ರಾಮನಗರ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸ ತಾಣವಾಗಿರುವ ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ಬೆಟ್ಟದ ಪಕ್ಕದ ಬೆಟ್ಟದಲ್ಲಿ ಕರಡಿಯೊಂದು ತನ್ನ ಮರಿಯೊಂದಿಗೆ ಆಟವಾಡುತ್ತಿರುವ ದೃಶ್ಯವು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಟ್ಟದ ತುದಿಯಲ್ಲಿ ತಾಯಿಯೊಂದಿಗೆ ಚಿನ್ನಾಟವಾಡುತ್ತಿರುವ ಮರಿಯ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೆಟ್ಟದ ಸೌಂದರ್ಯವನ್ನು ಸೆರೆ ಹಿಡಿಯುವುದಕ್ಕಾಗಿ ಹವ್ಯಾಸಿ ಛಾಯಾಗ್ರಾಹಕರೊಬ್ಬರು ಡ್ರೋನ್ ಕ್ಯಾಮೆರಾವನ್ನು ಬೆಟ್ಟದ ಮೇಲಕ್ಕೆ ಹಾರಿಸಿದ್ದಾಗ ಈ ದೃಶ್ಯ ಕಂಡಿದೆ.
ಕ್ಯಾಮೆರಾವು ಬೆಟ್ಟದ ತುದಿ ತಲುಪಿದಾಗ ಮರಿಯು ತನ್ನ ತಾಯಿಯೊಂದಿಗೆ ಆಟವಾಡುತ್ತಿತ್ತು. ಅದನ್ನು ಗಮನಿಸಿದ ಛಾಯಾಗ್ರಾಹಕ ಕ್ಯಾಮೆರಾವನ್ನು ಕರಡಿಗಳ ಸಮೀಪಕ್ಕೆ ಸ್ವಲ್ಪ ಇಳಿಸಿದ್ದಾನೆ. ಕ್ಯಾಮೆರಾದ ಶಬ್ದಕ್ಕೆ ಬೆದರಿದ ತಾಯಿ ಕರಡಿ ಸಮೀಪದ ಕಲ್ಲಿನ ಪೊಟರೆಯೊಳಕ್ಕೆ ಮರಿಯೊಂದಿಗೆ ಸೇರಿಕೊಂಡಿತು.
ತಾಲ್ಲೂಕಿನ ರೇವಣಸಿದ್ದೇಶ್ವರ ಬೆಟ್ಟ, ಹಂದಿಗುಂದಿ ಬೆಟ್ಟ, ರಾಮದೇವರ ಬೆಟ್ಟ ಸೇರಿದಂತೆ ತಾಲ್ಲೂಕಿನಲ್ಲಿರುವ ಬಹುತೇಕ ಅರಣ್ಯ ಪ್ರದೇಶದಲ್ಲಿರುವ ಬೆಟ್ಟಗಳು ಕರಡಿಗಳ ಆವಾಸಸ್ಥಾನವಾಗಿವೆ. ಆಹಾರ ಅರಸಿ ಆಗಾಗ ಗ್ರಾಮಗಳಲ್ಲೂ ಕಾಣಿಸಿಕೊಳ್ಳುವ ಕರಡಿಗಳು, ಮನುಷ್ಯರ ಮೇಲೂ ದಾಳಿ ನಡೆಸುವುದು ಸಾಮಾನ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.