ADVERTISEMENT

ಶೌಚಕ್ಕೆ ಹುಡುಕಾಟ: ನಿರ್ವಹಣೆ ಇಲ್ಲದೆ ಪರದಾಟ

ನಿರ್ಮಾಣವಾಗಿ ವರ್ಷ ಕಳೆದರೂ ಉದ್ಘಾಟನೆಯಾಗದ ಕಟ್ಟಡಗಳು * ಬಯಲು ಆಶ್ರಯಿಸಿದ ಪುರುಷರು

ಆರ್.ಜಿತೇಂದ್ರ
Published 19 ಏಪ್ರಿಲ್ 2021, 3:48 IST
Last Updated 19 ಏಪ್ರಿಲ್ 2021, 3:48 IST
ರಾಮನಗರದ ಕೆಂಪೇಗೌಡ ವೃತ್ತದಲ್ಲಿರುವ ಸಾರ್ವಜನಿಕ ಶೌಚಾಲಯ
ರಾಮನಗರದ ಕೆಂಪೇಗೌಡ ವೃತ್ತದಲ್ಲಿರುವ ಸಾರ್ವಜನಿಕ ಶೌಚಾಲಯ   

ರಾಮನಗರ: ಮನುಷ್ಯನ ಮೂಲ ಅಗತ್ಯತೆಗಳಲ್ಲಿ ಒಂದಾದ ಶೌಚಾಲಯಗಳ ವ್ಯವಸ್ಥೆ ಜಿಲ್ಲೆಯಲ್ಲಿ ಇನ್ನೂ ಶೋಚನೀಯ ಸ್ಥಿತಿಯಲ್ಲೇ ಇದೆ. ನಗರ ಪ್ರದೇಶಗಳಲ್ಲಿನ ಅರ್ಧದಷ್ಟು ಶೌಚಾಲಯಗಳು ಸ್ವಚ್ಛತೆಯ ಕೊರತೆ ಎದುರಿಸುತ್ತಿದ್ದರೆ, ಇನ್ನೂ ಸಾಕಷ್ಟು ಕಟ್ಟಡಗಳಿಗೆ ಉದ್ಘಾಟನೆಯ ಭಾಗ್ಯವೇ ದೊರೆತಿಲ್ಲ.

ರಾಮನಗರವು ಜಿಲ್ಲಾ ಕೇಂದ್ರವಾಗಿ ದಶಕ ಕಳೆದಿದೆ. ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ಸಮುದಾಯ ಶೌಚಾಲಯಗಳ ನಿರ್ಮಾಣ ಮತ್ತು ಬಳಕೆ ಇನ್ನೂ ಸುಧಾರಣೆ ಕಂಡಿಲ್ಲ. ಬೆರಳೆಣಿಕೆಯಷ್ಟು ಶೌಚಗೃಹಗಳಿದ್ದು, ಅವುಗಳನ್ನೂ ಜನ ಹುಡುಕಬೇಕಿದೆ. ಇನ್ನೂ ಬಯಲಲ್ಲೇ ಮೂತ್ರ ವಿಸರ್ಜನೆ ನಡೆದೇ ಇದೆ.

ಬಯಲು ಮೂತ್ರಾಲಯ: ನಗರಸಭೆ ವತಿಯಿಂದ ಈ ಹಿಂದೆ ಕೆಲವು ಕಡೆ ತೆರೆದ ಸ್ಥಿತಿಯಲ್ಲಿನ ಮೂತ್ರಾಲಯಗಳನ್ನು ನಿರ್ಮಿಸಲಾಗಿತ್ತು. ಅವುಗಳು ಹಾಗೆಯೇ ಉಳಿದುಕೊಂಡಿವೆ. ಇಲ್ಲಿ ಹೆಸರಿಗೆ ಮೂತ್ರಾಲಯ ಇದ್ದರೂ ಎಲ್ಲವೂ ಖುಲ್ಲಂಖುಲ್ಲಾ ಆಗಿದೆ. ಗಂಡಸರು ಬಟಾಬಯಲಿನಲ್ಲಿ ನಿರ್ಲಜ್ಜೆಯಿಂದ ಮೂತ್ರ ವಿಸರ್ಜನೆ ಮಾಡಿ ಹೋಗುತ್ತಾರೆ. ಹೆಂಗಸರು ನಾಚಿ ತಲೆಬಗ್ಗಿಸಿ ನಡೆಯುವಂತಹ ಪರಿಸ್ಥಿತಿ ಇದೆ.

