ADVERTISEMENT

ಚನ್ನಪಟ್ಟಣ| ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮೀಕ್ಷಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 2:17 IST
Last Updated 14 ಅಕ್ಟೋಬರ್ 2025, 2:17 IST
ಚನ್ನಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ನೇಮಿಸಿಕೊಂಡಿರುವ ಶಿಕ್ಷಕರು ಪ್ರತಿಭಟನೆ ನಡೆಸಿದರು
ಚನ್ನಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ನೇಮಿಸಿಕೊಂಡಿರುವ ಶಿಕ್ಷಕರು ಪ್ರತಿಭಟನೆ ನಡೆಸಿದರು   

ಚನ್ನಪಟ್ಟಣ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜಿಸಿರುವ ಸಮೀಕ್ಷಕರಿಗೆ ಪ್ರತಿದಿನ ಒಂದೊಂದು ನಿಯಮ ಜಾರಿಗೆ ತಂದು ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಸಮೀಕ್ಷಕರು ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಸಮೀಕ್ಷೆಗೆ ನೇಮಕವಾದ ದಿನದಿಂದಲೂ ಒಂದಲ್ಲ ಒಂದು ರೀತಿಯ ಸಮಸ್ಯೆ ಅನುಭವಿಸುತ್ತಿದ್ದೇವೆ. ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆಗೆ ಬರುವಂತೆ ಬಿಇಒ ಅಂದು ಬೆಳಗ್ಗೆ 10ಕ್ಕೆ ಸಂದೇಶ ಕಳಿಸುತ್ತಾರೆ. ಮಧ್ಯಾಹ್ನ 2.30ಕ್ಕೆ ಸಭೆ ಮುಂದೂಡಿರುವುದಾಗಿ 12ಕ್ಕೆ ಮತ್ತೊಂದು ಸಂದೇಶ ಕಳಿಸುತ್ತಾರೆ. ಮಧ್ಯಾಹ್ನ ಮೂರು ಗಂಟೆಯಾದರೂ ಸಭೆ ಬಾರದೆ ಕಾಯಿಸಲಾಯಿತು ಎಂದು ಸಮೀಕ್ಷಕರು ಆಕ್ರೋಶ ವ್ಯಕ್ತಪಡಿಸಿದರು.

ಸಭೆಗೆ ಬಂದ ಶಿಕ್ಷಕರು ಬೆಳಗ್ಗೆಯೇ ಮನೆಯಿಂದ ಹೊರಟಿದ್ದಾರೆ. ಇಲ್ಲಿ ಬಂದರೆ ಯಾರಿಗೂ ಊಟದ ವ್ಯವಸ್ಥೆಯಾಗಲಿ, ನೀರಿನ ವ್ಯವಸ್ಥೆಯಾಗಲಿ ಮಾಡಿಲ್ಲ. ಶಿಕ್ಷಕರು ಬಿಸಿಲಿನಲ್ಲಿ ಕಾದು ಕುಳಿತಿದ್ದಾರೆ. ಶಿಕ್ಷಕರನ್ನು ಕೂಲಿಗಳಂತೆ ನೋಡಬೇಡಿ, ಪಾಠ ಮಾಡಲು ಬಿಡಿ ಎಂದು ಆಗ್ರಹಿಸಿದರು.

‘ಸಮೀಕ್ಷೆ ಆರಂಭವಾದ ಮೊದಲು ಮೂರ‍್ನಾಲ್ಕು ದಿನ ನೆಟ್‌ವರ್ಕ್ ಸಮಸ್ಯೆ ಎದುರಾಗಿತ್ತು. ಮತ್ತೆ ಆರ್‌.ಆರ್‌ ನಂಬರ್‌ಗಾಗಿ ಮನೆ,ಮನೆಗೆ ಭೇಟಿ ನೀಡುವಂತಾಯಿತು. ಆದಾದ ನಂತರ ಪಡಿತರ ಚೀಟಿಯಲ್ಲಿ ಒಂಟಿ ಹೆಸರು ಇರುವವರನ್ನು ಬಿಟ್ಟಿದ್ದೀರಾ ಮತ್ತೆ ಅದನ್ನು ಗಣತಿ ಮಾಡಿ ಎಂದು ಸೂಚಿಸಿದರು. ಅದನ್ನೂ ಮಾಡಿದೆವು. ಇದೀಗ ಮತ್ತೆ ಅಡ್ಡ ಪರಿಶೀಲನೆ (ಕ್ರಾಸ್ ಚೆಕ್) ಮಾಡುವ ಕೆಲಸಕ್ಕೆ ನಮ್ಮ ಸಮೀಕ್ಷಾ ಸ್ಥಳವನ್ನು ಬಿಟ್ಟು ಬೇರೆಲ್ಲಿಗೋ ನೇಮಿಸಿದ್ದಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ’ ಎಂದು ಸಮೀಕ್ಷಕರು ದೂರಿದರು.

ಸ್ಥಳಕ್ಕೆ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಲಿಂಗಯ್ಯ, ಪೌರಾಯುಕ್ತ ಮಹೇಂದ್ರ ಅವರು ಶಿಕ್ಷಕರ ಸಮಸ್ಯೆ ಆಲಿಸಿದರು. ಆಯಾ ವ್ಯಾಪ್ತಿಯ ಸಾರ್ವಜನಿಕರ ದೂರವಾಣಿ ಸಂಖ್ಯೆಗಳನ್ನು ಸೂಪರ್ ವೈಸರ್  ಮೂಲಕ ನೀಡಲಾಗುವುದು. ಮನೆಯಲ್ಲಿಯೆ ಕುಳಿತು ಸಮೀಕ್ಷೆ ಆಗಿರುವ ಬಗ್ಗೆ ಪರಿಶೀಲನೆ (ಕ್ರಾಸ್ ಚೆಕಿಂಗ್) ನಡೆಸುವಂತೆ ಸೂಚಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.