ADVERTISEMENT

ಕಾಡಾನೆ ಹಿಂಡಿನ ಹಳೆ ವಿಡಿಯೊ: ಕಾರ್ಯಾಚರಣೆ ನಡೆಸಿ ಬರಿಗೈಯಲ್ಲಿ ಮರಳಿದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 4:51 IST
Last Updated 9 ಫೆಬ್ರುವರಿ 2026, 4:51 IST
ವೈರಲ್ ಆಗಿದ್ದ ಆನೆಗಳ ಹಿಂಡಿನ ಫೋಟೋ
ವೈರಲ್ ಆಗಿದ್ದ ಆನೆಗಳ ಹಿಂಡಿನ ಫೋಟೋ   

ಕನಕಪುರ: ಕಾಡಿನಿಂದ 40 ಆನೆಗಳ ಹಿಂಡು ನಾಡಿಗೆ ಬಂದಿದೆ ಎಂದು ಭಾನುವಾರ ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ ರೈತರನ್ನು ಭಯಭೀತಗೊಳಿಸಿತ್ತು.

ತಾಲ್ಲೂಕಿನ ಗಡಿ ಗ್ರಾಮವಾದ ಕೋಡಿಹಳ್ಳಿ ಹೋಬಳಿ ಕೊಳಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡುಶಿವನಹಳ್ಳಿ ಗ್ರಾಮದಲ್ಲಿ 40 ಕಾಡಾನೆಗಳು ಬೆಳಗ್ಗೆ ದಿಢೀರ್ ಪ್ರತ್ಯಕ್ಷವಾಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಇದರಿಂದ ಆತಂಕಗೊಂಡ ರೈತರು ಭಯದಿಂದ ಕಾಡಾನೆಗಳು ದೊಡ್ಡ ಸಂಖ್ಯೆಯಲ್ಲಿ ತಮ್ಮ ಗ್ರಾಮಗಳ ಸುತ್ತಮುತ್ತ ಬಂದಿವೆ ಎಂದು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಆನೆಗಳನ್ನು ಮತ್ತೆ ಕಾಡಿಗೆ ಓಡಿಸಬೇಕೆಂದು ಒತ್ತಾಯ ಮಾಡಿದರು.

ADVERTISEMENT

ಅರಣ್ಯ ಅಧಿಕಾರಿಗಳ ತಂಡವು ಕರ್ನಾಟಕದ ಗಡಿ ಉದ್ದಕ್ಕೂ ಸಿಬ್ಬಂದಿಯೊಂದಿಗೆ ಬೆಳಗ್ಗೆಯಿಂದಲೇ ಆನೆಗಳ ಪತ್ತೆಗಾಗಿ ಕಾರ್ಯಾಚರಣೆ ಶುರು ಮಾಡಿತು.

ಆದರೆ ಅವರಿಗೆ ಆನೆಗಳು ಬಂದಿರುವ ಸುಳಿವು ಎಲ್ಲಿಯೂ ಸಿಗದಿದ್ದರಿಂದ ಗೊಂದಲಕ್ಕೆ ಒಳಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ ಪರಿಶೀಲನೆ ಮಾಡಿದಾಗ ಅದು ಎರಡು ವರ್ಷಗಳ ಹಿಂದಿನ ಹಳೆ ವಿಡಿಯೊ ಎಂದು ಗೊತ್ತಾಗಿದೆ.

ಎರಡು ವರ್ಷಗಳ ಹಿಂದೆ ತಮಿಳುನಾಡಿನಿಂದ ಕರ್ನಾಟಕಕ್ಕೆ 40 ಆನೆಗಳ ಹಿಂಡು ಬಂದಿತ್ತು. ಆ ಸಮಯದಲ್ಲಿ ಮಾಡಿರುವ ವಿಡಿಯೋ ಅದಾಗಿದ್ದು ರೈತರು ಆತಂಕಗೊಳ್ಳಬೇಕಾದ ಅವಶ್ಯಕತೆ ಇಲ್ಲ. ಯಾವ ಆನೆಗಳೂ ಇತ್ತ ಬಂದಿಲ್ಲ ಎಂದು ಅರಣ್ಯ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಟ್ಟು ಸಮಾಧಾನಪಡಿಸಿದರು ಎಂದು ವನ್ಯಜೀವಿ ವಲಯದ ಆರ್‌ಎಫ್‌ಒ ನಾಗರಾಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.