ADVERTISEMENT

ಪರೀಕ್ಷಾ ಸಾಧನೆಗೆ ಪ್ರೇರಣೆಯಾದ ‘ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್’ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 8:46 IST
Last Updated 11 ಫೆಬ್ರುವರಿ 2026, 8:46 IST
<div class="paragraphs"><p>ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗವು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಬಿಡದಿಯ ಜ್ಞಾನ ವಿಕಾಸ್ ವಿದ್ಯಾಸಂಘ (ರಿ) ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ‘ಪ್ರೇರಣಾ ಕಾರ್ಯಾಗಾರ’ವನ್ನು ಗಣ್ಯರು ಉದ್ಘಾಟಿಸಿದರು</p></div>

ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗವು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಬಿಡದಿಯ ಜ್ಞಾನ ವಿಕಾಸ್ ವಿದ್ಯಾಸಂಘ (ರಿ) ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ‘ಪ್ರೇರಣಾ ಕಾರ್ಯಾಗಾರ’ವನ್ನು ಗಣ್ಯರು ಉದ್ಘಾಟಿಸಿದರು

   

ರಾಮನಗರ: ‘ಪರೀಕ್ಷೆ ಬಗ್ಗೆ ಮನಸ್ಸಿನಲ್ಲಿ ಒಂದು ರೀತಿಯ ಆತಂಕವಿತ್ತು. ಮನೆಯಲ್ಲಿ ತಂದೆ–ತಾಯಿ ಮತ್ತು ಶಾಲೆಯಲ್ಲಿ ಶಿಕ್ಷಕರು ನಿತ್ಯ ಓದು ಓದು  ಎಂದು ಹೇಳುವ ಬುದ್ಧಿಮಾತು ಒತ್ತಡದ ಹೆಚ್ಚಿಸಿತ್ತು. ಎಷ್ಟೇ ಓದಿದರೂ ಆತಂಕ ಇದ್ದೇ ಇತ್ತು. ಆದರೆ, ಕಾರ್ಯಾಗಾರದಲ್ಲಿ ಭಾಗವಹಿಸಿದ ಬಳಿಕ ಆತಂಕ ಮತ್ತು ಒತ್ತಡ ತಗ್ಗಿ ಆತ್ಮವಿಶ್ವಾಸ ವೃದ್ಧಿಯಾಯಿತು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ, ತಂದೆ–ತಾಯಿ ಮತ್ತು ಶಿಕ್ಷಕರು ನನ್ನ ಮೇಲಿಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವೆ...’

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗವು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಬಿಡದಿಯ ಜ್ಞಾನ ವಿಕಾಸ್ ವಿದ್ಯಾಸಂಘ (ರಿ) ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ‘ಪ್ರೇರಣಾ ಕಾರ್ಯಾಗಾರ’ದಲ್ಲಿ ಭಾಗವಹಿಸಿದ್ದ ಬಹುತೇಕ ವಿದ್ಯಾರ್ಥಿಗಳ ಮನದಾಳದ ಮಾತಿದು.

ADVERTISEMENT

ಪರೀಕ್ಷಾ ಒತ್ತಡ ನಿರ್ವಹಣೆ, ಯೋಜಿತ ಅಧ್ಯಯನ, ಓದಿದ್ದನ್ನು ಸುಲಭವಾಗಿ ಜ್ಞಾಪಕವಿಟ್ಟುಕೊಳ್ಳುವ ತಂತ್ರಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ನೀಡಿದ ಮಾಹಿತಿಗಳನ್ನು ತದೇಕಚಿತ್ತದಿಂದ ಆಲಿಸುತ್ತಾ, ನೋಟ್‌ ಬುಕ್‌ನಲ್ಲಿ ಬರೆದುಕೊಂಡ ವಿದ್ಯಾರ್ಥಿಗಳು ತಮ್ಮೊಳಗಿದ್ದ ಅನುಮಾನಗಳನ್ನು ಪರಿಹರಿಸಿಕೊಂಡರು.

ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2.30ರವರೆಗೆ ನಡೆದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಸಂಪನ್ಮೂಲ ವ್ಯಕ್ತಿಗಳ ಮಾತುಗಳನ್ನು ವಿದ್ಯಾರ್ಥಿಗಳು ತದೇಕಚಿತ್ತದಿಂದ ಆಲಿಸಿದರು. ತಮ್ಮ ತಂದೆ–ತಾಯಿ ಮತ್ತು ಶಿಕ್ಷಕರು ತಮ್ಮ ಮೇಲೆ ಇಟ್ಟುಕೊಂಡಿರುವ ನಿರೀಕ್ಷೆಯನ್ನು ಹುಸಿಗೊಳಿಸದೆ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವುದಾಗಿ ಭರವಸೆ ನೀಡಿದರು.

ಸ್ಫೂರ್ತಿಯ ಮಾತು: ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಪ್ರೇರಣೆಯ ಮಾತುಗಳನ್ನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅವರು ಸ್ಪೂರ್ತಿಯ ಮಾತುಗಳನ್ನಾಡಿದರು. ಕಾರ್ಯಾಗಾರದಲ್ಲಿ ವಿಶೇಷ ಉಪಸ್ಥಿತಿ ವಹಿಸಿದ್ದ ಜ್ಞಾನ ವಿಕಾಸ್ ವಿದ್ಯಾಸಂಘದ ಸಂಸ್ಥಾಪಕ ಅಧ್ಯಕ್ಷ ಸಿ.ಎಂ. ಲಿಂಗಪ್ಪ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ನಾಡಿನ ಸಾಕ್ಷಿಪ್ರಜ್ಞೆಯಂತಿರುವ ‘ಪ್ರಜಾವಾಣಿ’ಯು ಸುದ್ದಿ ನೀಡುವ ಕಾಯಕಕಷ್ಟೇ ಸೀಮಿತವಾಗದೆ, ವಿದ್ಯಾರ್ಥಿಗಳ ಪರೀಕ್ಷಾ ಸಾಧನೆಗೆ ಏಣಿಯಾಗುವಂತಹ ಕೆಲಸಗಳನ್ನು ಮಾಡುತ್ತಿರುವುದಕ್ಕೆ ನಾಲ್ವರೂ ಮೆಚ್ಚುಗೆ ವ್ಯಕ್ತಪಡಿಸಿದರು. ‘ತಾವು ಸಹ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯನ್ನು ಓದಿಯೇ ಬೆಳೆದವರು. ನಮ್ಮ ಜ್ಞಾನದ ಅರಿವು ವಿಸ್ತರಿಸಿ ಈ ಮಟ್ಟಕ್ಕೆ ಬರುವಲ್ಲಿ ಪತ್ರಿಕೆಯ ಕಾಣಿಕೆಯೂ ಇದೆ’ಎಂದು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸ್ಮರಿಸಿದರು.

ಬಹುಮಾನದ ಮೆಚ್ಚುಗೆ: ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಅವರು, ರಾಷ್ಟ್ರಗೀತೆಯನ್ನು ಐದು ನಿಮಿಷದೊಳಗೆ ತಪ್ಪಿಲ್ಲದಂತೆ ಬರೆದವರಿಗೆ ₹1 ಸಾವಿರ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು. ಕೂಡಲೇ ಪೆನ್ನು ಹಾಗೂ ನೋಟ್‌ಬುಕ್‌ನಲ್ಲಿ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಪೈಪೋಟಿಗೆ ಬಿದ್ದಂತೆ ಬರೆದರು. ಕಾಲಮಿತಿಯೊಳಗೆ ತಪ್ಪಿಲ್ಲದಂತೆ ಬರೆದ ಐಜೂರು ಪ್ರೌಢಶಾಲೆಯ ವಿದ್ಯಾರ್ಥಿ ವೆಂಕಟೇಶ್‌ಗೆ ₹1 ಸಾವಿರ ನಗದು ಬಹುಮಾನ ನೀಡಿದ ಶ್ರೀನಿವಾಸ ಗೌಡ ಅವರು, ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವಂತೆ ಬೆನ್ನು ತಟ್ಟಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು, ‘ಪತ್ರಿಕೆ ಎಂದರೆ ಕೇವಲ ಸುದ್ದಿ ಕೊಡುವುದಲ್ಲ. ಆರೋಗ್ಯಕರ ಸುದ್ದಿಯ ಜೊತೆಗೆ ವಿದ್ಯಾರ್ಥಿಗಳು ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಬೇಕು ಎಂಬುದನ್ನು ಹೇಳುವ ಹೊಣೆಗಾರಿಕೆಯನ್ನು ಸಹ ಹೊಂದಿದೆ. ಅದರ ಭಾಗವಾಗಿ ಈ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ಯಾರು ಸದಾ ಎಚ್ಚರವಾಗಿರುತ್ತಾರೊ ಅವರು ಬುದ್ಧಿವಂತರಾಗುತ್ತಾರೆ. ಪರೀಕ್ಷೆಯಲ್ಲಿ ಸಾಧನೆ ಮಾಡುವವರೆಗೆ ವಿದ್ಯಾರ್ಥಿಗಳು ಎಚ್ಚರವಾಗಿರಬೇಕು. ಪ್ರಜಾವಾಣಿಯ ಮುಖಪುಟದಲ್ಲಿ ನಿಮ್ಮ ಭಾವಚಿತ್ರ ಪ್ರಕಟವಾಗುವಂತೆ ಪರೀಕ್ಷೆಯಲ್ಲಿ ಸಾಧನೆ ಮಾಡಬೇಕು’ ಎಂದು ಸ್ಫೂರ್ತಿ ತುಂಬಿದರು.

