ADVERTISEMENT

ಮಾಗಡಿ: ಪೋಷಕರ ಮೇಲಿನ ಸಿಟ್ಟಿಗೆ ಮಗಳಿಗೆ ನಾಯಿ ಛೂ ಬಿಟ್ಟ! ಕೋಳಿಫಾರಂ ಮಾಲೀಕ ಬಂಧನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2023, 6:55 IST
Last Updated 14 ಅಕ್ಟೋಬರ್ 2023, 6:55 IST
ನಾಯಿದಾಳಿಯಿಂದ ತೀವ್ರವಾಗಿ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿನಿ ವೀಣಾ ಅವರನ್ನು ತಹಶೀಲ್ದಾರ್‌ ಜಿ. ಸುರೇಂದ್ರಮೂರ್ತಿ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು
ನಾಯಿದಾಳಿಯಿಂದ ತೀವ್ರವಾಗಿ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿನಿ ವೀಣಾ ಅವರನ್ನು ತಹಶೀಲ್ದಾರ್‌ ಜಿ. ಸುರೇಂದ್ರಮೂರ್ತಿ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು   

ಮಾಗಡಿ: ಕೋಳಿ ಸಾಕಾಣಿಕೆ ಕೇಂದ್ರಕ್ಕೆ ಕೆಲಸಕ್ಕೆ ಬಾರದ ಕೂಲಿಕಾರ್ಮಿಕ ದಂಪತಿ ಮಗಳ ಮೇಲೆ ಕೋಳಿಫಾರಂ ಮಾಲೀಕನೊಬ್ಬ ತನ್ನ ಸಾಕುನಾಯಿಯನ್ನು ಛೂ ಬಿಟ್ಟು ಕಚ್ಚಿಸಿದ ಅಮಾನವೀಯ ಘಟನೆ ಚಿಕ್ಕಸೋಲೂರು ಗ್ರಾಮದಲ್ಲಿ ನಡೆದಿದೆ.

ಸುರೇಶ್, ಲೀಲಾವತಿ ದಂಪತಿ ಮಗಳು ವೀಣಾ (15) ಗಂಭೀರವಾಗಿ ಗಾಯಗೊಂಡಿದ್ದು, ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದಾಳೆ. 

ಸೋಲೂರಿನ ಬಸವೇಶ್ವರ ಪ್ರೌಢಶಾಲೆಯಲ್ಲಿ ಎಸ್‌ಎಸ್ಎಲ್‌ಸಿ ಓದುತ್ತಿರುವ ವೀಣಾ ದೇಹದ ನಾನಾ ಕಡೆ ನಾಯಿ ಕಡಿತದಿಂದ ಗಾಯಗಳಾಗಿವೆ. ಕೋಳಿಫಾರಂ ಮಾಲೀಕ, ಆರೋಪಿ ನಾಗರಾಜುನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ADVERTISEMENT

ಕಳೆದ ವಾರ ನಡೆದ ಘಟನೆ ಕುರಿತು ಅದೇ ಗ್ರಾಮದಲ್ಲಿರುವ ಮತ್ತೊಂದು ಕೋಳಿಫಾರಂ ಮಾಲೀಕ ಆನಂದಕುಮಾರ್ ಎಂಬುವರು ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅ. 9ರಂದು ಪ್ರಕರಣ ದಾಖಲಾಗಿತ್ತು. 

ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ಅ. 12ರಂದು ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದ್ದರು.

ಘಟನೆ ವಿವರ: ಬೈಚಾಪುರದ ಆನಂದ ಕುಮಾರ್ ಅವರ ಒಡೆತನದ ಕೋಳಿಫಾರಂನಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಗ್ರಾಮದ ಸುರೇಶ್ ಮತ್ತು ಲೀಲಾವತಿ ದಂಪತಿ ಕೂಲಿ ಮಾಡುತ್ತಿದ್ದಾರೆ. ‍ಪಕ್ಕದಲ್ಲೇ ಇದ್ದ ತನ್ನ ಕೋಳಿಫಾರಂಗೆ ಕೂಲಿಗೆ ಬರುವಂತೆ ಈ ದಂಪತಿಯನ್ನು ನಾಗರಾಜು ಕರೆದಿದ್ದ. ಆದರೆ ಅವರು ಹೋಗಿರಲಿಲ್ಲ.

ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಸಾಧಿಸುತ್ತಿದ್ದ ನಾಗರಾಜು, ದಂಪತಿಯ ಮಗಳು ವೀಣಾ ಶಾಲೆ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದಾಗ ತನ್ನ ಸಾಕುನಾಯಿಯನ್ನು ಆಕೆಯ ಮೇಲೆ ಛೂ ಬಿಟ್ಟಿದ್ದಾನೆ. ಬಾಲಕಿಯ ಆಕ್ರಂದನ ಕೇಳಿ ಪಕ್ಕದ ಕೋಳಿಫಾರಂನಲ್ಲಿದ್ದ ಆನಂದಕುಮಾರ್ ಮತ್ತು ಪೋಷಕರು  ಓಡಿ ಬಂದು ಆಕೆಯನ್ನು ರಕ್ಷಿಸಿದ್ದರು.  

ಆಸ್ಪತ್ರೆಗೆ ಶುಕ್ರವಾರ ಎಸಿಡಿಪಿಒ ಹೇಮಾ ಮತ್ತು ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕಿ ರಮ್ಯಾ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. 

ವಿದ್ಯಾರ್ಥಿನಿ ವೀಣಾ ಅವರನ್ನು ಎಸಿಡಿಪಿಒ ಹೇಮಾ ಮತ್ತು ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕಿ ರಮ್ಯಾ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಲೀಲಾವತಿ ಸುರೇಶ್‌ ಇದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.