ADVERTISEMENT

ಶಿವಮೊಗ್ಗ: ಮುಂದುವರಿದ ಮುಷ್ಕರದ ಮಧ್ಯೆಯೇ ರಸ್ತೆಗಿಳಿದ 15 ಬಸ್‌ಗಳು

ಸಂಚಾರ ಸ್ಥಗಿತದಿಂದ ಪ್ರತಿ ದಿನ ₹ 35 ಲಕ್ಷ ನಷ್ಟ, ಎಲ್ಲೆಡೆ ಖಾಸಗಿ ಬಸ್‌ಗಳ ಸೇವೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 11:55 IST
Last Updated 8 ಏಪ್ರಿಲ್ 2021, 11:55 IST
ಶಿವಮೊಗ್ಗದ ಬಸ್‌ ನಿಲ್ದಾಣದಿಂದ ಗುರುವಾರ ಸೇವೆ ಆರಂಭಿಸಿದ ಕೆಎಸ್‌ಆರ್‌ಟಿಸಿಯ ಕೆಲವು ಬಸ್‌ಗಳು.
ಶಿವಮೊಗ್ಗದ ಬಸ್‌ ನಿಲ್ದಾಣದಿಂದ ಗುರುವಾರ ಸೇವೆ ಆರಂಭಿಸಿದ ಕೆಎಸ್‌ಆರ್‌ಟಿಸಿಯ ಕೆಲವು ಬಸ್‌ಗಳು.   

ಶಿವಮೊಗ್ಗ: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ನಡೆಸುತ್ತಿರುವ ಮುಷ್ಕರ ಮುಂದಿವರಿದಿರುವ ಮಧ್ಯೆಯೇ ಗುರುವಾರ 15 ಬಸ್‌ಗಳು ಜಿಲ್ಲೆಯ ಒಳಗೆ ಸಂಚಾರ ಆರಂಭಿಸಿದವು.

ಸಾಕಷ್ಟು ಖಾಸಗಿ ಬಸ್‌ಗಳು ಎರಡನೇ ದಿನವೂ ವಿವಿಧ ಮಾರ್ಗಗಳಲ್ಲಿ ಸಂಚರಿಸಿದವು. ಮುಷ್ಕರದ ಕಾರಣ ಜನರು ಹೆಚ್ಚಾಗಿ ಇರಲಿಲ್ಲ. ಕೆಲವು ಮಾರ್ಗಗಳ ಖಾಸಗಿ ಬಸ್‌ಗಳಲ್ಲಿ ಜನ ಸಂದಣಿ ಕಂಡುಬಂತು. ಕೆಲವು ಚಾಲಕರು, ನಿರ್ವಾಹಕರ ಮನವೊಲಿಸಿದ ಅಧಿಕಾರಿಗಳು 15 ಬಸ್‌ಗಳನ್ನು ರಸ್ತೆಗೆ ಇಳಿಸಿದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಶಿವಮೊಗ್ಗ ನಗರದಿಂದ ಸಾಗರ, ಹೊನ್ನಾಳಿ, ಭದ್ರಾವತಿ, ಶಿಕಾರಿಪುರ, ಹರಿಹರ ಭಾಗಗಳಿಗೆ ಬಸ್‌ಗಳು ಸಂಚರಿಸಿದವು.

ಶಿವಮೊಗ್ಗ ಘಟಕದಿಂದ 5 ಬಸ್‌ಗಳು, ಸಾಗರ ಘಟಕದಿಂದ 2, ಹೊನ್ನಾಳಿ ಘಟಕದಿಂದ 2 ಬಸ್‌ಗಳು ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋದವು. ಬಹುತೇಕ ಎಲ್ಲಾ ಖಾಸಗಿ ಬಸ್‌ಗಳು ಪರಿಸ್ಥಿತಿಯ ಅವಕಾಶ ಸದ್ಬಳಕೆ ಮಾಡಿಕೊಂಡು ಹಲವು ಸುತ್ತು ಸಂಚಾರ ನಡೆಸಿದವು. ನಗರ ಪ್ರದೇಶಗಳಿಂದ ಗ್ರಾಮಗಳಿಗೆ ಹೋಗುವ ಜನರು ಆಟೊರಿಕ್ಷಾ, ಸರಕು ಸಾಗಣೆ ವಾಹನಗಳ ಮೂಲಕವೂ ಸಾಗಿದರು. ಕೆಲವು ಖಾಸಗಿ ವಾಹನಗಳು ಕೆಎಸ್‌ಆರ್‌ಟಿಸಿ ನಿಲ್ದಾಣದ ಒಳಗೆ ಪ್ರವೇಶಿಸಿ ಜನರನ್ನು ಹತ್ತಿಸಿಕೊಳ್ಳತ್ತಿದ್ದ ದೃಶ್ಯ ಕಂಡು ಬಂತು.

ADVERTISEMENT

ನೌಕರರ ಸಂಘಟನೆಗಳು ವೇತನ ಏರಿಕೆಗೆ ಆಗ್ರಹಿಸಿ ಬಿಗಿಪಟ್ಟು ಹಿಡಿದಿರುವ ಮಧ್ಯೆಯೇ ಕೆಲವರು ಕೆಲಸಕ್ಕೆ ಹಾಜರಾದುದು ಸಂಘಟನೆ ಮುಖಂಡರ ಕೆಂಗಣ್ಣಿಗೆ ಕಾರಣವಾಯಿತು.

ಶಿವಮೊಗ್ಗ ನಗರದಿಂದ ಚನ್ನಗಿರಿ, ಶಿಕಾರಿಪುರ, ತೀರ್ಥಹಳ್ಳಿ, ಹೊಸನಗರ, ಸಾಗರ ಮಾರ್ಗಗಳಲ್ಲಿ ಮೊದಲಿನಿಂದಲೂ ಖಾಸಗಿ ಬಸ್‌ಗಳೇ ಅಧಿಕ ಸಂಖ್ಯೆಯಲ್ಲಿ ಚಲಿಸುತ್ತಿವೆ. ಆ ಮಾರ್ಗಗಳ ಜನರಿಗೆ ಹೆಚ್ಚು ಅನನುಕೂಲವಾಗಿಲ್ಲ. ಹೊನ್ನಾಳಿ, ಭದ್ರಾವತಿ ಮಾರ್ಗ ಹಾಗೂ ಮೈಸೂರು, ಬೆಂಗಳೂರು, ಉತ್ತರ ಕರ್ನಾಟಕದ ಭಾಗಗಳಿಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗಿದೆ.

‘ಜಿಲ್ಲೆಯಲ್ಲಿ 320 ಬಸ್‌ಗಳು ಸೇವೆ ನೀಡುತ್ತಿವೆ. ಒಂದು ದಿನ ಬಸ್‌ ಸಂಚಾರ ಸ್ಥಗಿತಗೊಂಡರೆ ₹ 35 ಲಕ್ಷ ನಷ್ಟವಾಗುತ್ತದೆ. ಕೆಲವು ನೌಕರರು ಸ್ವಯಂ ಇಚ್ಚೆಯಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ. 15 ಬಸ್‌ಗಳ ಸಂಚಾರ ಆರಂಭಿಸಿದ್ದೇವೆ. ಅವರಿಗೆ ಭದ್ರತೆ ನೀಡಲಾಗಿದೆ. ನಾಳೆ ಇನ್ನಷ್ಟು ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.