ADVERTISEMENT

ಮತ್ತೆ ರಂಗೇರಲಿದೆ ರಾಮನಗರ ರಾಜಕಾರಣ

ಮಾರ್ಚ್‌ನಲ್ಲಿ ಆರೋಗ್ಯ ವಿ.ವಿ.ಗೆ ಭೂಮಿಪೂಜೆ; ಮೇಕೆದಾಟು ಪಾದಯಾತ್ರೆಗೂ ಮರು ಚಾಲನೆ ಸಾಧ್ಯತೆ

ಆರ್.ಜಿತೇಂದ್ರ
Published 27 ಜನವರಿ 2022, 12:07 IST
Last Updated 27 ಜನವರಿ 2022, 12:07 IST
ಎಚ್‌.ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್‌, ಸಿಪಿ ಯೋಗೇಶ್ವರ್‌, ಆಶ್ವತ್ಥ ನಾರಾಯಣ
ಎಚ್‌.ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್‌, ಸಿಪಿ ಯೋಗೇಶ್ವರ್‌, ಆಶ್ವತ್ಥ ನಾರಾಯಣ    

ರಾಮನಗರ: ಕೋವಿಡ್ ಪ್ರಕರಣಗಳು ಇಳಿಯುವುದನ್ನೇ ಮೂರು ಪ್ರಮುಖ ರಾಜಕೀಯ ಪಕ್ಷಗಳು ಕಾಯತೊಡಗಿದ್ದು, ಮಾರ್ಚ್‌ನಲ್ಲಿ ಜಿಲ್ಲೆಯ ರಾಜಕಾರಣ ಮತ್ತಷ್ಟು ರಂಗೇರುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಪ್ರತಿಪಕ್ಷವಾದ ಕಾಂಗ್ರೆಸ್ ಕೋವಿಡ್ ಸಂಖ್ಯೆ ಇಳಿಯುವುದನ್ನೇ ಕಾಯುತ್ತಿದೆ. ಅಂದುಕೊಂಡಂತೆ ನಡೆದಲ್ಲಿ ಮಾರ್ಚ್‌ ಆರಂಭದಲ್ಲೇ ಮೇಕೆದಾಟು ಪಾದಯಾತ್ರೆಗೆ ಮರು ಚಾಲನೆ ನೀಡಲು ಆಲೋಚಿಸುತ್ತಿದೆ. ರಾಮನಗರದಿಂದ ಬೆಂಗಳೂರುವರೆಗೆ ಪಾದಯಾತ್ರೆ ಮುಂದುವರಿಸಿ ಅಲ್ಲಿ ಶಕ್ತಿ ಪ್ರದರ್ಶನ ಮಾಡುವುದು. ಇದೇ ಯಶಸ್ಸನ್ನೇ ಮುಂದುವರಿಸಿಕೊಂಡು ‘ಉತ್ತರದ ದಂಡಯಾತ್ರೆ’ಗೂ ಸಿದ್ಧತೆ ಮಾಡಿಕೊಳ್ಳುವ ಉದ್ದೇಶ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಒತ್ತಾಯಿಸಿ ಇದೇ ತಿಂಗಳ 9ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕನಕಪುರ ತಾಲ್ಲೂಕಿನ ಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಆರಂಭಗೊಂಡಿತ್ತು. ಆದರೆ ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳದ ಕಾರಣಕ್ಕೆ ಐದನೇ ದಿನಕ್ಕೆ ರಾಮನಗರದಲ್ಲೇ ಈ ನಡಿಗೆ ಮೊಟಕುಗೊಂಡಿತು.

ADVERTISEMENT

ಡಿ.ಕೆ. ಶಿವಕುಮಾರ್‌ಗೆ ಈ ಪಾದಯಾತ್ರೆ ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ. ಮತ್ತೆ ರಾಮನಗರದಿಂದ ನಡಿಗೆ ಆರಂಭ ಎಂದು ಜ.13ರಂದೇ ಅವರು ಘೋಷಣೆ ಮಾಡಿದ್ದಾರೆ. ಹಿಂದಿಗಿಂತ ಹೆಚ್ಚು ಜನಬಲ ಪ್ರದರ್ಶನದ ಮೂಲಕ ಸ್ವಂತ ಜಿಲ್ಲೆಯಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಎದುರು ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ಧಪಡಿಸುವುದು. ಹಳೇ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್‌ ಶಕ್ತಿ ವೃದ್ಧಿಸಿಕೊಳ್ಳುವ ಯೋಜನೆಯೂ
ಇದೆ.

ಬಿಜೆಪಿ ಪ್ರತಿತಂತ್ರ

ದಶಕದಿಂದ ನನೆಗುದಿಗೆ ಬಿದ್ದಿರುವ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ ಹಾಗೂ ಆರೋಗ್ಯ ನಗರಿ ನಿರ್ಮಾಣಕ್ಕೆ ಮಾರ್ಚ್‌ ಮೊದಲ ವಾರದಲ್ಲೇ ಚಾಲನೆ ನೀಡಲು ಬಿಜೆಪಿ ಸರ್ಕಾರ ತಯಾರಾಗಿದೆ. ಈ ಮೂಲಕ ಡಿಕೆಶಿ ಊರಲ್ಲಿ ಅವರಿಗೇ ಟಾಂಗ್‌ ನೀಡಲು ತೆರೆಮರೆಯ ಸಿದ್ಧತೆ ನಡೆದಿದೆ.

