ADVERTISEMENT

ಚನ್ನಪಟ್ಟಣ: ತಹಶೀಲ್ದಾರ್ ಸರ್ಕಾರಿ ನಿವಾಸಕ್ಕೆ ಗ್ರಹಣ

ಎಂಟು ವರ್ಷದಿಂದ ಪಾಳುಬಿದ್ದಿರುವ ಸರ್ಕಾರಿ ಕಟ್ಟಡ

ಎಚ್.ಎಂ.ರಮೇಶ್
Published 15 ಫೆಬ್ರುವರಿ 2025, 4:37 IST
Last Updated 15 ಫೆಬ್ರುವರಿ 2025, 4:37 IST
<div class="paragraphs"><p>ತಹಶೀಲ್ದಾರ್ ನಿವಾಸದ ಗೇಟಿನ ಮುಂದೆ ಕಸ</p></div>

ತಹಶೀಲ್ದಾರ್ ನಿವಾಸದ ಗೇಟಿನ ಮುಂದೆ ಕಸ

   

ಚನ್ನಪಟ್ಟಣ: ಬೆಂಗಳೂರು–ಮೈಸೂರು ಹೆದ್ದಾರಿಯ ಪಕ್ಕದಲ್ಲಿರುವ ತಹಶೀಲ್ದಾರ್ ಅವರ ಅಧಿಕೃತ ಸರ್ಕಾರಿ ನಿವಾಸ ಕಳೆದ ಎಂಟು ವರ್ಷಗಳಿಂದ ಪಾಳು ಬಿದ್ದಿದ್ದು, ಕಸ, ಹಾವು ಹಲ್ಲಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.

ಸುಮಾರು 50ಕ್ಕೂ ಹೆಚ್ಚು ಹಳೆಯದಾದ ಲೋಕೋಪಯೋಗಿ ಇಲಾಖೆಗೆ ಸೇರಿರುವ ಸರ್ಕಾರಿ ನಿವಾಸವನ್ನು 2016 ರವರೆಗೆ ತಹಶೀಲ್ದಾರ್‌ಗಳು ಬಳಸುತ್ತಿದ್ದರು. ಆನಂತರ ಬಂದ ಯಾವುದೇ ತಹಶೀಲ್ದಾರ್‌ಗಳು ಈ ನಿವಾಸವನ್ನು ಬಳಸದ ಕಾರಣ ಪಾಳು ಬಿದ್ದಿದೆ.

ADVERTISEMENT

2016ರಲ್ಲಿ ಚನ್ನಪಟ್ಟಣ ತಹಶೀಲ್ದಾರ್ ಆಗಿದ್ದ ರಮೇಶ್ ಅವರು ಈ ನಿವಾಸವನ್ನು ಬಳಸುತ್ತಿದ್ದರು. ಬೆಂಗಳೂರಿನಲ್ಲಿ ಕುಟುಂಬದ ಜತೆ ವಾಸವಿದ್ದ ರಮೇಶ್ ಅವರು ತಮ್ಮ ತಾಯಿಯನ್ನು ಈ ನಿವಾಸದಲ್ಲಿ ಇರಿಸಿದ್ದರು. 2016ರ ಜುಲೈನಲ್ಲಿ ಅವರ ತಾಯಿ ಆ ನಿವಾಸದಲ್ಲಿಯೇ ಕೊಲೆಯಾಗಿದ್ದರು. ಈ ವಿಚಾರ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಅಂದಿನಿಂದ ಈ ನಿವಾಸ ಅನಾಥವಾಗಿದೆ.

ಪಾಳುಬಿದ್ದಿರುವ ನಿವಾಸದ ಸುತ್ತಮುತ್ತ ಗಿಡಗಂಟೆಗಳು ಬೆಳೆದಿರುವ ಕಾರಣ ಹಾವು ಹಲ್ಲಿಗಳು ಸೇರಿಕೊಂಡಿವೆ. ನಿವಾಸದ ಮುಂಭಾಗದಲ್ಲಿ, ಒಳಗೆ ಕೆಲವರು ಕಸ ಹಾಕುತ್ತಿದ್ದಾರೆ. ಈ ನಿವಾಸವು ಬೆಂಗಳೂರು ಮೈಸೂರು ಹೆದ್ದಾರಿಯ ಪಕ್ಕದಲ್ಲೇ ಇರುವುದರಿಂದ ನಗರದ ಅಂದವನ್ನು ಕೆಡಿಸುತ್ತಿದೆ. ಹೆದ್ದಾರಿ ಬಳಿ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಸಂಬಂಧಪಟ್ಟವರು ಈ ನಿವಾಸವನ್ನು ಸ್ವಚ್ಛಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಾಹನ ನಿಲುಗಡೆ ಸ್ಥಳ: ತಹಶೀಲ್ದಾರ್ ಅವರ ಅಧಿಕೃತ ಸರ್ಕಾರಿ ನಿವಾಸವು ಕಳೆದ ಎಂಟು ವರ್ಷಗಳಿಂದ ಪಾಳು ಬಿದ್ದಿರುವ ಕಾರಣ ಇದರ ಮುಂದಿನ ಜಾಗ ಕಾರು, ಬೈಕ್‌ಗಳ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ. ಈ ನಿವಾಸದ ಗೇಟಿಗೆ ಬೀಗ ಜಡಿದಿರುವ ಹಿನ್ನಲೆ ನಿವಾಸದ ಕಾಂಪೌಂಡ್‌ ಉದ್ದಕ್ಕೂ ಬೈಕ್, ಕಾರುಗಳನ್ನು ನಿಲ್ಲಿಸಲಾಗುತ್ತಿದೆ.