ADVERTISEMENT

ನಗರದ ಕೈಗಾರಿಕಾ ಪ್ರದೇಶ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ರೈಲು ನಿಲ್ದಾಣ, ರೇಷ್ಮೆ ಮಾರುಕಟ್ಟೆ, ಎಪಿಎಂಸಿ ಮೊದಲಾದ ಜನನಿಬಿಡ ಪ್ರದೇಶದಲ್ಲಿನ ಗೋಡೆಗಳು, ಕಾಂಪೌಂಡ್‌ಗಳು ಪುರುಷರ ಮೂತ್ರದ ದುರ್ವಾಸನೆಯಿಂದ ತುಂಬಿವೆ. ಇಲ್ಲೆಲ್ಲ ಬಯಲು ಶೌಚ ಸಾಮಾನ್ಯವಾಗಿದೆ. ಇದರಿಂದ ಅನೇಕ ಕಟ್ಟಡಗಳ ಮಾಲೀಕರು, ವರ್ತಕರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಪ್ರಶ್ನಿಸಲು ಹೋದವರ ಜೊತೆಗೆ ವಾಗ್ವಾದ ನಡೆಸುವುದು ಸಾಮಾನ್ಯವಾಗಿದೆ.

ಸಮುದಾಯ ಶೌಚಾಲಯಗಳು: ನಗರದ ಕೆಂಪೇಗೌಡ ವೃತ್ತ, ರಾಜ್‌ಕುಮಾರ್‌ ವಾಣಿಜ್ಯ ಸಂಕೀರ್ಣ ಸಮೀಪ, ಕೋರ್ಟ್‌ ಸಮೀಪ, ಕೃಷಿ ಉತ್ಪನ್ನ ಮಾರುಕಟ್ಟೆ, ರೈಲು ನಿಲ್ದಾಣ, ಬಸ್ ನಿಲ್ದಾಣದ ಬಳಿ ಜನರ ಉಪಯೋಗಕ್ಕೆಂದು ಪಾವತಿಸಿ ಬಳಸುವ ಸುಲಭ್ ಶೌಚಾಲಯಗಳು ನಿರ್ಮಾಣ ಆಗಿವೆ. ಇಲ್ಲಿ ಜನ ಹಣ ಕೊಟ್ಟು ಶೌಚಕ್ಕೆ ಹೋದರೂ ಅವರಿಗೆ ಸಮಾಧಾನವಾಗವಂತಹ ಪರಿಸರ ಇಲ್ಲ. ಇವುಗಳಲ್ಲಿನ ಸ್ವಚ್ಛತೆ ಬಗ್ಗೆ ಸಾಕಷ್ಟು ಮಂದಿ ದೂರುತ್ತಾರೆ.

ಸಾರ್ವಜನಿಕ ಕಟ್ಟಡಗಳಲ್ಲಿ ಶೌಚಾಲಯಗಳು ಇವೆಯಾದರೂ ಅಲ್ಲೆಲ್ಲ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಜಿಲ್ಲಾ ಸಂಕೀರ್ಣಗಳ ಕಚೇರಿ, ಜಿಲ್ಲಾ ಪಂಚಾಯಿತಿ ಭವನದಲ್ಲಿ ಶೌಚಗೃಹಗಳು ತಕ್ಕಮಟ್ಟಿಗೆ ಉತ್ತಮ ಸ್ಥಿತಿಯಲ್ಲಿ ಇವೆ. ಆದರೆ, ಮಿನಿ ವಿಧಾನಸೌಧ ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳಲ್ಲಿನ ಸ್ಥಿತಿ ಅಷ್ಟೇ ಶೋಚನೀಯವಾಗಿದೆ. ಕೆಲವು ಕಡೆ ದುರ್ವಾಸನೆಗೆ ಬೇಸತ್ತೇ ಜನರು ಬಯಲು ಶೌಚಕ್ಕೆ ಹೋಗುತ್ತಾರೆ.

