
ಮಂಗಳವಾರಪೇಟೆಯಲ್ಲಿಯಲ್ಲಿ ಉದ್ಯಮಿ ಸಾಹುಕಾರ್ ಎಸ್.ಕೆ. ಸಯ್ಯದ್ ಸಾದತ್‌ಉಲ್ಲಾ ಸಖಾಫ್ ಅವರು ನಿರ್ಮಿಸಿರುವ ಬಸವೇಶ್ವರ ಸ್ವಾಮಿ ದೇವಾಲಯ
ಚನ್ನಪಟ್ಟಣ (ರಾಮನಗರ): ಮುಸ್ಲಿಂ ಉದ್ಯಮಿಯೊಬ್ಬರು ಇಲ್ಲಿನ ಮಂಗಳವಾರಪೇಟೆಯಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ಹಿಂದೂ ದೇವಾಲಯದ ಜೀರ್ಣೋದ್ಧಾರ ಮಾಡಿದ್ದಾರೆ. ದೇವರು – ಧರ್ಮದ ಹೆಸರಿನಲ್ಲಿ ಕಿತ್ತಾಟದ ರಾಜಕಾರಣದ ಈ ಹೊತ್ತಿನಲ್ಲಿ, ಎಸ್.ಕೆ. ಗ್ರೂಪ್ಸ್ ಮಾಲೀಕ ಸಾಹುಕಾರ್ ಎಸ್.ಕೆ. ಸೈಯದ್ ಸಾದತ್‌ಉಲ್ಲಾ ಸಖಾಫ್ ಅವರು ದೇವಸ್ಥಾನ ನಿರ್ಮಿಸಿ ಸಾಮರಸ್ಯದ ಸಂದೇಶ ಸಾರಿದ್ದಾರೆ.
ಶಿಥಿಲಾವಸ್ಥೆ ತಲುಪಿದ್ದ ಹಳೆಯ ದೇವಸ್ಥಾನದ ಜಾಗದಲ್ಲಿ ತಲೆ ಎತ್ತಿರುವ ಕಲ್ಲಿನಿಂದ ನಿರ್ಮಿಸಿರುವ ಈ ಭವ್ಯ ದೇವಸ್ಥಾನ, ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲೇ ಲೋಕಾರ್ಪಣೆಗೊಂಡಿದೆ. ಸ್ಥಳೀಯ ಶ್ರೀ ಬಸವೇಶ್ವರ ವಿನಾಯಕ ಯುವಕರ ಬಳಗದ ನೇತೃತ್ವದಲ್ಲಿ ನಡೆದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ, ವಿವಿಧ ಸಮುದಾಯಗಳ ಸ್ವಾಮೀಜಿಗಳು ಸಾಕ್ಷಿಯಾಗಿ ಹರಿಸಿದ್ದಾರೆ.
ತ.ನಾಡಿನಿಂದ ಬಂತು ಕಲ್ಲು: ದೇವಾಲಯಕ್ಕೆ ಅಗತ್ಯವಿರುವ ಕಲ್ಲುಗಳನ್ನು ತಮಿಳುನಾಡಿನ ಮಹಾಬಲೇಶ್ವರನಿಂದ ತರಿಸಲಾಗಿದೆ. ನುರಿತ ಶಿಲ್ಪ ಕಲಾವಿದರನ್ನು ಕರೆಯಿಸಿ, ದೇವಸ್ಥಾನದ ವಿನ್ಯಾಸಕ್ಕೆ ಅನುಗುಣವಾಗಿ ಆವರಣದಲ್ಲೇ ಕಲ್ಲುಗಳನ್ನು ಕೆತ್ತಿಸಲಾಗಿದೆ. ದೇವಾಲಯದ ಮೂರ್ತಿ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವ ಪ್ರತಿಷ್ಠಾಪನೆ ಕಾರ್ಯದಲ್ಲಿ ಸಖಾಫ್ ಅವರು ಭಾಗಿಯಾಗಿದ್ದಾರೆ.
‘ಬಸವನ ಗುಡಿ’ ಎಂದೇ ಪ್ರಸಿದ್ಧಿಯಾಗಿರುವ ಮಂಗಳವಾರಪೇಟೆಯ ಬಸವೇಶ್ವರ ದೇವಾಲಯ ಪಟ್ಟಣದ ಪ್ರಮುಖ ಸ್ಥಳವಾಗಿದೆ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರವಣಿಗೆ, ಪ್ರತಿಭಟನಾ ಮೆರವಣಿಗೆ, ರಾಜಕೀಯ ಪಕ್ಷಗಳ ರ‍್ಯಾಲಿಗಳು ಈ ದೇವಾಲಯದ ಆವರಣದಿಂದಲೇ ಆರಂಭವಾಗುತ್ತವೆ.
