‌ ಅಧ್ಯಕ್ಷರಾಗಿದ್ದ ಕೆಂಪರಾಜು ಅರಸು ಚಿತ್ರಮಂದಿರ ಉದ್ಘಾಟಿಸಿದ್ದರು.

ಡಾ.ರಾಜಕುಮಾರ್ ನಟನೆಯ ‘ಶ್ರೀನಿವಾಸ ಕಲ್ಯಾಣ’ ಈ ಟಾಕೀಜ್‌ನಲ್ಲಿ ‍ಪ್ರದರ್ಶನಗೊಂಡ ಮೊದಲ ಚಿತ್ರ. ಕಿಕ್ಕಿರಿದು ಪ್ರೇಕ್ಷಕರು ಹೊಸ ಥಿಯೇಟರ್‌ನಲ್ಲಿ ಮೊದಲ ಸಿನಿಮಾ ನೋಡಿದ ಸಂಭ್ರಮಕ್ಕೆ ಸಾಕ್ಷಿಯಾದರು.  

ಜಿ.ಆರ್. ನಾಗರಾಜಪ್ಪ ಪ್ರೇಕ್ಷಕರಿಗೆ ಗುಣಮಟ್ಟದ ಚಿತ್ರಮಂದಿರ ನಿರ್ಮಾಣ ಮಾಡಬೇಕೆಂಬ ಹಿನ್ನೆಲೆಯಲ್ಲಿ ಜಪಾನ್ ಹಾಗೂ ಕೊಲಂಬಿಯಾಗೆ ತೆರಳಿ ಅಲ್ಲಿನ ಚಿತ್ರಮಂದಿರಗಳ ಮಾದರಿ ಅಧ್ಯಯನ ಮಾಡಿ ಬಂದಿದ್ದರು ಎಂದು ನಾಗರಾಜಪ್ಪ ಅವರ ಪುತ್ರ ಆರ್.ಎನ್.ರಂಗಪ್ರಕಾಶ್ ನೆನಪು ಮಾಡಿಕೊಳ್ಳುತ್ತಾರೆ.

‘ನಮ್ಮ ಈ ಈ ಚಿತ್ರಮಂದಿರ ಮಾದರಿಯನ್ನೇ ನೋಡಿ ಹಲವು ಚಿತ್ರಮಂದಿರಗಳು ನಿರ್ಮಾಣ ಮಾಡಲಾಯಿತು. 49 ವರ್ಷಗಳ ಹಿಂದೆಯೇ ಸ್ಕ್ರೀನ್ ಪರಿಚಯ ಮಾಡಲಾಗಿತ್ತು’ ಎಂದರು.

ಒಂದು ವರ್ಷ ಕಾದು ಮುಂಬೈನಿಂದ ಪ್ರೊಜೆಕ್ಟರ್ ತರಲಾಗಿತ್ತು. 2012ರಲ್ಲಿ ಟಾಕೀಜ್‌ ನವೀಕರಣ ಮಾಡಿ ಡಿಟಿಎಸ್ ವ್ಯವಸ್ಥೆ ಅಳವಡಿಸಲಾಯಿತು. 2014ರಲ್ಲಿ ಚಿತ್ರಮಂದಿರ ಕ್ಯೂಬ್ ಮೂಲಕ ಅತ್ಯಧುನಿಕ ಸ್ಪರ್ಶ ಪಡೆದುಕೊಂಡಿತ್ತು.

ಪ್ರೇಕ್ಷಕರ ಕೊರತೆಯಿಂದ ಚಿತ್ರಮಂದಿರ ಕೆಡವಿ ಈ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತೇವೆ ಎಂದು ಮಾಲೀಕ  ಆರ್.ಎನ್.ರಂಗ ಪ್ರಕಾಶ್ ಹೇಳಿದಾಗ ಅವರ ಮುಖದಲ್ಲಿ ವಿಷಾದದ ಛಾಯೆ ಕಂಡಿತು.