ರಾಮನಗರ ತಾಲ್ಲೂಕಿನ ಬಿಳಗುಂಬ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಎಲ್.ಸಿ. ಮಹದೇವಯ್ಯ, ರಾಮನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಶಿವರಾಮ್ ಹಾಗೂ ಚನ್ನಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಇಂಗ್ಲಿಷ್ ಶಿಕ್ಷಕ ವಸಂತ್ ಕುಮಾರ್ ಸಿ. ಅವರು ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ತರಬೇತಿ ಮತ್ತು ಶಿಕ್ಷಣ ಸಂಸ್ಥೆ) ವೆಂಕಟೇಶ್, ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ, ‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ಪ್ರಸರಣ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಜಗನ್ನಾಥ ಜೋಯಿಸ್, ಹಿರಿಯ ವ್ಯವಸ್ಥಾಪಕ ಶಂಕರ ಹಿರೇಮಠ, ವ್ಯವಸ್ಥಾಪಕ ಸಂಗಮೇಶ್, ಪ್ರಜಾವಾಣಿ ಡಿಜಿಟಲ್ ಎಡಿಟರ್ ರಾಧಾಕೃಷ್ಣ ಎಸ್. ಭಡ್ತಿ ಹಾಗೂ ತಾಲ್ಲೂಕುಗಳ ಅರೆಕಾಲಿಕ ವರದಿಗಾರರು ಇದ್ದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಮುಖ್ಯ ಶಿಕ್ಷಕ ಶಿವಸ್ವಾಮಿ ಅವರು ನಿರೂಪಣೆ ಮಾಡಿದರು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ಗಣಿತವೆಂದರೆ ಕಬ್ಬಿಣದ ಕಡಲೆಯಲ್ಲ. ಸಮಾಧಾನದಿಂದ ಸತತವಾಗಿ ಅಭ್ಯಾಸ ಮಾಡಿದರೆ ಹೆಚ್ಚು ಅಂಕ ತಂದುಕೊಡಬಲ್ಲದು. ವಿದ್ಯಾರ್ಥಿಗಳು ವೇಳಾಪಟ್ಟಿ ಹಾಕಿಕೊಂಡುಅಭ್ಯಾಸ ಮಾಡಿದರೆ ಈ ವಿಷಯದಲ್ಲಿ ಶೇ 100ರಷ್ಟು ಅಂಕಗಳನ್ನು ಸುಲಭವಾಗಿ ಪಡೆಯಬಹುದು
– ಎಲ್‌.ಸಿ. ಮಹದೇವಯ್ಯ, ಗಣಿತ ವಿಷಯದ ಸಂಪನ್ಮೂಲ ವ್ಯಕ್ತಿ
ಕಾಟಾಚಾರಕ್ಕಾಗಿ ಓದಿದರೆ ಯಾವ ವಿಷಯವೂ ತಲೆಗೆ ಹತ್ತುವುದಿಲ್ಲ. ಬದಲಿಗೆ ಇಷ್ಟಪಟ್ಟು ಓದಿದರೆ ಅದು ವರ್ಷಗಳವರೆಗೆ ನೆನಪಿನಲ್ಲಿ ಉಳಿಯುತ್ತದೆ. ನದಿ ನಗರ ಇತಿಹಾಸ ಇಸವಿ ಸೇರಿದಂತೆ ಕೆಲ ಮಾಹಿತಿಗಳನ್ನು ಕೋಡ್ ವರ್ಡ್ ಮೂಲಕ ನೆನಪಿಟ್ಟುಕೊಳ್ಳಬೇಕು
– ಬಾಬು ಕೆ.ಪಿ, ಉಪನ್ಯಾಸಕ ಡಯಟ್ ರಾಮನಗರ