ಕೆಂಪೇಗೌಡ ವೃತ್ತದಲ್ಲಿನ ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಾಲಯ ಕೇವಲ ಪುರುಷರಿಗೆ ಮಾತ್ರ ಮೀಸಲಾಗಿದೆ. ಇಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಆಗಿಲ್ಲ. ಸ್ತ್ರೀಯರು ಶೌಚ ಕ್ರಿಯೆಗೆ ಹುಡುಕಾಟ ನಡೆಸಬೇಕಿದೆ. ಬೀದಿ ಬದಿಯ ಮಹಿಳಾ ವ್ಯಾಪಾರಿಗಳು, ಅಂಗಡಿ ಮುಂಗಟ್ಟುಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ನಗರಕ್ಕೆ ಬಂದು ಹೋಗುವ ಮಹಿಳೆಯರಿಗೆ ಕಷ್ಟ ತಪ್ಪಿದ್ದಲ್ಲ. ಸಣ್ಣಪುಟ್ಟ ಅಂಗಡಿ ಮುಂಗಟ್ಟುಗಳಲ್ಲಿ ಪ್ರತ್ಯೇಕ ಆಲಯಗಳ ವ್ಯವಸ್ಥೆ ಇಲ್ಲ. ಇಂತಹ ಕಡೆ ಮಹಿಳಾ ಕಾರ್ಮಿಕರು ತೊಂದರೆ ಅನುಭವಿಸುತ್ತಾರೆ.

ಬಿಡದಿಯಲ್ಲೂ ತೊಂದರೆ: ಬಿಡದಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಿ ಐದು ವರ್ಷ ಕಳೆದಿದೆ. ಹೀಗಿದ್ದೂ ಇಲ್ಲಿ ಸದ್ಯಕ್ಕೆ ಪಶು ಆಸ್ಪತ್ರೆ ಬಳಿ ಒಂದೇ ಒಂದು ಸಮುದಾಯ ಶೌಚಾಲಯ ಇದೆ. ಇದರ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲಾಗಿದೆ. ಕಟ್ಟಡ ಮುಂಭಾಗದ ಪ್ರದೇಶವನ್ನು ವರ್ತಕರು ಅತಿಕ್ರಮಿಸಿದ್ದು, ಜನರು ಒಳಹೋಗುವುದೇ ಕಷ್ಟವಾಗಿದೆ. ಅದರಲ್ಲೂ ಸ್ತ್ರೀಯರು ಶೌಚಾಲಯ ಬಳಕೆ ಮಾಡಲು ಹಿಂದೇಟು ಹಾಕುತ್ತಾರೆ. ಇಲ್ಲಿನ ಬಿಎಂಟಿಸಿ ಬಸ್‌ ನಿಲ್ದಾಣದ ಆವರಣದಲ್ಲೂ ಒಂದು ಸಾರ್ವಜನಿಕ ಶೌಚಗೃಹ ಇದ್ದು, ಸದ್ಯ ಅದರ ಬಾಗಿಲು ಬಂದ್ ಆಗಿದೆ.

