ADVERTISEMENT

ವಿದ್ಯುತ್ ಪ್ರವಹಿಸಿ ಚಿಂದಿ ಆಯುವ ಮಹಿಳೆ ಸಾವು; ಬೆಸ್ಕಾಂ ನಿರ್ಲಕ್ಷ್ಯ ಆರೋಪ

ಕನಕಪುರ: ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2023, 10:47 IST
Last Updated 16 ಆಗಸ್ಟ್ 2023, 10:47 IST
   

ಕನಕಪುರ: ಬೆಸ್ಕಾಂ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಪ್ರವಹಿಸಿ ಚಿಂದಿ ಆಯುವ ಮಹಿಳೆ ಮೃತಪಟ್ಟಿದ್ದಾರೆ ಎಂದು ಆರೋಪಿಸಿ, ನಗರದಲ್ಲಿರುವ ಬೆಸ್ಕಾಂ ಕಚೇರಿ ಎದುರು ಬುಧವಾರ ಮಹಿಳೆಯ ಶವವಿಟ್ಟು ಪ್ರತಿಭಟನೆ ನಡೆಸಿದ ಸ್ಥಳೀಯರು ಹಾಗೂ ರೈತ ಸಂಘದ ಸದಸ್ಯರು ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ನಗರದ ಪೇಟೆ ಕೆರೆಯ ಹಳೆ ಎಪಿಎಂಸಿ ಮಾರ್ಕೆಟ್‌ ಬಳಿ ಮಂಗಳವಾರ ವಿದ್ಯುತ್ ಪರಿವರ್ತಕವಿದ್ದ ಕಂಬದ ಬಳಿ ಚಿಂದಿ ಆಯುತ್ತಿದ್ದ ಮೇರಿ (25) ಎಂಬುವರು ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದರು.

ವಿದ್ಯುತ್ ಕಂಬದ ಸುತ್ತ ಬೆಳೆದುಕೊಂಡಿದ್ದ ಗಿಡಗಂಟಿಗಳನ್ನು ತೆರವು ಮಾಡದ ಬೆಸ್ಕಾಂ ಸಿಬ್ಬಂದಿ, ಅದರ ಸುತ್ತ ವಿದ್ಯುತ್ ಹರಿಯುತ್ತಾ ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಗಮನಿಸಿಲ್ಲ. ಅವರ ನಿರ್ಲಕ್ಷ್ಯದಿಂದಾಗಿ, ಅಮಾಯಕ ಮಹಿಳೆಯ ಜೀವ ಹೋಗಿದೆ. ಇದಕ್ಕೆ ಬೆಸ್ಕಾಂನವರೇ ನೇರ ಹೊಣೆ ಎಂದು ಆರೋಪಿಸಿದರು.

ADVERTISEMENT

ಅಧಿಕಾರಿಗಳು ಮಹಿಳೆ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಅಂತ್ಯಸಂಸ್ಕಾರಕ್ಕಾಗಿ ₹25 ಸಾವಿರ ಪಾವತಿಸಬೇಕು. ಇಲ್ಲದಿದ್ದರೆ, ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.