ADVERTISEMENT

ಸ್ಯಾಂಟ್ರೊ ರವಿ ಕಾರು ಚಾಲಕ ಗಿರೀಶ್ ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 19:12 IST
Last Updated 12 ಜನವರಿ 2023, 19:12 IST
   

ರಾಮನಗರ: ಸ್ಯಾಂಟ್ರೊ ರವಿ ಕಾರು ಚಾಲಕ ಗಿರೀಶ್ ಎಂಬುವವರನ್ನು ಮೈಸೂರು ಪೊಲೀಸರು ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲೀಪುರ ಬಳಿ ವಶಕ್ಕೆ ಪಡೆದಿದ್ದಾರೆ.

‘ಮೂರು ದಿನಗಳ ಹಿಂದೆ ಗಿರೀಶ್‌ನನ್ನು ವಶಕ್ಕೆ ಪಡೆದ ಮೈಸೂರು ಪೊಲೀಸರು ವಿಚಾರಣೆಗಾಗಿ ಆತನನನ್ನು ಮೈಸೂರಿಗೆ ಕರೆದೊಯ್ದಿದ್ದಾರೆ’ ಎಂದು ಸ್ಥಳೀಯ ಪೊಲೀಸ್‌ ಮೂಲಗಳು ತಿಳಿಸಿವೆ.

ಮೈಸೂರು ಪೊಲೀಸರ ಒಂದು ತಂಡವು ರಾಮನಗರ ಪೊಲೀಸರ ಸಹಕಾರದೊಂದಿಗೆ ರಾಮನಗರ– ಬೆಂಗಳೂರು ಭಾಗದಲ್ಲಿ ಸ್ಯಾಂಟ್ರೊ ರವಿಗಾಗಿ ಹುಡುಕಾಟ ನಡೆಸಿತ್ತು. ಮೂರು ದಿನದ ಹಿಂದೆ ಕಗ್ಗಲೀಪುರ ಬಳಿ ಕಾರ್‌ನಲ್ಲಿ ತೆರಳುತ್ತಿದ್ದ ಚಾಲಕನನ್ನು ಪೊಲೀಸ್ ತಂಡ ವಶಕ್ಕೆ ಪಡೆದು ಮೈಸೂರಿಗೆ ಕರೆದೊಯ್ಯಿತು ಎಂದು ಮೂಲಗಳು ತಿಳಿಸಿವೆ.

ADVERTISEMENT

ರಾಮನಗರ ಜಿಲ್ಲೆಯ ವಸತಿ ಗೃಹ, ರೆಸಾರ್ಟ್‌ಗಳಲ್ಲಿ ಸ್ಯಾಂಟ್ರೊ ರವಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಇದೂವರೆಗೂ ಯಾವುದೇ ಸುಳಿವು ಪತ್ತೆ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಯಾಂಟ್ರೊ ರವಿ ಜಾಮೀನು ಅರ್ಜಿ ವಿಚಾರಣೆ ಜ.17ಕ್ಕೆ ಮುಂದೂಡಿಕೆ
ಮೈಸೂರು:
ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೊ ರವಿ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಇಲ್ಲಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜ.17ಕ್ಕೆ ಮುಂದೂಡಿದೆ.

ಅರ್ಜಿ ವಿಚಾರಣೆ ಗುರುವಾರ ನಡೆಯಿತು. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆ ಮಂಗಳವಾರಕ್ಕೆ ಮುಂದೂಡಲಾಗಿದೆ.

ಕೊಡಗಿನಲ್ಲಿ ಶೋಧ (ಮಡಿಕೇರಿ ವರದಿ): ಸ್ಯಾಂಟ್ರೊ ರವಿ ಕೊಡಗು ಜಿಲ್ಲೆಯಲ್ಲಿ ಅಡಗಿರಬಹುದು ಎಂಬ ಮಾಹಿತಿ ಆಧರಿಸಿ ಮೈಸೂರಿನಿಂದ ಬಂದ ಪೊಲೀಸರ ತಂಡವು ಕುಶಾಲನಗರ ವ್ಯಾಪ್ತಿಯ ಹೋಂ ಸ್ಟೇಗಳು ಹಾಗೂ ರೆಸಾರ್ಟ್‌ಗಳಲ್ಲಿ ಶೋಧ ಕಾರ್ಯ ನಡೆಸಿತು. ಆದರೆ, ಆರೋಪಿ ಪತ್ತೆಯಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಬ್ರಿಯಲ್ಲಿ ಶೋಧ
ಹೆಬ್ರಿ (ಉಡುಪಿ ಜಿಲ್ಲೆ):
ಸ್ಯಾಂಟ್ರೊ ರವಿ ಹೆಬ್ರಿಯಲ್ಲಿ ಅಡಗಿರುವ ಮಾಹಿತಿ ಮೇರೆಗೆ ಮೈಸೂರು ಸಿಸಿಬಿ ಪೊಲೀಸರು ಕಳೆದೆರಡು ದಿನಗಳಿಂದ ಇಲ್ಲಿಯ ಹಲವೆಡೆ ಶೋಧ ನಡೆಸಿದರು.

ಪೇಟೆಯ ಆಯಕಟ್ಟಿನ ಜಾಗಗಳಲ್ಲಿ ಇರುವ ಸಿ.ಸಿ ಟಿವಿ ಕ್ಯಾಮೆರಾ ಹಾಗೂ ಸೋಮೇಶ್ವರ ಚೆಕ್ ಪೋಸ್ಟ್‌ನಲ್ಲಿರುವ ಸಿ.ಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದರು.

ಹೆಬ್ರಿ–ಆಗುಂಬೆ ಮಾರ್ಗದಲ್ಲಿರುವ ಗೂಡಂಗಡಿಗೆ ಭೇಟಿ ನೀಡಿದ್ದ ಸ್ಯಾಂಟ್ರೊ ರವಿ, ಗೂಡಂಗಡಿ ಮಾಲೀಕರಿಂದ ಮೊಬೈಲ್ ಪಡೆದು ತನ್ನ ಆಪ್ತರಿಗೆ ಕರೆ ಮಾಡಿದ್ದು, ಈ ಮಾಹಿತಿಯ ಜಾಡು ಹಿಡಿದು ಪೊಲೀಸರು ಹೆಬ್ರಿಗೆ ಬಂದು ತನಿಖೆ ನಡೆಸಿದ್ದಾರೆ. ಗೂಡಂಗಡಿ ಮಾಲೀಕನ ಮೊಬೈಲ್ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.