ADVERTISEMENT

ಕನಕಪುರ: ಡಿಸಿಎಂ ಊರಲ್ಲಿ ಶಾಲಾ ಆವರಣಕ್ಕೆ ನುಗ್ಗಿದ ಕಾಡಾನೆ

ದೊಡ್ಡಆಲಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬಂದ ಒಂಟಿಯಾನೆ; ಅರಣ್ಯಕ್ಕೆ ಓಡಿಸಿದ ಆನೆ ಕಾರ್ಯಪಡೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 7:48 IST
Last Updated 24 ಡಿಸೆಂಬರ್ 2025, 7:48 IST
   

ಕನಕಪುರ (ರಾಮನಗರ): ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ಉಪ ಮುಖ್ಯಮಂತ್ರಿ ಡಿ.ಕೆ.‌ ಶಿವಕುಮಾರ್ ಅವರ ಊರಾದ ದೊಡ್ಡಆಲಹಳ್ಳಿಯ ಮೊರಾರ್ಜಿ‌ ದೇಸಾಯಿ ವಸತಿ ಶಾಲೆ ಆವರಣಕ್ಕೆ ಕಾಡಾನೆ ನುಗ್ಗಿ ಓಡಾಡಿ ಆತಂಕ ಸೃಷ್ಟಿಸಿರುವ ಘಟನೆ ಸೋಮವಾರ ನಡೆದಿದೆ. ಆನೆ ಶಾಲಾವರಣದಲ್ಲಿ ಓಡಾಡಿರುವ ವಿಡಿಯೊ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ.

ಕಾವೇರಿ ವನ್ಯಜೀವಿಧಾಮದ ಕಡೆಯಿಂದ ಬಂದಿರುವ ಒಂಟಿಯಾನೆ, ಸಾತನೂರು ಮುಖ್ಯರಸ್ತೆಯ ಯಡಮಾರನಹಳ್ಳಿಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಅಚ್ಚಲು ಗ್ರಾಮ ಪಂಚಾಯಿತಿಯ ಕರ ವಸೂಲಿಗಾರ ರುದ್ರಸ್ವಾಮಿ ಮೇಲೆ ದಾಳಿ ನಡೆಸಿದೆ. ಬೈಕ್‌ನಿಂದ ಕೆಳಕ್ಕೆ ಬಿದ್ದ ಅವರು ಕೂಡಲೇ ಪಕ್ಕಕ್ಕೆ ಓಡಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ.

ಘಟನೆ ಬಳಿಕ ಗಾಬರಿಗೊಂಡಿರುವ ಆನೆ, ನಂತರ ದೊಡ್ಡಆಲಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣಕ್ಕೆ ನುಗ್ಗಿದೆ. ಶಾಲೆ ಆನೆಯನ್ನು ಕಂಡ ಶಾಲೆ ಸಿಬ್ಬಂದಿ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಬೋಧಕೇತರ ಸಿಬ್ಬಂದಿ ಕಟ್ಟಡದಿಂದ ಹೊರಕ್ಕೆ ಬಾರದಂತೆ ನೋಡಿಕೊಂಡಿದ್ದಾರೆ.

ADVERTISEMENT

ಸ್ಥಳಕ್ಕೆ ಬಂದ ಇಲಾಖೆಯ ಅಧಿಕಾರಿಗಳು ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿ, ಆನೆಯನ್ನು ಶಾಲಾವರಣದಿಂದ ಹೊರಕ್ಕೆ ಹೋಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ, ಕಾರ್ಯಾಚರಣೆ ಮೂಲಕ ಅರಣ್ಯಕ್ಕೆ ಓಡಿಸಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಶಾಲೆಯಲ್ಲಿ ಸುಮಾರು 250 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ, ಶಾಲೆಗೆ ಸರಿಯಾದ ಕೌಂಪಾಂಡ್ ಇಲ್ಲದ ಕಾರಣ ಆನೆ ಸರಾಗವಾಗ ಶಾಲಾವರಣಕ್ಕೆ ಬಂದಿದೆ. ಇಲ್ಲದಿದ್ದರೆ, ಅದು ಬೇರೆ ಕಡೆಗೆ ಹೋಗುತ್ತಿತ್ತು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.