ಸನ್ಮಾನ: ಶಿಥಿಲಾವಸ್ಥೆ ತಲುಪಿದ್ದ ದೇವಾಲಯದ ಜೀರ್ಣೋದ್ಧಾರ ಮಾಡಬೇಕೆಂಬ ಸ್ಥಳೀಯರ ಒತ್ತಾಸೆಗೆ ಸಯ್ಯದ್ ಅವರು ಕೈ ಜೋಡಿಸಿದ್ದಾರೆ. ಅದಕ್ಕೆ ಅಗತ್ಯವಿದ್ದ ಸುಮಾರು ₹2 ಕೋಟಿ ಮೊತ್ತವನ್ನು ಭರಿಸಿದ್ದಾರೆ. ದೇವಾಲಯ ಲೋಕಾರ್ಪಣೆ ದಿನ ಸ್ಥಳೀಯರು ಸಯ್ಯದ್ ಅವರಿಗೆ ಅಭಿಮಾನದ ಸನ್ಮಾನ ಮಾಡಿದರು.
ಹಿಂದೆಯೂ ನಿರ್ಮಿಸಿದ್ದರು
ಬೀಡಿ ಸೇರಿದಂತೆ ವಿವಿಧ ಉದ್ಯಮಗಳನ್ನು ಹೊಂದಿರುವ ಸಯ್ಯದ್ ಅವರು ಯಾವುದೇ ಜಾತಿ–ಧರ್ಮ ನೋಡದೆ ದಾನ ಮಾಡುವುದರಲ್ಲಿ ಎತ್ತಿದ ಕೈ. 2010ರಲ್ಲಿ ತಾಲ್ಲೂಕಿನ ಎಸ್.ಎಂ. ಹಳ್ಳಿ ಗ್ರಾಮದಲ್ಲಿದ್ದ ದರ್ಗಾದ ಜೊತೆಗೆ ಶಿಥಿಲಾವಸ್ಥೆಯಲ್ಲಿದ್ದ ವೀರಭದ್ರೇಶ್ವರ ದೇವಾಲಯವನ್ನು ಸಹ ಜೀರ್ಣೋದ್ದಾರ ಮಾಡಿದ್ದರು ಎಂದು ಸ್ಥಳೀಯರು ನೆನೆದರು.
‘ಜಾತಿ ಮತ್ತು ಧರ್ಮಕ್ಕಿಂತ ಪ್ರೀತಿ ಮತ್ತು ಸೌಹಾರ್ದ ಮುಖ್ಯ. ಸಾಹುಕಾರ್ ಸಖಾಫ್ ಅವರು ಹಿಂದೂ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಮೂಲಕ ಅಂತಹ ಸೌಹಾರ್ದವನ್ನು ಬೆಸೆಯುವ ಕೆಲಸ ಮಾಡಿದ್ದಾರೆ. ಅವರಿಗೆ ನಾವೆಲ್ಲರೂ ಆಭಾರಿಗಳಾಗಿರುತ್ತೇವೆ’ ಎಂದು ಸ್ಥಳೀಯರಾದ ಬೋರಯ್ಯ ಹೇಳಿದರು.
ಬಸವೇಶ್ವರ ದೇವಾಲಯನ್ನು ನಾನು ನಿರ್ಮಿಸಬೇಕು ಎಂಬುದು ಆ ಶಿವನ ಇಚ್ಛೆಯಾಗಿತ್ತು. ಇದರಲ್ಲಿ ನನ್ನದೇನೂ ಇಲ್ಲ. ಎಲ್ಲರೂ ಪ್ರೀತಿಯಿಂದ ಸೋದರರಾಗಿ ಬಾಳಬೇಕು. ಜಾತಿ, ಧರ್ಮಕ್ಕಿಂತ ಪ್ರೀತಿ ದೊಡ್ಡದು
ಎಸ್.ಕೆ. ಸಯ್ಯದ್ ಸಾದತ್‌ಉಲ್ಲಾ ಸಖಾಫ್, ಉದ್ಯಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.