ಸದ್ಯ ಬಿಡದಿಯ ಜನಸಂಖ್ಯೆ 50 ಸಾವಿರ ದಾಟಿದೆ. ಕೈಗಾರಿಕಾ ಪ್ರದೇಶವೂ ಇದ್ದು, ನಿತ್ಯ ಸಾವಿರಾರು ಮಂದಿ ಬಂದು ಹೋಗುತ್ತಾರೆ. ಇಲ್ಲಿ ಜನಸಂಖ್ಯೆಗೆ ತಕ್ಕಂತೆ ಇನ್ನಷ್ಟು ಶೌಚಗೃಹಗಳ ಅಗತ್ಯ ಇದ್ದು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಹೇಳುತ್ತಾರೆ.

ಕಟ್ಟಿ ಬೀಗ ಜಡಿದರು!

ರಾಮನಗರದ ಕೆಲವು ಕಡೆ ವಿವಿಧ ಅನುದಾನಗಳ ಅಡಿಯಲ್ಲಿ ಸಾರ್ವಜನಿಕರಿಗಾಗಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇವುಗಳನ್ನು ಉದ್ಘಾಟನೆ ಮಾಡುವುದನ್ನು ಅಧಿಕಾರಿ–ಜನಪ್ರತಿನಿಧಿಗಳು ಮರೆತಿದ್ದಾರೆ. ಕೈಗಾರಿಕಾ ಪ್ರದೇಶದ ಮುಂಭಾಗ, ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನದ ಅಡಿಯಲ್ಲಿ ಹೊಸತಾಗಿ ಶೌಚಾಲಯ ಕಟ್ಟಲಾಗಿದೆ. ಆದರೆ ವರ್ಷವಾದರೂ ಇದಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಕೂಡಿಬಂದಿಲ್ಲ. ರೇಷ್ಮೆಗೂಡು ಮಾರುಕಟ್ಟೆ ಸಮೀಪ ಎಬಿಆರ್‌ ಹೋಟೆಲ್‌ ಜಾಗಕ್ಕೆ ಹೊಂದಿಕೊಂಡಂತೆ ಇರುವ ಸ್ಥಳದಲ್ಲಿ ನಗರಸಭೆಯ 2017–18ನೇ ಸಾಲಿನ ಅನುದಾನದಲ್ಲಿ ಹೊಸ ಕಟ್ಟಡ ಕಟ್ಟಿ ಹಾಗೆಯೇ ಬಿಡಲಾಗಿದೆ. ಹೀಗಾಗಿ ರೇಷ್ಮೆ ಮಾರುಕಟ್ಟೆಗೆ ಬರುವ ರೈತರು ಇಂದಿಗೂ ಬಯಲನ್ನೇ ಆಶ್ರಯಿಸಿದ್ದಾರೆ.

ನಗರದ ಒಳಗೆ ಇರುವ ರಾಮದೇವರ ಬೆಟ್ಟ, ರಂಗರಾಯರದೊಡ್ಡಿ ಕೆರೆ ಮೊದಲಾದ ಕಡೆಗಳಲ್ಲಿ ಜನರ ಅನುಕೂಲಕ್ಕೆಂದು ಸರ್ಕಾರದ ವಿವಿಧ ಅನುದಾನದಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಕಟ್ಟಡಗಳಿಗೆ ಬೀಗ ಜಡಿದು ಹಾಗೆಯೇ ಬಿಡಲಾಗಿದೆ. ಹೀಗಾಗಿ ಶೌಚಗೃಹಗಳೂ ಇದ್ದೂ ಇಲ್ಲದಂತೆ ಆಗಿದೆ.ರಾಮನಗರದ ಗಾಂಧಿ ಉದ್ಯಾನ ಮುಂಭಾಗ ಅಂಗವಿಕಲರಿಗೆಂದು
₹10 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿ ಮೂರು ವರ್ಷ ಕಳೆದರೂ ಇನ್ನೂ ಬಾಗಿಲು ತೆರೆದಿಲ್ಲ.