ಯಶಸ್ಸಿಗೆ ಸಪ್ತಸೂತ್ರದ ಸಲಹೆ

‘ಈಗ ಕಷ್ಟಪಟ್ಟರೆ ಮಾತ್ರ ಮುಂದೆ ಸುಖವಾಗಿರಲು ಸಾಧ್ಯ. ಇಲ್ಲದಿದ್ದರೆ ಮುಂದೆ ಕೊರಗಬೇಕಾಗುತ್ತದೆ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅವರು ಯಶಸ್ಸಿಗಾಗಿ ವಿದ್ಯಾರ್ಥಿಗಳಿಗೆ ಸಪ್ತಸೂತ್ರಗಳ ಟಿಪ್ಸ್ ನೀಡಿದರು.

‘ಉತ್ತಮವಾದ ಗುರಿ ಒಳ್ಳೆಯ ಗುರುಗಳು ಶ್ರದ್ಧೆ–ಶಿಸ್ತು ಸತತ ಪ್ರಯತ್ನ ಉತ್ತಮವಾದ ಆಲೋಚನೆಗಳು ಹಾಗೂ ಆರೋಗ್ಯವಿದ್ದರೆ ಸಾಧನೆಗೆ ಮತ್ಯಾವುದರ ಅಗತ್ಯವೂ ಇಲ್ಲ. ಎಸ್‌ಎಸ್‌ಎಲ್‌ಸಿಯಲ್ಲಿ ನಾನು ಶೇ 70ರಷ್ಟ ಅಂಕ ಪಡೆದರೂ ಈ ಸ್ಥಾನಕ್ಕೆ ಬಂದಿದ್ದೇನೆ. ನಿಮ್ಮ ಸುತ್ತ ನೀವೇ ಗೋಡೆ ಹಾಕಿಕೊಂಡರೆ ಅದೊಂದು ಮೌಲ್ಯಯುತ ಜೀವನಕ್ಕೆ ದಾರಿಯಾಗುತ್ತದೆ. ಅದೇ ಬೇರೆಯವರು ಹಾಕಿದರೆ ಅದು ಜೈಲಾಗುತ್ತದೆ. ಟಿ.ವಿ ಮೊಬೈಲ್ ಸಾಮಾಜಿಕ ಜಾಲತಾಣದಿಂದ ದೂರವಿದ್ದು ಪರೀಕ್ಷಾ ಸಾಧನೆಗೆ ಒತ್ತು ನೀಡಬೇಕು. ಸ್ಪರ್ಧಾತ್ಮಕ ಜಗತ್ತಿಗೆ ಈಗಿನಿಂದಲೇ ತಯಾರಿ ನಡೆಸಬೇಕು’ ಎಂದು ಸಲಹೆ ನೀಡಿದರು.

