ADVERTISEMENT

ಸುಳ್ಳು ಪ್ರಕರಣ ನೆಪದಲ್ಲಿ ₹1.50 ಲಕ್ಷ ವಸೂಲಿ: ಕಗ್ಗಲೀಪುರ PSI ಹರೀಶ್ ಅಮಾನತು

ಅಂಗಡಿ ಮಾಲೀಕನನ್ನು ಠಾಣೆಗೆ ಕರೆದೊಯ್ದು ಬೆದರಿಸಿದ್ದ ಪಿಎಸ್‌ಐ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 4:36 IST
Last Updated 17 ಡಿಸೆಂಬರ್ 2025, 4:36 IST
<div class="paragraphs"><p>ಹರೀಶ್</p></div>

ಹರೀಶ್

   

ರಾಮನಗರ: ಜ್ಯೂಸ್ ಅಂಗಡಿ ಮಾಲೀಕನನ್ನು ಪ್ರಕರಣ ದಾಖಲಾಗಿದೆ ಎಂದು ಬೆದರಿಸಿ ಪ್ರಕರಣ ಮುಚ್ಚಿ ಹಾಕುವುದಾಗಿ ಆತನಿಂದ ₹1.50 ಲಕ್ಷ ವಸೂಲಿ ಮಾಡಿದ ಆರೋಪ ಮೇಲೆ ಕಗ್ಗಲೀಪುರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಹರೀಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅಮಾನತು ಮಾಡಿದ್ದಾರೆ.

ಹಣ ವಸೂಲಿ ಆರೋಪ ಬಂದಾಗ ಚನ್ನಪಟ್ಟಣ ಪುರ ಪೊಲೀಸ್ ಠಾಣೆಯಲ್ಲಿದ್ದ ಹರೀಶ್, ನಂತರ ಕಗ್ಗಲೀಪುರ ಠಾಣೆ ವರ್ಗಾವಣೆಗೊಂಡಿದ್ದರು. ಕರ್ತವ್ಯಕ್ಕೆ ಹಾಜರಾದ ಕೆಲವೇ ದಿನಗಳಲ್ಲಿ ಅಮಾನತುಗೊಂಡಿದ್ದಾರೆ.

ADVERTISEMENT

ಕನಕಪುರ ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿ ಎದುರು ಜ್ಯೂಸ್ ಅಂಗಡಿ ಹೊಂದಿರುವ ರಾಜೇಶ್ ಅವರಿಗೆ ಅ. 29ರಂದು ಕರೆ ಮಾಡಿದ್ದ ಹರೀಶ್, ‘ನಿಮ್ಮ ವಿರುದ್ಧ ಎಫ್ಐಆರ್ ದಾಖಲಾಗಿದೆ’ ಎಂದು ಬೆದರಿಸಿದ್ದರು. ನಂತರ ಬಲವಂತವಾಗಿ ಚನ್ನಪಟ್ಟಣಕ್ಕೆ ಕರೆದೊಯ್ದು  ಅಕ್ರಮವಾಗಿ ಬಂಧನದಲ್ಲಿಟ್ಟಿದ್ದರು. ಪ್ರಕರಣ ಮುಚ್ಚಿ ಹಾಕುವುದಾಗಿ ಹೇಳಿ ₹1.50 ಲಕ್ಷ ಹಣ ದೋಚಿದ್ದರು ಎಂದು ರಾಜೇಶ್ ಆರೋಪಿಸಿದ್ದರು.

ತಮ್ಮಿಂದ ‍ಪಿಎಸ್‌ಐ ಹಣ ಸುಲಿಗೆ ಮಾಡಿದ ಕುರಿತು ರಾಜೇಶ್ ಅವರು ಗೃಹ ಸಚಿವ ಡಾ.ಜಿ. ಪರಮೇಶ್ವರ್, ಕೇಂದ್ರ ವಲಯದ ಐಜಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಕೊಟ್ಟಿದ್ದರು. ಈ ವಿಷಯ ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು.

ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್‌ಪಿ ಶ್ರೀನಿವಾಸ ಗೌಡ ಅವರು, ಈ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಸಿಇಎನ್ ಡಿವೈಎಸ್ಪಿ ಕೆಂಚೇಗೌಡ ಅವರಿಗೆ ಸೂಚಿಸಿದ್ದರು.

ಡಿವೈಎಸ್ಪಿ ನೀಡಿದ ವರದಿ ಆಧರಿಸಿ ಶ್ರೀನಿವಾಸ ಗೌಡ ಅವರು ಇಲಾಖಾ ವಿಚಾರಣೆ ಕಾಯ್ದಿರಿಸಿ ಸೋಮವಾರ ಸಬ್ ಇನ್‌ಸ್ಪೆಕ್ಟರ್ ಹರೀಶ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಚನ್ನಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿದ್ದಾಗ ಅಂಗಡಿ ಮಾಲೀಕನಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ಸದ್ಯ ಕಗ್ಗಲೀಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‌ಐ ಹರೀಶ್ ಅವರನ್ನು ಅಮಾನತು ಮಾಡಲಾಗಿದೆ
– ಆರ್. ಶ್ರೀನಿವಾಸ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.