ಈ ಹಿಂದೆ ತಹಶೀಲ್ದಾರ್‌ಗಳು ಈ ನಿವಾಸದಲ್ಲಿ ವಾಸವಿದ್ದ ವೇಳೆ ಇಲ್ಲಿ ಪೊಲೀಸರನ್ನು ಕಾವಲು ಹಾಕಲಾಗುತ್ತಿತ್ತು. ಆಗ ಯಾವುದೇ ವಾಹನವನ್ನು ಗೇಟಿನ ಮುಂದೆ ನಿಲ್ಲಿಸಲು ಬಿಡುತ್ತಿರಲಿಲ್ಲ. ಈಗ ಹೇಳುವವರು ಕೇಳುವವರೆ ಇಲ್ಲದಂತಾಗಿದೆ ಎಂಬುದು ಸಾರ್ವಜನಿಕರ ಮಾತಾಗಿದೆ.

ಲಕ್ಷಾಂತರ ಖರ್ಚು ಮಾಡಿ ಕಟ್ಟಿರುವ ಸರ್ಕಾರಿ ನಿವಾಸವೊಂದು ಹೀಗೆ ಪಾಳು ಬಿದ್ದಿರುವುದು
ಸೂಕ್ತವಲ್ಲ. ಈ ಕಟ್ಟಡವನ್ನು ಕೆಡವಿ ಇಲ್ಲಿ ಸುಸಜ್ಜಿತ ಬೇರೊಂದು ಸರ್ಕಾರಿ ಕಟ್ಟಡ ಕಟ್ಟಲಿ. ಅಥವಾ ಹೆದ್ದಾರಿಗೆ ಹೊಂದಿಕೊಂಡಿರುವ ಈ ಜಾಗದಲ್ಲಿ ವಾಣಿಜ್ಯ ಮಳಿಗೆ ಕಟ್ಟಿ ಬಾಡಿಗೆಗೆ ನೀಡಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಈ ಕಟ್ಟಡವನ್ನು ಕೆಡವಿ ಅಲ್ಲಿ ಸುಸಜ್ಜಿತ ವ್ಯಾಪಾರ ಮಳಿಗೆ ನಿರ್ಮಿಸುವ
ಯೋಜನೆ ರೂಪಿಸಲಾಗಿತ್ತು. ಅಂದು ಅಧಿಕಾರದಲ್ಲಿದ್ದ ಅಧಿಕಾರಿಯೊಬ್ಬರು ಈ ಪ್ರಸ್ತಾವನೆಯನ್ನು ಸರ್ಕಾರದ
ಮುಂದೆ ಇಡುವಲ್ಲಿ ಆಸಕ್ತಿ ತೋರದ ಕಾರಣ ಅದು ನನೆಗುದಿಗೆ ಬಿತ್ತು. ಮುಂದಿನ ದಿನಗಳಲ್ಲಿ ಈ ಬಗ್ಗೆ ಮತ್ತೆ ಪ್ರಸ್ತಾವನೆ ಇಡುವ ತೀರ್ಮಾನ ಮಾಡಲಾಗಿದೆ ಎಂದು ಹೆಸರೇಳಲಿಚ್ಛಿಸದ ಲೋಕೋಪಯೋಗಿ ಇಲಾಖೆ
ಅಧಿಕಾರಿಯೊಬ್ಬರು ತಿಳಿಸಿದರು.

ಕೊಲೆಯಾದ ನಂತರ ನಿವಾಸ ಖಾಲಿ 

ತಹಶೀಲ್ದಾರ್ ರಮೇಶ್ ಅವರ ತಾಯಿ ಕೊಲೆಯಾದ ನಂತರ ಈ ನಿವಾಸಕ್ಕೆ ಯಾವ ಅಧಿಕಾರಿಯೂ ಬಾರದ ಕಾರಣ ನಿವಾಸ ಖಾಲಿ ಇದೆ. 

