ADVERTISEMENT

ಲೋಕೋಪಯೋಗಿ ವಿಶೇಷ ವಿಭಾಗ ವಿಜಯಪುರಕ್ಕೆ ಸ್ಥಳಾಂತರ: ಸಂಕಷ್ಟಕ್ಕೆ ಸಿಲುಕಿದ ನೌಕರರು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 2:21 IST
Last Updated 1 ನವೆಂಬರ್ 2025, 2:21 IST
ಚನ್ನಪಟ್ಟಣದಲ್ಲಿ ಕಾರ್ಯನಿರ್ವಿಸುತ್ತಿದ್ದ ಲೋಕೋಪಯೋಗಿ ಇಲಾಖೆಯ ವಿಶೇಷ ವಿಭಾಗ
ಚನ್ನಪಟ್ಟಣದಲ್ಲಿ ಕಾರ್ಯನಿರ್ವಿಸುತ್ತಿದ್ದ ಲೋಕೋಪಯೋಗಿ ಇಲಾಖೆಯ ವಿಶೇಷ ವಿಭಾಗ   

ಚನ್ನಪಟ್ಟಣ: ನಗರದಲ್ಲಿ ಕಳೆದ ಏಳು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಲೋಕೋಪಯೋಗಿ ಇಲಾಖೆ ವಿಶೇಷ ವಿಭಾಗವನ್ನು ಅಲ್ಲಿನ ಅಧಿಕಾರಿಗಳು ಮತ್ತು ನೌಕರರ ಸಮೇತ ವಿಜಯಪುರ ಜಿಲ್ಲೆಗೆ ಸ್ಥಳಾಂತರಿಸಲು ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಈ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ.

ಲೋಕೋಪಯೋಗಿ ಇಲಾಖೆ (ಸೇವೆಗಳು-ಎ) ಅಧೀನ ಕಾರ್ಯದರ್ಶಿ ರಘುನಾಥಗೌಡ ಎಸ್.ಪಾಟೀಲ ಅವರು ಸೆಪ್ಟೆಂಬರ್‌ನಲ್ಲಿ ಹೊರಡಿಸಿದ ಈ ಆದೇಶದ ಪ್ರತಿಯಲ್ಲಿ ‘ಇತ್ತೀಚಿನ ದಿನಗಳಲ್ಲಿ ಈ ವಿಶೇಷ ವಿಭಾಗಕ್ಕೆ ಕಾರ್ಯಭಾರ ಇಲ್ಲದ ಕಾರಣ ವಿಭಾಗವನ್ನು ವಿಜಯಪುರ ಜಿಲ್ಲೆಗೆ ಸ್ಥಳಾಂತರಿಸುವ ನಿರ್ಧಾರ ಸರ್ಕಾರ ಕೈಗೊಂಡಿದೆ’ ಎಂದು ತಿಳಿಸಲಾಗಿದೆ.

ಹಿನ್ನೆಲೆ: 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಶಾಸಕರಾಗಿ ಆಯ್ಕೆಯಾಗಿ ನಂತರ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ₹800 ಕೋಟಿ ಅನುದಾನ ನೀಡಿದ್ದರು. ಇದರಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಕಾರ್ಯಭಾರ ಒತ್ತಡ ಕಡಿಮೆ ಮಾಡಲು 2019ರಲ್ಲಿ ಈ ವಿಶೇಷ ವಿಭಾಗ ತೆರೆಯಲಾಗಿತ್ತು. ಈ ವಿಭಾಗ ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಸರ್ಕಾರಿ ವಸತಿ ನಿಲಯದಲ್ಲಿ ಕಾರ್ಯನಿರ್ವಹಿಸುತ್ತಿತ್ತು.

ADVERTISEMENT

ಸ್ಥಳಾಂತರಕ್ಕೆ ಕಾರಣ: ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಆಗಸ್ಟ್‌ನಲ್ಲಿ ಬರೆದ ಪತ್ರದಲ್ಲಿ ‘ವಿಭಾಗಕ್ಕೆ ಕಾರ್ಯಭಾರ ಇಲ್ಲದ ಕಾರಣ ಅದನ್ನು ಅವಶ್ಯ ಇರುವೆಡೆಗೆ ಸ್ಥಳಾಂತರಿಸಬೇಕು’ ಎಂದು ಕೋರಿದ್ದರು. ಸಚಿವರ ಶಿಫಾರಸು ಮೇರೆಗೆ ವಿಜಯಪುರ ಜಿಲ್ಲೆಗೆ ಸ್ಥಳಾಂತರಿಸಲಾಯಿತು. ಸ್ಥಳಾಂತರಗೊಂಡ ವಿಶೇಷ ಉಪವಿಭಾಗದ ಎಲ್ಲ ಕಾರ್ಯಭಾರವನ್ನು ಚನ್ನಪಟ್ಟಣದ ಹಾಲಿ ಉಪವಿಭಾಗಕ್ಕೆ ಹಸ್ತಾಂತರಿಸಲು ಆದೇಶಿಸಲಾಗಿದೆ.

ಪರಿಣಾಮ: ಈ ನಿರ್ಧಾರದಿಂದ ವಿಶೇಷ ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಳು ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ (ನಾಲ್ಕು ಮಹಿಳಾ ಸಿಬ್ಬಂದಿ ಸೇರಿದಂತೆ) ಸಂಕಷ್ಟಕ್ಕೊಳಗಾಗಿದ್ದಾರೆ. ನವೆಂಬರ್ ಮೊದಲ ವಾರದಿಂದಲೇ ಅವರು ವಿಜಯಪುರಕ್ಕೆ ಸ್ಥಳಾಂತರಗೊಂಡು ಅಲ್ಲಿ ಕಾರ್ಯನಿರ್ವಹಿಸಬೇಕಾಗಿದೆ.

ವಿಭಾಗದಲ್ಲಿ ಇನ್ನೂ ₹10 ಕೋಟಿ ಮೌಲ್ಯದ ಕೆಲಸಗಳು ಬಾಕಿ ಇದ್ದವು. ‘ಕಾರ್ಯಭಾರ ಇಲ್ಲ’ ಎಂಬ ಕಾರಣ ನೀಡಿ ಸರ್ಕಾರ ಧೃಢ ನಿರ್ಧಾರ ತೆಗೆದುಕೊಂಡಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಸಿಬ್ಬಂದಿಯೊಬ್ಬರು, ‘ವಿಭಾಗದ ಅಧಿಕಾರಿಗಳನ್ನು ತನ್ನ ಹತೋಟಿಯಲ್ಲಿ ಇಡಲು ಪ್ರಯತ್ನಿಸಿದ ಪ್ರಭಾವಿ ವ್ಯಕ್ತಿಯೊಬ್ಬರು ಅದು ಸಾಧಿಸದಾಗ ತಮ್ಮ ಸ್ವಹಿತಕ್ಕಾಗಿ ಈ ವಿಭಾಗ ಸ್ಥಳಾಂತರಿಸಲು ತೆರೆಮರೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.