ಸುಲಭ ಸಾಧನೆಗೆ ‘ಪ್ರಗತಿ ಪಥ’ ಈ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯು ಅಗ್ರ 10ರಲ್ಲಿ ಸ್ಥಾನ ಪಡೆಯುವಂತೆ ನಮ್ಮ ವಿದ್ಯಾರ್ಥಿಗಳು ಸಾಧನೆ ಮಾಡುತ್ತಾರೆಂಬ ಭರವಸೆ ಇದೆ’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇಲಾಖೆ ವತಿಯಿಂದ ಸಿಎಸ್‌ಆರ್‌ ನೆರವಿನಿಂದ ಹೊರತಂದಿರುವ ‘ಪ್ರಗತಿ ಪಥ’ ಪುಸ್ತಕವನ್ನು ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದು ಇದು ಪರೀಕ್ಷಾ ಸಾಧನೆಗೆ ಏಣಿಯಾಗಲಿದೆ. ಪಾಸ್ ಆಗುವುದಕ್ಕೆ ಇದೊಂದು ಪುಸ್ತಕ ಓದಿದರೆ ಸಾಕು’ ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ತಮಗಿಂತಲೂ ಚನ್ನಾಗಿ ಓದುವ ಉತ್ತಮ ಸ್ನೇಹಿತರ ಸಹವಾಸ ಮಾಡಬೇಕು. ಆಗ ಮಾತ್ರ ನೀವು ಅಂದುಕೊಂಡಿದ್ದು ಸಾಧಿಸಲು ಸಾಧ್ಯ ಎಂದು ಕಿವಿಮಾತು ಹೇಳಿದ ಗುರುಕರ್ ಅವರು ವಿದ್ಯಾರ್ಥಿ ದಿನಗಳಿಂದಿಲೂ ತಮ್ಮ ಜ್ಞಾನ ವೃದ್ದಿಗೆ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು ನೆಚ್ಚಿನ ಆಯ್ಕೆಗಳು ಎಂದು ಹೇಳಿದರು.

ಸತತ ಅಭ್ಯಾಸದಿಂದ ಯಶಸ್ಸು ‘ಸತತ ಅಭ್ಯಾಸದಿಂದ ಮಾತ್ರ ನಾವು ಯಶಸ್ಸು ಗಳಿಸಬಹುದು. ಅದಕ್ಕಾಗಿ ನಿತ್ಯ ಕನಿಷ್ಠ 10 ತಾಸು ಓದಬೇಕು. ಮುಂದೆ ನಾನೇಗಬೇಕು ಎಂಬುದನ್ನು ಎಸ್‌ಎಸ್ಎಲ್‌ಸಿ ಹಂತದಲ್ಲೇ ನಿರ್ಧರಿಸಿ ಈ ನಿಟ್ಟಿನಲ್ಲಿ ನೀಲನಕ್ಷೆ ಹಾಕಿಕೊಂಡು ಓದಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಲೇಬೇಕೆಂಬ ಗುರಿ ಬೆನ್ನತ್ತಿದ ನಾನು ಐದು ಸಲ ಫೇಲಾದರೂ ಕುಗ್ಗದೆ ಸತತ ಪ್ರಯತ್ನ ಮಾಡಿದೆ. ಅದರ ಫಲವಾಗಿ ನಾನೀಗ ನಿಮ್ಮ ಮುಂದೆ ಐಎಎಸ್ ಅಧಿಕಾರಿಯಾಗಿ ನಿಂತಿದ್ದೇನೆ. ಶಿಕ್ಷಣ ಮಾತ್ರ ನಮ್ಮ ಬದುಕಿನ ಗತಿಯನ್ನು ಬದಲಿಸಬಲ್ಲದು. ವಿದ್ಯಾರ್ಥಿ ದೆಸೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಾಧನೆ ಮಾಡುವ ಮೂಲಕ ಮುಂದೆ ಬದುಕನ್ನ ಉತ್ತಮವಾಗಿ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕನಿಷ್ಠ ಅಂಕದ ಮಿತಿ ಬದಲಾಗಲಿ

‘ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಉತ್ತೀರ್ಣಕ್ಕೆ ಕನಿಷ್ಠ 33 ಅಂಕಗಳನ್ನು ನಿರ್ಧರಿಸಿರುವುದು ದುರಂತ. ವಿದ್ಯಾರ್ಥಿಗಳಿಗೆ 70 ಅಂಕ ತೆಗೆಯುವಷ್ಟು ಸಾಮರ್ಥ್ಯವಿದೆ. ಅದಕ್ಕೆ ಅವರನ್ನು ಅಣಿಗೊಳಿಸಬೇಕು. ವಿದ್ಯಾರ್ಥಿಗಳು ಕನಿಷ್ಠ ಅಂಕಕ್ಕೆ ತೃಪ್ತರಾಗದೆ ಕನಿಷ್ಠ 90 ಅಂಕಗಳನ್ನು ಪಡೆಯುವ ಗುರಿಯೊಂದಿಗೆ ಅಭ್ಯಾಸ ಮಾಡಬೇಕು’ ಎಂದು ಜ್ಞಾನ ವಿಕಾಸ್ ವಿದ್ಯಾಸಂಘದ ಸಂಸ್ಥಾಪಕ ಅಧ್ಯಕ್ಷ ಸಿ.ಎಂ. ಲಿಂಗಪ್ಪ ಅವರು ವಿದ್ಯಾರ್ಥಿಗಳ ಪರೀಕ್ಷೆಗೆ ಶುಭ ಹಾರೈಸಿದರು.