ಮೂಲತಃ ತಾಲ್ಲೂಕಿನ ಅಮ್ಮಳ್ಳಿದೊಡ್ಡಿ ಗ್ರಾಮದವರಾದ ರಮೇಶ್ ಅವರು ಅವರ ತಾಯಿ ತಾಯಮ್ಮ ಅವರನ್ನು ತಹಶೀಲ್ದಾರ್‌ ನಿವಾಸದಲ್ಲಿ ಇರಿಸಿದ್ದರು. ಹಣಕಾಸಿನ ವಿಚಾರದಲ್ಲಿ ತಾಯಮ್ಮ ಅವರ ಜತೆ ವೈಮನಸ್ಸು ಬೆಳೆಸಿಕೊಂಡಿದ್ದ ಅಮ್ಮಳ್ಳಿದೊಡ್ಡಿಯ ಹೇಮಂತ್ ಕುಮಾರ್ ಹಾಗೂ ಶೋಭಾ ಅವರು ತಾಯಮ್ಮ ಅವರನ್ನು ಈ ನಿವಾಸದಲ್ಲೇ ಕೊಲೆ ಮಾಡಿಸಿದ್ದರು. ಇದಾದ ನಂತರ ಪೊಲೀಸ್ ಪರಿಶೀಲನೆ, ತನಿಖೆ ಹೆಸರಿನಲ್ಲಿ ಈ ನಿವಾಸಕ್ಕೆ ಬೀಗ ಜಡಿಯಲಾಯಿತು. 

ಕೊಲೆ ಆರೋಪಿಗಳನ್ನು ಪತ್ತೆ ಮಾಡಿ ಅವರನ್ನು ಶಿಕ್ಷೆಗೆ ಗುರಿಪಡಿಸಲಾಯಿತು. ನಂತರ ಸಾಕ್ಷಿಗಳ ಕೊರೆತೆಯಿಂದ ಇಬ್ಬರೂ ಆರೋಪಿಗಳನ್ನು ಹೈಕೋರ್ಟ್ ಖುಲಾಸೆಗೊಳಿಸಿತು. ಇಷ್ಟೆಲ್ಲಾ ಬೆಳವಣಿಗೆಗಳು ನಡೆದರೂ ಈ ನಿವಾಸಕ್ಕೆ ಹಿಡಿದಿರುವ ಗ್ರಹಣ ಮಾತ್ರ ಬಿಟ್ಟಿಲ್ಲ.

ನಿವಾಸಕ್ಕೆ ಮುಕ್ತಿ ನೀಡಿ

ಸರ್ಕಾರಿ ಕಟ್ಟಡವೊಂದನ್ನು ಈ ರೀತಿ ಪಾಳು ಬಿಡುವುದು ಸರಿಯಲ್ಲ. ಕಳೆದ ಎಂಟು ವರ್ಷಗಳಿಂದ ಪಾಳುಬಿದ್ದಿರುವ ಈ ನಿವಾಸಕ್ಕೆ ಮುಕ್ತಿ ನೀಡಬೇಕಾಗಿರುವುದು ಅಧಿಕಾರಿಗಳ ಜವಾಬ್ದಾರಿ. ಈ ಕಟ್ಟಡವನ್ನು ನವೀಕೃತಗೊಳಿಸಿ ಬಳಸಲಿ, ಇಲ್ಲವೇ ಇದನ್ನು ಕೆಡವಿ ಆಧುನಿಕ ಕಟ್ಟಡ ನಿರ್ಮಾಣ ಮಾಡಲಿ. ಈ ಜಾಗದಲ್ಲಿ ಆಧುನಿಕ ಕಟ್ಟಡ ನಿರ್ಮಾಣ ಮಾಡಿದರೆ ನಗರಕ್ಕೂ ಶೋಭೆ.

-ಜಿ. ರಾಘವೇಂದ್ರ, ಚನ್ನಪಟ್ಟಣ

ಸುಸಜ್ಜಿತ ಕಟ್ಟಡ ನಿರ್ಮಿಸಿ ಬಳಸಿ

ನಗರದಲ್ಲಿ ಹಲವು ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ನಗರದ ಮಧ್ಯಭಾಗದಲ್ಲಿ ಸರ್ಕಾರಿ ಜಾಗ ಇರುವಾಗ ಬಾಡಿಗೆ ಕಟ್ಟಡಕ್ಕೆ ಹಣ ಪೋಲು ಮಾಡುವ ಬದಲು ಈ ಕಟ್ಟಡವನ್ನು ಕೆಡವಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿದರೆ ಜನರಿಗೆ ಸರ್ಕಾರಿ ಕಚೇರಿಗಳು ಸಮೀಪವಾಗುತ್ತವೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ.

-ಭರತ್, ಚನ್ನಪಟ್ಟಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.