ಇ–ಶೌಚಾಲಯ; ಈಡೇರದ ಆಶಯ

ಜಿಲ್ಲೆಯ ನಗರಸಭೆ ಹಾಗೂ ಪುರಸಭೆಗಳ ವ್ಯಾಪ್ತಿಯಲ್ಲಿ ಜನರ ಉಪಯೋಗಕ್ಕಾಗಿ ಇ–ಶೌಚಾಲಯಗಳನ್ನು ಸ್ಥಾಪಿಸಲಾಗಿದೆ. ಆದರೆ ನಿರ್ವಹಣೆ ಕೊರತೆ ಮತ್ತು ಜನರಲ್ಲಿ ಅರಿವಿನ ಕೊರತೆಯಿಂದಾಗಿ ಇವುಗಳ ಆಶಯವೇ ಈಡೇರದಂತೆ ಆಗಿದೆ.

ರಾಮನಗರದಲ್ಲಿ ನಾಲ್ಕು ಇ–ಶೌಚಾಲಯಗಳಿದ್ದು, ಪ್ರತಿಯೊಂದಕ್ಕೂ ತಲಾ ₹ 7 ಲಕ್ಷ ಅನುದಾನ ವ್ಯಯಿಸಲಾಗಿದೆ. ಸ್ವಯಂಚಾಲಿತ ಬಳಕೆ ವ್ಯವಸ್ಥೆಯನ್ನು ಇವು ಒಳಗೊಂಡಿದ್ದು, ನಾಣ್ಯ ಒಳ ಹಾಕಿ ಬಳಕೆ ಮಾಡಬಹುದಾಗಿದೆ. ಆದರೆ ನಿರ್ವಹಣೆ ಕೊರತೆ, ತಾಂತ್ರಿಕ ದೋಷಗಳ ಕಾರಣ ಬಹುತೇಕ ಸಂದರ್ಭದಲ್ಲಿ ಇವು ಬಳಕೆಗೆ ಲಭ್ಯವೇ ಇರುವುದಿಲ್ಲ. ಹಿಂದೊಮ್ಮೆ ಸಂಬಂಧಿಸಿದ ಗುತ್ತಿಗೆದಾರರೇ ನಾಪತ್ತೆ ಆಗಿದ್ದಾಗಿ ಅಧಿಕಾರಿಗಳು ಹೇಳುತ್ತಾರೆ.

ಕನಕಪುರ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ಆರು ಇ–ಶೌಚಾಲಯಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಬಹುತೇಕವು ಬಳಕೆಯಲ್ಲಿ ಇಲ್ಲ. ನಿರ್ವಹಣೆ ಮಾಡದೇ ಹಾಗೆಯೇ ಬಿಟ್ಟಿದ್ದು, ಜನರು ಇವುಗಳ ಇರುವಿಕೆಯನ್ನೇ ಮರೆತಿದ್ದಾರೆ. ಇಡೀ ನಗರಕ್ಕೆ ಒಂದೇ ಒಂದು ಸಮುದಾಯ ಶೌಚಾಲಯ ಮಾತ್ರ ಬಳಕೆಯಲ್ಲಿದೆ.