‌50ದಿನ ಪೂರೈಸಿದ ಚಿತ್ರಗಳು: ಈ ಚಿತ್ರಮಂದಿರದಲ್ಲಿ ತೆರೆಕಂಡ ಅನೇಕ ಕನ್ನಡ ಚಿತ್ರಗಳು 50 ದಿನಕ್ಕೂ ಹೆಚ್ಚು ಪ್ರದರ್ಶನ ಕಂಡಿವೆ.ಸತ್ಯ ಹರಿಶ್ಚಂದ್ರ, ಶಂಕರ್ ಗುರು, ರಾಘವೇಂದ್ರ ಮಹಿಮೆ, ಅಣ್ಣ-ತಂಗಿ, ಚಕ್ರವರ್ತಿ, ಅಧ್ಯಕ್ಷ, ಟಗರು, ತವರಿಗೆ ಬಾ ತಂಗಿ ಚಿತ್ರಗಳು 50 ದಿನಕ್ಕೂ ಹೆಚ್ಚು ಪ್ರದರ್ಶನ ಕಂಡಿವೆ.

ಅಯ್ಯಪ್ಪ ಸ್ವಾಮಿ ಚಿತ್ರ ಬಿಡುಗಡೆ ವೇಳೆ ಅಯ್ಯಪ್ಪ ಸ್ವಾಮಿ ವಿಗ್ರಹವನ್ನು ಚಿತ್ರಮಂದಿರದಲ್ಲಿಟ್ಟು ಚಿತ್ರ ಆರಂಭಕ್ಕೂ ಮುನ್ನ ಪೂಜೆ ಸಲ್ಲಿಸಿ ಪ್ರೇಕ್ಷಕರಿಗೆ ಮಂಗಳಾರತಿ, ಪ್ರಸಾದ ನೀಡಲಾಗುತ್ತಿತ್ತು.  

ಡಾ.ರಾಜ್‌ಕುಮಾರ್ ಅಭಿನಯದ ‘ಗಂಧದಗುಡಿ’ ಚಿತ್ರವನ್ನು 12 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ರಿಯಾಯಿತಿ ದರದಲ್ಲಿ ವೀಕ್ಷಿಸಿ ಸಂಭ್ರಮಿಸಿದ್ದರು. ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲೂ ಈ ಬಗ್ಗೆ ಪ್ರಚಾರ ಮಾಡಲಾಗಿತ್ತು. ಶಾಲಾ ಮಕ್ಕಳಿಗೆ ವಿಶೇಷ ರಿಯಾಯಿತಿ ಘೋಷಿಸಲಾಗಿತ್ತು.

ಒಟ್ಟಿನಲ್ಲಿ ಅರ್ಧ ಶತಮಾನ ಪೂರೈಸುವ ಮೊದಲೇ ಪ್ರೇಕ್ಷಕರ ಕೊರತೆಯಿಂದ ನಿರ್ಮಲಾ ಚಿತ್ರಮಂದಿರ ತನ್ನ ಆಟವನ್ನು ಮುಗಿಸಿದೆ. ಪ್ರೇಕ್ಷಕರಿಗೆ ಈಗ ಈ ಚಿತ್ರಮಂದಿರ ನೆನಪಿನಲ್ಲಿ ಮಾತ್ರ ಉಳಿಯಲಿದೆ!

ಐಪಿಎಲ್‌ ಸಂಭ್ರಮವೇ ಕೊನೆ!

