ಹಾರೋಹಳ್ಳಿ: ರೈತರ ಅನುಕೂಲಕ್ಕಾಗಿ ಅಂಗಾಂಶ ಕೃಷಿ ಘಟಕ ಸ್ಥಾಪಿಸುವುದಾಗಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದಿಂದ ₹77.97 ಲಕ್ಷ ಸಹಾಯಧನ ಪಡೆದು ವಂಚಿಸಿರುವ ಮೂವರ ವಿರುದ್ಧ ಹಾರೋಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಚಿಕ್ಕಮಗಳೂರು ಮೂಲದ ಪರಮೇಶಯ್ಯ, ಬೆಂಗಳೂರಿನ ಎಚ್ಎಸ್ಆರ್ ಲೇ ಔಟ್ ನಿವಾಸಿ ಶುಭ ಮತ್ತು ಹರೀಶ್ ಕೆ.ಆಚಾರ್ ಈ ಮೂವರ ವಿರುದ್ಧ ನೆಲಮಂಗಲದ ರವೀಶ್ ಎಂಬುವರು ನೀಡಿದ ದೂರಿನ ಮೇರೆಗೆ ಹಾರೋಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ತೋಟಗಾರಿಕೆ ಇಲಾಖೆಯ ಎನ್‌ಹೆಚ್ಎಂ, ಎಸ್ಎಚ್ಎಂ, ಎಂಐಡಿಹೆಚ್ ಯೋಜನೆ ಅಡಿ ಸಬ್ಸಿಡಿ ಪಡೆದು ಅಂಗಾಂಶ ಕೃಷಿ ಘಟಕ ಮತ್ತು ಶೀತಲ ಘಟಕ ಸ್ಥಾಪಿಸಲು ಅವಕಾಶವಿದೆ. ಸರ್ಕಾರದಿಂದ ಸಹಾಯಧನ ಪಡೆದು ಅಂಗಾಂಶ ಕೃಷಿ ಘಟಕ ಸ್ಥಾಪಿಸಿದರೆ ಕನಿಷ್ಠ 15 ವರ್ಷ ವಾರ್ಷಿಕವಾಗಿ ₹25 ಲಕ್ಷ ಸಸಿಗಳನ್ನು ರೈತರಿಗೆ ಕಡಿಮೆ ದರದಲ್ಲಿ ನೀಡಬೇಕು ಎಂಬ ಷರತ್ತುಗಳೊಂದಿಗೆ ಸರ್ಕಾರದಿಂದ ಸಹಾಯಧನ ಮಂಜೂರು ಮಾಡಿತ್ತು.
ಇದನ್ನೇ ಬಂಡವಾಳ ಮಾಡಿಕೊಂಡಿರುವ ಆರೋಪಿಗಳು 2018ರಲ್ಲಿ ರಾಮನಗರ ಜಿಲ್ಲಾ ತೋಟಗಾರಿಕೆ ಇಲಾಖೆ ಕಾರ್ಯದೇಶ ಪಡೆದು ಕೃಷ್ಣ ಬಯೋಟೆಕ್ ಸಂಸ್ಥೆಯಿಂದ ಕಿರಣಗೆರೆ ಗ್ರಾಮದಲ್ಲಿ ಅಂಗಾಂಶ ಕೃಷಿ ಘಟಕ ಸ್ಥಾಪಿಸಿದ್ದರು. ನಕಲಿ ಡಿಪಿಆರ್ ಮತ್ತು ನಕಲಿ ಬಿಲ್ ಸೃಷ್ಟಿಸಿ ಸರ್ಕಾರದಿಂದ ₹77.97 ಲಕ್ಷ ಸಹಾಯಧನ ಪಡೆದಿದ್ದ ಆರೋಪಿಗಳು ನಂತರ ಅಂಗಾಂಶ ಕೃಷಿ ಘಟಕವನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು ಎಂದು ದೂರಿನಲ್ಲಿ ಆರೋಪ ಮಾಡಲಾಗಿತ್ತು.
ಪ್ರಕರಣದ ಪ್ರಮುಖ ಆರೋಪಿ ಪರಮೇಶಯ್ಯ ಸರ್ಕಾರದಿಂದ ಸಹಾಯಧನ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರು ಮತ್ತು ಸರ್ಕಾರಿ ಅಧಿಕಾರಿಗಳಿಂದ ಹಣ ಪಡೆದಿದ್ದ. ಹಲವು ಉದ್ಯಮಿಗಳಿಗೆ ನಕಲಿ ದಾಖಲೆ, ನಕಲಿ ಬಿಲ್ ಸೃಷ್ಟಿಸಿ ವಂಚನೆ ಮಾಡಿದ್ದಾನೆ. ಕೆಲಸ ಕೊಡಿಸುವುದಾಗಿ ಜನರಿಂದ ಹಣ ಪಡೆದು ವಂಚನೆ ಮಾಡಿದ್ದಾನೆ. ಈ ಸಂಬಂಧ ಈಗಾಗಲೇ ಈತನ ವಿರುದ್ಧ ಹಲವು ಪ್ರಕರಣ ದಾಖಲಾಗಿ ಶಿಕ್ಷೆಯೂ ಆಗಿದೆ ಎಂದು ದೂರಿನಲ್ಲಿ ಅಪಾದನೆ ಮಾಡಿದ್ದಾರೆ.
ಸರ್ಕಾರಕ್ಕೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರ ನಿರ್ದೇಶನದಂತೆ ಈಗಾಗಲೇ ಆರೋಪಿ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಉಪ ಲೋಕಾಯುಕ್ತರು ವಿಚಾರಣೆ ನಡೆಸಿದ್ದಾರೆ ಎಂದು ರವೀಶ್ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.