ಚನ್ನಪಟ್ಟಣದಲ್ಲೂ ಬಾಗಿಲು ತೆರೆದಿಲ್ಲ
ಚನ್ನಪಟ್ಟಣ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ಐದು ಸಮುದಾಯ ಶೌಚಾಲಯಗಳು ಇದ್ದು, ಇದರಲ್ಲಿ ಮೂರು ಮಾತ್ರ ಬಳಕೆಯಲ್ಲಿ ಇವೆ. ಇನ್ನು ಎರಡಕ್ಕೆ ಬೀಗ ಹಾಕಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಎರಡು ಹಾಗೂ ನಗರಸಭೆ ಆವರಣದಲ್ಲಿ ಒಂದು ಸಾರ್ವಜನಿಕ ಶೌಚಾಲಯ ಇದ್ದು, ಇವುಗಳ ನಿರ್ವಹಣೆಯನ್ನು ಗುತ್ತಿಗೆ ನೀಡಲಾಗಿದೆ. ಸ್ವಚ್ಛತೆ ವ್ಯವಸ್ಥೆ ಸಾಮಾನ್ಯವಾಗಿದೆ. ತಾಲ್ಲೂಕು ಪಂಚಾಯಿತಿ ಆವರಣ ಹಾಗೂ ಕರಬಲ ಮೈದಾನದಲ್ಲಿ ಕಟ್ಟಲಾದ ಕಟ್ಟಡಗಳು ಇನ್ನೂ ಉದ್ಘಾಟನೆ ಆಗಿಲ್ಲ. ಕರಬಲ ಮೈದಾನದಲ್ಲಿ ವ್ಯಾಪಾರಸ್ಥರ ಅನುಕೂಲಕ್ಕೆಂದು ಶೌಚಾಲಯ ಕಟ್ಟಲಾಗಿತ್ತು. ಆದರೆ ಆದರೆ ಅಲ್ಲಿ ನಿರ್ಮಾಣವಾದ ಅಂಗಡಿಗಳು ಹರಾಜಾಗದ ಕಾರಣಕ್ಕೆ ಶೌಚಾಲಯವೂ ಸಹ ವ್ಯರ್ಥವಾಗಿದೆ.

ಮಾಗಡಿಯಲ್ಲಿ ಶೋಚನೀಯ
ಮಾಗಡಿ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯಗಳ ಸ್ಥಿತಿ ಶೋಚನೀಯವಾಗಿದೆ. ಬೀದಿಬದಿ ತರಕಾರಿ ಮಾರುವ ಮಹಿಳೆಯರು ನಿತ್ಯಕರ್ಮಗಳನ್ನು ಪೂರೈಸಲು ಹರಸಾಹಸ ಪಡಬೇಕಿದೆ. ಚಾರಿತ್ರಿಕ ಕೋಟೆಯನ್ನು ಬಯಲು ಬಹಿರ್ದೆಸೆಗೆ ಬಳಸಿಕೊಳ್ಳಲಾಗುತ್ತಿದೆ.

ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ರಸ್ತೆಬದಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ ಮೂರು ವರ್ಷ ಕಳೆದಿದೆ. ಅಪೂರ್ಣ ಕಾಮಗಾರಿಯಿಂದಾಗಿ ಉದ್ಘಾಟನೆಯಾಗಿಲ್ಲ. ಅದರ ಪಕ್ಕದಲ್ಲಿಯೇ ಇ– ಶೌಚಾಲಯ ನಿರ್ಮಿಸಿ ವರ್ಷ ಕಳೆದಿದೆ. ಯಾರೂ ಬಳಸುತ್ತಿಲ್ಲ. ರಾಜೀವಗಾಂಧಿ ನಗರದಲ್ಲಿ ಕೊಳೆಗೇರಿ ನಿರ್ಮೂಲನೆ ಮಂಡಳಿಯಿಂದ ಕಟ್ಟಿಸಿರುವ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಲಾಗಿದೆ. 10 ವರ್ಷ ಕಳೆದರೂ ಸಾರ್ವಜನಿಕರಿಗೆ ಬಳಕೆಗೆ ಅವಕಾಶ ಮಾಡಿಕೊಟ್ಟಿಲ್ಲ. ತಹಶೀಲ್ದಾರ್ ಕಚೇರಿಯಲ್ಲಿ ಇ– ಶೌಚಾಲಯವಿದ್ದು, ಬಳಕೆಯಾಗುತ್ತಿಲ್ಲ. ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಬಳಕೆಗೆ ಶೌಚಾಲಯಗಳಿವೆ. ಕಚೇರಿಗೆ ಬಂದ ಸಾರ್ವಜನಿಕರು ಗೋಡೆ ಅಥವಾ ಬಯಲನ್ನು ಬಳಸಿ ಮಲ, ಮೂತ್ರ ವಿಸರ್ಜಿಸುತ್ತಿದ್ದಾರೆ.