ಕಾಲೇಜು ದಿನಗಳಿಂದಲೂ ಇಂದಿನವರೆಗೆ ‘ಪ್ರಜಾವಾಣಿ’ ಪತ್ರಿಕೆಯು ನನ್ನ ನೆಚ್ಚಿನ ಸುದ್ದಿ ಸಂಗಾತಿ ಎಂದು ನೆನೆದ ಅವರು ತಾವು ಜಪಾನ್‌ನಲ್ಲಿದ್ದಾಗಲೂ ಅಲ್ಲಿಗೆ ಪತ್ರಿಕೆ ತರಿಸಿಕೊಂಡು ಓದಿದ್ದನ್ನು ನೆನಪಿಸಿಕೊಂಡರು.

‘ಹೆತ್ತವರು ಗುರುಗಳಿಗೆ ಕೀರ್ತಿ ತನ್ನಿ’

‘ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸಾಧನೆ ಮಾಡುವ ಮೂಲಕ ತಮ್ಮನ್ನು ಹೆತ್ತವರು ಮತ್ತು ಕಲಿಸಿದ ಗುರುಗಳಿಗೆ ಕೀರ್ತಿ ತರಬೇಕು. ತಮ್ಮ ಮಕ್ಕಳು ತಮಗಿಂತಲೂ ಚನ್ನಾಗಿ ಬದುಕಬೇಕೆಂದು ಬಯಸುವ ತಂದೆ–ತಾಯಿ ಹಾಗೂ ನನ್ನ ಶಿಷ್ಯ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಬೇಕೆಂದು ನಿರೀಕ್ಷಿಸುವ ಗುರುಗಳ ಪರಿಶ್ರಮವನ್ನು ವಿದ್ಯಾರ್ಥಿಗಳು ಅರಿತು ಪರೀಕ್ಷಾ ಸಾಧನೆಗೆ ಶಪಥ ಮಾಡಬೇಕು. ಮಕ್ಕಳಿಗಾಗಿ ತಂದೆ–ತಾಯಿ ಬಿಸಿಲು–ಮಳೆ ಎನ್ನದೆ ದುಡಿಯುತ್ತಾರೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಗಂಟೆಗಟ್ಟಲೆ ನಿಂತು ಪಾಠ ಮಾಡುವ ಗುರುಗಳಿಗೆ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದ ಉಡುಗೊರೆ ಕೊಡಬೇಕು. ಮೊಬೈಲ್ ಸಿನಿಮಾ ಗೀಳು ಬಿಡಬೇಕು. ಕಾಲಹರಣ ಮಾಡದೆ ಪ್ರೀತಿ-ಪ್ರೇಮದ ಮೋಹಕ್ಕೆ ಸಿಲುಕದೆ ಚನ್ನಾಗಿ ಓದಿ ಮುಂದಿನ ಬದುಕಿಗೆ ಭದ್ರ ಬುನಾದಿ ಹಾಕಿಕೊಳ್ಳಬೇಕು. ಸಾಧಿಸುವ ಮನಸ್ಸಿದ್ದವರಿಗೆ ಸಾಕಷ್ಟು ಸಮಯ ಬೇಕಿಲ್ಲ. ಕಡಿಮೆ ಸಮಯವಿದೆ ಎಂದು ಸುಮ್ಮನೆ ಕೂರದೆ ಈಗಿನಿಂದಲೇ ಓದಲು ಶುರು ಮಾಡಿದರೆ ಸಾಧನೆಯ ಶಿಖರ ಏರಬಲ್ಲಿರಿ. ನಿಮ್ಮೊಳಗಿನ ಜ್ಞಾನದ ಬಗ್ಗೆ ನಿವೇ ಅಚ್ಚರಿಪಡುವಂತಹ ಫಲಿತಾಂಶ ನಿಮ್ಮದಾಗಲಿದೆ. ನಿಮ್ಮ ಸಾಧನೆಯು ಇತರರಿಗೂ ಸ್ಫೂರ್ತಿಯಾಗಲಿದೆ’ ಎಂದು ಹೈಕೋರ್ಟ್ ವಕೀಲರೂ ಆದ ಸ್ಫೂರ್ತಿದಾಯಕ ಮಾತುಗಾರ ಬಿ. ಸುರೇಶ್ ಗೌಡ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ವಿದ್ಯಾರ್ಥಿಗಳ ಅಭಿಪ್ರಾಯಗಳು

