ಕನಕಪುರ: ತಾಲ್ಲೂಕಿನಲ್ಲಿ ಈ ವರ್ಷ ನಿಗದಿತ ಸಮಯ ಮತ್ತು ಗುರಿಯಂತೆ ಸರಿಯಾಗಿ ರಾಗಿ ಬಿತ್ತನೆ ಪೂರ್ಣಗೊಂಡಿದೆ. ವಾಡಿಕೆಯಂತೆ ಉತ್ತಮ ಮಳೆಯಾಗಿದ್ದು ಸಂತಸಗೊಂಡಿರುವ ರೈತರು ಈ ಬಾರಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.
ಬಿತ್ತನೆ ಮಾಡಿದ ರಾಗಿ ಮೊಳಕೆ ಒಡೆದು ಪೈರು ಚಿಗುರಿದ್ದು, ಕಳೆ ತೆಗೆದು ಅರಗಣೆ ಮಾಡುವ ಚಟುವಟಿಕೆಯಲ್ಲಿ ರೈತರು ನಿರತರಾಗಿದ್ದಾರೆ.
ಕನಕಪುರ ತಾಲ್ಲೂಕಿನಲ್ಲಿ ಒಟ್ಟು 18ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಗುರಿ ಪೈಕಿ ಈಗಾಗಲೇ 17,648 ಹೆಕ್ಟೇರ್ ಭೂಮಿಯಲ್ಲಿ ರಾಗಿ ಬಿತ್ತನೆ ಕಾರ್ಯ ಮುಗಿದಿದೆ.
ವಾಡಿಕೆಯಂತೆ ರಾಗಿ ಬಿತ್ತನೆ ಕಾರ್ಯಕ್ಕೆ ಆಗಸ್ಟ್ 16 ಕೊನೆಯಾಗಿದ್ದು, ಅಷ್ಟರೊಳಗೆ ಬಿತ್ತನೆ ಕಾರ್ಯವು ಪೂರ್ಣಗೊಳ್ಳಬೇಕು. ಈ ಸಮಯದಲ್ಲಿ ಬಿತ್ತನೆ ಮಾಡಿದರೆ ಹದವಾಗಿ ಮಳೆ ಬಿದ್ದರೆ ರಾಗಿ ಚೆನ್ನಾಗಿ ಮೊಳಕೆ ಒಡೆದು ಪೈರು ಬರುತ್ತದೆ.
ಆ.15ರ ಒಳಗೆ ತಾಲ್ಲೂಕಿನಲ್ಲಿ ನಿಗದಿತ ಗುರಿಯಂತೆ ಶೇಕಡ 95ರಷ್ಟು ರಾಗಿ ಬಿತ್ತನೆ ಕಾರ್ಯ ಮುಗಿದಿದೆ. ಉಯ್ಯಂಬಳ್ಳಿ ಹೋಬಳಿಯಲ್ಲಿ ಈ ಬಾರಿ ಮುಂಗಾರು ಮಳೆ ಸ್ವಲ್ಪ ತಡವಾಗಿ ಬಿದ್ದ ಕಾರಣ ಅಲ್ಲಿ 3,106 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆಗಬೇಕಿದ್ದು ಈಗ 2,850 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.ಇನ್ನೂ 256 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಕಾರ್ಯ ಬಾಕಿ ಉಳಿದಿದೆ.
ಈ ಬಾರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿ ಸಮಯಕ್ಕೆ ಸರಿಯಾಗಿ ಬಿತ್ತನೆ ಆಗಿದೆ. ಕೃಷಿ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ರೈತರಿಗೆ ಸಲಹೆ ಸೂಚನೆ ನೀಡಬೇಕು. ರಿಯಾಯಿತಿ ದರದಲ್ಲಿ ಸುಲಭವಾಗಿ ಕೃಷಿ ಯಂತ್ರೋಪಕರಣ ಬಾಡಿಗೆಗೆ ಸಿಗುವಂತೆ ಮಾಡಬೇಕು. ರಸಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಬೇಕುರವಿರೈತ ಬೊಮ್ಮನಹಳ್ಳಿ ಸಾತನೂರು ಹೋಬಳಿ ಕನಕಪುರ ತಾಲ್ಲೂಕು.
ರಸಗೊಬ್ಬರ ಬೀಜ ಕೊರತೆ ಇಲ್ಲ
ನಿರೀಕ್ಷೆಯಂತೆ ತಾಲ್ಲೂಕಿನಲ್ಲಿ ಸಮಯಕ್ಕೆ ಸರಿಯಾಗಿ ಹದ ಮಳೆಯಾಗಿದೆ. ಶೇಕಡ 95ರಷ್ಟು ರಾಗಿ ಬಿತ್ತನೆ ಕಾರ್ಯ ಮುಗಿದಿದೆ. ಉಯ್ಯಂಬಳ್ಳಿ ಹೋಬಳಿಯಲ್ಲಿ ಮಳೆ ತಡವಾಗಿದ್ದರಿಂದ ಬಿತ್ತನೆ ಕಾರ್ಯ ಈಗ ನಡೆಯುತ್ತಿದೆ. ತಾಲ್ಲೂಕಿನಲ್ಲಿ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಂಗ್ರಹಿಸಲಾಗಿತ್ತು. ರಿಯಾಯಿತಿ ದರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಇನ್ನೂ ಬಿತ್ತನೆ ಬೀಜ ಉಳಿದಿದೆ. ರಸಗೊಬ್ಬರ ಕೊರತೆ ಭಾರದಂತೆ ಮುಂಜಾಗ್ರತ ಕ್ರಮವಾಗಿ ದಾಸ್ತಾನು ಮಾಡಲಾಗಿದೆ. 542 ಟನ್ ಯುರಿಯಾ 204 ಟನ್ ಕಾಂಪ್ಲೆಕ್ಸ್ 22 ಟನ್ ಡಿಎಪಿ ಮೂರು ಟನ್ ಎಂಓಪಿ 10.15 ಟನ್ ಎಸ್ಎಸ್‌ಪಿ ದಾಸ್ತಾನು ಇದೆ. ರೈತರು ರಾಗಿ ಬೆಳೆಗೆ ಹರಳು ಯೂರಿಯಾ ಬದಲಾಗಿ ನ್ಯಾನೊ ಯೂರಿಯ ಬಳಸಬೇಕು. ಅದರಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ. ಯೂರಿಯಾ ಬಳಸಿದರೆ ಮಳೆ ಬಿದ್ದಾಗ ಮಣ್ಣಿನಲ್ಲಿ ಕೊಚ್ಚಿ ಹೋಗಿ ಹಳ್ಳ ಕೆರೆ ಕುಂಟೆ ಸೇರುತ್ತದೆ.
-ರಾಧಾಕೃಷ್ಣ ಸಹಾಯಕ ಕೃಷಿ ನಿರ್ದೇಶಕ ಕೃಷಿ ಇಲಾಖೆ ಕನಕಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.