ಆರ್‌ಸಿಬಿ ಐಪಿಎಲ್ ಫೈನಲ್ ತಲುಪಿದ ಕಾರಣ ಆ ಪಂದ್ಯವನ್ನು ಸಿಂಗಲ್ ಸ್ಕ್ರೀನ್‌ನಲ್ಲಿ ಪ್ರೇಕ್ಷಕರಿಗೆ ಪ್ರದರ್ಶಿಸಲಾಯಿತು. ಅದೇ ಚಿತ್ರ ಮಂದಿರದಲ್ಲಿ ನಡೆದ ಕಡೆಯ ಆಟ ಎಂದು ಹೇಳಬಹುದು. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಆರ್‌ಸಿಬಿ ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ಪಂದ್ಯ ವೀಕ್ಷಣೆ ಮಾಡಿ ಸಂಭ್ರಮಾಚರಣೆ ಪಟ್ಟರು. ಆ ನಂತರ ಸುನಾಮಿ ಕಿಟ್ಟಿ ಅಭಿನಯದ ‘ಕೋರ’ ಬಿಡುಗಡೆಯಾದರೂ ಪ್ರೇಕ್ಷಕರಿಲ್ಲದ ಕಾರಣ ಪ್ರದರ್ಶನ ರದ್ದಾಯಿತು. ಇದು ನಿರ್ಮಲ ಚಿತ್ರಮಂದಿರದ ಕೊನೆಯ ಚಿತ್ರ. 

ಕರೋನಾ ನಂತರ ಚಿತ್ರಮಂದಿರದ ಕಡೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಯಿತು. ಒಟಿಟಿ ಬಂದ ಮೇಲೆ ಮನೆಯಲ್ಲೇ ಹೊಸ ಚಿತ್ರಗಳನ್ನು ನೋಡಲು ಆರಂಭಿಸಿದರು. ಪ್ರೇಕ್ಷಕರ ಕೊರತೆಯಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಬಹಳ ನೋವಿನಿಂದ ನಿರ್ಮಲಾ ಚಿತ್ರಮಂದಿರ ಮುಚ್ಚಲಾಗುತ್ತಿದೆ.
-ಆರ್.ಎನ್.ರಂಗಪ್ರಕಾಶ್, ನಿರ್ಮಲಾ ಚಿತ್ರಮಂದಿರದ ಮಾಲೀಕ 
ಅಂದಿನ ಬೆಂಗಳೂರು ಜಿಲ್ಲೆಗೆ ಮೊದಲ ಟಾಕೀಜ್‌ ಮನರಂಜನೆಗೆ ಹೆಸರು ವಾಸಿಯಾಗಿದ್ದ ನಿರ್ಮಲಾ ಚಿತ್ರಮಂದಿರ ಈಗ ಇತಿಹಾಸ ಪುಟ ಸೇರುತ್ತಿರುವುದು ನೋವಿನ ಸಂಗತಿ. ಚಿತ್ರ ಪ್ರದರ್ಶನದ ಜೊತೆಗೆ ಸರ್ಕಾರಿ ಕಾರ್ಯಕ್ರಮಗಳಿಗೆ ಆರೋಗ್ಯ ಶಿಬಿರಗಳಿಗೆ ಚಿತ್ರಮಂದಿರವನ್ನು ಬಳಸಿಕೊಳ್ಳಲಾಗುತ್ತಿತ್ತು. ಈಗ ಪ್ರೇಕ್ಷಕರ ಕೊರತೆಯಿಂದ ಕಡೆ ಆಟ ಮುಗಿಸುತ್ತಿರುವುದು ಬೇಸರ ತಂದಿದೆ.
-ಕೆ.ವಿ.ಬಾಲು, ಪುರಸಭೆ ಸದಸ್ಯರು ಮಾಗಡಿ.
1976ರಲ್ಲಿ ನಿರ್ಮಲ ಚಿತ್ರಮಂದಿರ ಉದ್ಘಾಟನೆ ಮಾಡಿದ್ದ ಮಾಜಿ ಸಚಿವ ದಿ.ಚನ್ನಪ್ಪನವರು ಹಾಗೂ ಗಣ್ಯರು
ಚಿತ್ರಮಂದಿರ ಆರಂಭವಾದ ಸಮಯದಲ್ಲಿ ಚಿತ್ರ ವೀಕ್ಷಿಸಿದ ಪ್ರೇಕ್ಷಕರು
ನಿರ್ಮಲಾ ಚಿತ್ರಮಂದಿರದ ಮಾಲೀಕರಿಗೆ ಪ್ರಶಸ್ತಿ ಬಂದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.