‘ಪ್ರಜಾವಾಣಿ’ಯಲ್ಲಿ ಪ್ರಟಕವಾಗುವ ಎಸ್‌ಎಸ್ಎಲ್‌ಸಿ ಪರೀಕ್ಷಾ ದಿಕ್ಸೂಚಿಯನ್ನು ನಾನು ತಪ್ಪದೆ ಓದುತ್ತೇನೆ. ಪರೀಕ್ಷೆ ತಯಾರಿಗೆ ದಿಕ್ಸೂಚಿ ಜೊತೆಗೆ ಈ ಕಾರ್ಯಾಗಾರವು ಪರೀಕ್ಷಾ ಸಾಧನೆಗೆ ನನಗೆ ಮತ್ತಷ್ಟು ಪ್ರೇರಣೆ ನೀಡಿದೆ
– ಮಾನ್ಯ, ಜಿಜಿಜೆಸಿ ಪ್ರೌಢಶಾಲೆ ರಾಮನಗರ
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಡಿ.ಸಿ ಸರ್ ಜಿ.ಪಂ.ಸಿಇಒ ಸರ್ ಎಸ್‌ಪಿ ಸರ್ ಅವರು ನಮ್ಮೊಂದಿಗೆ ಮುಕ್ತವಾಗಿ ಆಡಿದ ಮಾತುಗಳು ನನಗೆ ಸ್ಫೂರ್ತಿ ತುಂಬಿದವು. ಸುರೇಶ ಗೌಡ ಸರ್ ಮಾತುಗಳು ಪರೀಕ್ಷಾ ಸಾಧನೆಗೆ ಉತ್ಸಾಹ ನೀಡಿವೆ.
– ಸಿಂಚನ, ಭಾರತೀಯ ಸಂಸ್ಕೃತಿ ವಿದ್ಯಾಪೀಠ ಪ್ರೌಢಶಾಲೆ ರಾಮನಗರ
ಪರೀಕ್ಷೆಗೆ ವ್ಯವಸ್ಥಿತವಾಗಿ ಯೋಜನೆ ಹಾಕಿಕೊಂಡು ಒತ್ತಡ ಮಾಡಿಕೊಳ್ಳದೆ ಹೇಗೆ ಓದಬೇಕು ಎಂಬುದು ಗೊತ್ತಾಯಿತು. ಉನ್ನತ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳ ಮಾತುಗಳು ಸಾಧನೆಯ ಮಾರ್ಗ ತೋರಿದವು. ಕಾರ್ಯಾಗಾರದಿಂದ ಹೆಚ್ಚು ಉಪಯುಕ್ತವಾಯಿತು
– ಪ್ರಗತಿ ಕುಮಾರಿ, ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆ ಬಿಡದಿ
ಕಾರ್ಯಾಗಾರದಲ್ಲಿ ಭಾಗವಹಿಸಿದ ಬಳಿಕ ನನ್ನ ಆತ್ಮವಿಶ್ವಾಸ ಇಮ್ಮಡಿಗೊಂಡಿದೆ. ಪರೀಕ್ಷಾ ಭಯ ದೂರವಾಗಿದೆ. ಯಾವುದೇ ಆತಂಕವಿಲ್ಲದೆ ನಿರಾಳವಾಗಿ ಪರೀಕ್ಷೆ ಎದುರಿಸಲು ಕಾರ್ಯಾಗಾರವು ಸ್ಫೂರ್ತಿ ತುಂಬಿದೆ. ಚನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆಯುವೆ
- ಪರಿಮಳ, ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆ ಬಿಡದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.