ADVERTISEMENT

ಸಾಲದ ಹಣ ವಾಪಸ್‌ ನೀಡದ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಕಿರುಕುಳ, ಹಲ್ಲೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 18:23 IST
Last Updated 13 ಜೂನ್ 2019, 18:23 IST
   

ರಾಮನಗರ: ಚೀಟಿ ವ್ಯವಹಾರದ ಬಾಕಿ ಹಣ ನೀಡುವಂತೆ ಒತ್ತಾಯಿಸಿ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಕೋಡಿಗೆಹಳ್ಳಿಯಲ್ಲಿ ಗುರುವಾರ ನಡೆದಿದೆ.

‘ಕೊಳ್ಳೇಗಾಲದವರಾದ ರಾಜಮಣಿ ಎಂಬುವವರು ಕೆಲವು ವರ್ಷಗಳಿಂದ ಬೆಂಗಳೂರು ಹೊರವಲಯದಲ್ಲಿ ಇರುವ ಕೋಡಿಗೆಹಳ್ಳಿಯಲ್ಲಿ ಮಗಳ ಜೊತೆ ವಾಸವಿದ್ದರು. ಜೀವನೋಪಾಯಕ್ಕಾಗಿ ಸಣ್ಣ ಹೋಟೆಲ್‌ ನಡೆಸುತ್ತಿದ್ದರು. ಇದರ ಜತೆ ಗ್ರಾಮದಲ್ಲಿ ಚೀಟಿ ವ್ಯವಹಾರದಲ್ಲಿಯೂ ಪಾಲ್ಗೊಂಡಿದ್ದರು. ಆದರೆ ಅವರು ₹ 50 ಸಾವಿರದಷ್ಟು ಚೀಟಿ ಹಣ ಬಾಕಿ ಉಳಿಸಿಕೊಂಡಿದ್ದರು. ಹಣ ಕೊಟ್ಟವರು ಪೀಡಿಸತೊಡಗಿದಾಗ ಗ್ರಾಮವನ್ನೇ ತೊರೆದಿದ್ದರು’ ಎಂದು ಸ್ಥಳೀಯರು ಮಾಹಿತಿ ನೀಡಿದರು.

ಗುರುವಾರ ರಾಜಮಣಿ ಅವರು ಗ್ರಾಮಕ್ಕೆ ವಾಪಸ್ ಆಗಿದ್ದರು. ಈ ಸಂದರ್ಭ ಆಕೆಯನ್ನು ಸ್ಥಳೀಯರು ಹಣ ಕೊಡುವಂತೆ ಪೀಡಿಸಿದ್ದರು. ಹಣ ನೀಡಲು ವಿಫಲರಾದಾಗ ಅವರನ್ನು ಹಿಡಿದು ವಿದ್ಯುತ್‌ ಕಂಬಕ್ಕೆ ಕಟ್ಟಿದರು. ಬಳಿಕ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎನ್ನಲಾಗಿದೆ.

ADVERTISEMENT

ಘಟನೆಯನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರಿಸಿದ್ದು, ಜನರು ಆಕೆಯನ್ನು ನಿಂದಿಸುತ್ತಿರುವ ಮಾತುಗಳು ರೆಕಾರ್ಡ್‌ ಆಗಿದ್ದವು. ವಿಡಿಯೊ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ತಾವರೆಕೆರೆ ಪೊಲೀಸರು ಎಚ್ಚೆತ್ತು, ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ರಕ್ಷಿಸಿದರು. ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಿಳೆ ಮತ್ತು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಸಂತ್ರಸ್ತೆಯ ದೂರು ಆಧರಿಸಿ ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದರು. ಗುಂಡ್ಲುಪೇಟೆಯಲ್ಲಿ ದಲಿತ ಯುವಕನನ್ನು ಬೆತ್ತಲಾಗಿಸಿ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಮಾಸುವ ಮುನ್ನವೇ ರಾಜಧಾನಿಗೆ ಸಮೀಪದಲ್ಲಿ ಮತ್ತೊಂದು ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿಯನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.