ಇದೇ ತಿಂಗಳ 3ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಮನಗರದಲ್ಲಿ ಪಾಲ್ಗೊಂಡ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಹಾಗೂ ಸಂಸದ ಡಿ.ಕೆ. ಸುರೇಶ್‌ ಜಟಾಪಟಿ ನಡೆಸಿದ್ದರು. ಇದರಿಂದ ಮುಖ್ಯಮಂತ್ರಿಗಳು ಮುಜುಗರ ಅನುಭವಿಸಿದ್ದರು. ಇದಕ್ಕೆ ಉತ್ತರ ಎಂಬಂತೆ ಮಾರ್ಚ್‌ನಲ್ಲಿ ರಾಜೀವ್‌ಗಾಂಧಿ ವಿ.ವಿ. ಕ್ಯಾಂಪಸ್ ನಿರ್ಮಾಣಕ್ಕೆ ಅವರೇ ಭೂಮಿ ಪೂಜೆ ನೆರವೇರಿಸಲಿದ್ದಾರೆ.

ಎಚ್‌.ಡಿ. ಕುಮಾರಸ್ವಾಮಿ ಅವರು ಜೆಡಿಎಸ್‌–ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭ ರಾಮನಗರದಲ್ಲಿ ಆರೋಗ್ಯ ವಿ.ವಿ. ಕ್ಯಾಂಪಸ್‌ ನಿರ್ಮಾಣ ಮಾಡುವುದಾಗಿ ಘೋಷಿಸಿ, ಅನುದಾನವನ್ನೂ ಮೀಸಲಿಟ್ಟಿದ್ದರು. ಅದಾದ 13 ವರ್ಷಗಳ ಬಳಿಕವೂ ಕಾಮಗಾರಿ ಆರಂಭಗೊಂಡಿಲ್ಲ. ‘ ಯೋಜನೆಗೆ ಸ್ವತಃ ಅಶ್ವತ್ಥನಾರಾಯಣ ಅವರೇ ಅಡ್ಡಗಾಲು ಹಾಕುತ್ತಿದ್ಧಾರೆ’ ಎಂದು ಡಿ.ಕೆ. ಸುರೇಶ್‌ ಮುಖ್ಯಮಂತ್ರಿ ಎದುರು ವೇದಿಕೆಯಲ್ಲೇ ಆರೋಪಿಸಿದ್ದರು. ಈ ಕಾರ್ಯಕ್ರಮದ ಮೂಲಕ ಅದಕ್ಕೆ ಉತ್ತರ ನೀಡುವ ಇರಾದೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣರದ್ದು.

ಜೆಡಿಎಸ್‌ನಿಂದ ಜಲಧಾರೆ

ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರ ಪೈಪೋಟಿಯನ್ನು ಮೌನವಾಗಿಯೇ ವೀಕ್ಷಿಸುತ್ತಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಈಗಾಗಲೇ ‘ಜಲಧಾರೆ’ಕಾರ್ಯಕ್ರಮ ಘೋಷಿಸಿದ್ದಾರೆ. ಇದೇ 26ರಿಂದ ಈ ಯಾತ್ರೆ ಆರಂಭಗೊಳ್ಳಬೇಕಿತ್ತು. ಆದರೆ ಕೋವಿಡ್ ಕಾರಣಕ್ಕೆ ಮುಂದೂಡಲ್ಪಟ್ಟಿದ್ದು, ಮಾರ್ಚ್‌ನಲ್ಲೇ ಈ ಯಾತ್ರೆ ಆರಂಭಗೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್‌ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸಿದರೆ, ಜೆಡಿಎಸ್‌ ನಾಡಿನ ಜಲಮೂಲಗಳ ಸಂರಕ್ಷಣೆಯ ಒತ್ತಾಯ, ಜನಜಾಗೃತಿಗಾಗಿ ಜಲಧಾರೆ ಯಾತ್ರೆ ನಡೆಸುವುದಾಗಿ ಘೋಷಿಸಿದೆ.

***

ಕಾಂಗ್ರೆಸ್ ನೀರಿನ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ಇದಕ್ಕೆ ರಾಜಕೀಯ ಹಾಗೂ ಆಡಳಿತಾತ್ಮಕವಾಗಿಯೂ ಉತ್ತರ ನೀಡುತ್ತೇವೆ

ಡಾ. ಸಿ.ಎನ್. ಅಶ್ವತ್ಥನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ, ರಾಮನಗರ

***

ಮೇಕೆದಾಟು ಪಾದಯಾತ್ರೆಗೆ ಮರುಚಾಲನೆ ಸಂಬಂಧ ಸದ್ಯಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಸೂಕ್ತ ಸಮಯದಲ್ಲಿ ಈ ಬಗ್ಗೆ ಮಾತನಾಡುತ್ತೇವೆ

ಡಿ.ಕೆ. ಶಿವಕುಮಾರ್‌,ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.