ಸ್ವಚ್ಛತೆಗೆ ಆದ್ಯತೆ ನೀಡಿ
ರಾಮನಗರದಲ್ಲಿನ ಸಮುದಾಯಗಳಲ್ಲಿ ಸ್ವಚ್ಛತೆ ಸಾಮಾನ್ಯವಾಗಿದೆ. ಶುಚಿತ್ವಕ್ಕೆ ಆದ್ಯತೆ ನೀಡುವ ಜೊತೆಗೆ ಜನನಿಬಿಡ ಪ್ರದೇಶಗಳಲ್ಲಿ ಇನ್ನಷ್ಟು ಉತ್ತಮ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು.
-ಶಿವಕುಮಾರ್,ಆಟೊ ಚಾಲಕ, ರಾಮನಗರ

ಉದ್ಘಾಟನೆ ಕಂಡಿಲ್ಲ
ರಾಮನಗರ ಕೈಗಾರಿಕಾ ಪ್ರದೇಶದ ಬಳಿ ಹೆದ್ದಾರಿಗೆ ಹೊಂದಿಕೊಂಡಂತೆ ಶೌಚಾಲಯ ಕಟ್ಟಿ ವರ್ಷ ಕಳೆದರೂ ಉದ್ಘಾಟನೆ ಆಗಿಲ್ಲ. ಹೀಗಾಗಿ ಜನರು ಬಯಲು ಶೌಚ ಮಾಡುತ್ತಿದ್ದಾರೆ. ಇನ್ನಾದರೂ ಇದರ ಬಾಗಿಲು ತೆರೆಯಿರಿ
-ಮಹಮ್ಮದ್‌ ಹಫೀಜ್‌,ವರ್ತಕ, ರಾಮನಗರ

*
ಶೌಚಗೃಹ ನಿರ್ಮಿಸಿ
ಬಿಡದಿಯಲ್ಲಿ ಒಂದೇ ಒಂದು ಸಮುದಾಯ ಇದ್ದು, ಇಲ್ಲಿಯೂ ಕಳೆದ ಮೂರು ದಿನದಿಂದ ನೀರು ಪೂರೈಕೆ ಆಗುತ್ತಿದೆ. ಶುಚಿತ್ವ ಎಂಬುದು ಅಷ್ಟಕ್ಕಷ್ಟೇ. ಪುರಸಭೆ ಹಾಗೂ ಜನಪ್ರತಿನಿಧಿಗಳು ಇನ್ನಷ್ಟು ಶೌಚಗೃಹಗಳನ್ನು ನಿರ್ಮಾಣ ಮಾಡಬೇಕು
-ವಿನೋದ್,ಬಿಡದಿ ನಿವಾಸಿ

*
ಬೀಗ ತೆಗೆಸಿ
ಮಾಗಡಿಯ ರಾಜೀವಗಾಂಧಿ ನಗರದಲ್ಲಿನ ಸಾರ್ವಜನಿಕ ಶೌಚಾಲಯದ ಬೀಗ ತೆಗೆಸಬೇಕು. ಕೂಲಿಕಾರ್ಮಿಕರು, ಕಡುಬಡ ಮಹಿಳೆಯರು ಬಯಲಿನಲ್ಲಿ ಬಹಿರ್ದೆಸೆಗೆ ಹೋಗುವುದನ್ನು ತಪ್ಪಿಸಬೇಕು.
-ಧರ್ಮರಾಜ್,ಪದವಿ ವಿದ್ಯಾರ್ಥಿ, ಮಾಗಡಿ

(ಪೂರಕ ಮಾಹಿತಿ: ಎಚ್‌.ಎಂ. ರಮೇಶ್‌, ದೊಡ್ಡಬಾಣಗೆರೆ ಮಾರಣ್ಣ, ಕೃಷ್ಣಮೂರ್ತಿ ಬರಡನಹಳ್ಳಿ, ಸೋಮಶೇಖರ್‌ ಹೆಗ್ಗಡಗೆರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.