
ಶಿವಮೊಗ್ಗ: ‘ಭಗವದ್ಗೀತೆಗೆ ಇಡೀ ರಾಷ್ಟ್ರವನ್ನು ಒಗ್ಗೂಡಿಸುವ ಶಕ್ತಿ ಇದೆ. ಹೀಗಾಗಿ ಗೀತಾ ಜಯಂತಿ ಆಚರಣೆ ಇಡೀ ದೇಶದಲ್ಲಿ ಸಹಜವಾಗಿ ಆಗಬೇಕಿದೆ. ಆಗ ಮಾತ್ರ ಭಗವದ್ಗೀತೆಯ ಆಶಯಗಳು ಎಲ್ಲರ ಮನೆ, ಮನದಲ್ಲಿ ಉಳಿಯಲಿವೆ’ ಎಂದು ಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸ್ವರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ, ಸ್ವರ್ಣರಶ್ಮಿ ಟ್ರಸ್ಟ್ ಆಶ್ರಯದಲ್ಲಿ ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಭಗವದ್ಗೀತಾ ಅಭಿಯಾನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಭಗದ್ಗೀತೆಯಿಂದ ಸಮಾಜದ ಪರಿವರ್ತನೆ ಸಾಧ್ಯವಿದೆ. ಗಣಪತಿ ಹಬ್ಬ ಆಚರಿಸುವ ರೀತಿಯಲ್ಲಿ ದೇಶದ ಜನರು ಗೀತಾ ಜಯಂತಿಯನ್ನು ಆಚರಿಸಬೇಕಿದೆ. ಅದಕ್ಕೆ ಜಾಗೃತಿ ಕಾರ್ಯಕ್ರಮ ನಡೆಸಬೇಕಿದೆ. ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರುವ ಜನಸಮುದಾಯ ನೋಡಿದರೆ ಆ ದಿನ ದೂರವಿಲ್ಲ ಎಂದು ಆಶಿಸಿದರು.
‘ಸಮಾಜ ಸಾಕಷ್ಟು ವ್ಯಸನಗಳಿಂದ ಬಳಲುತ್ತಿದೆ. 10 ವರ್ಷಗಳ ಹಿಂದೆಯೇ ಕೇಂದ್ರದ ಗೃಹ ಸಚಿವಾಲಯದ ವರದಿಯನ್ವಯ ದೇಶದಲ್ಲಿ ಎರಡು ಲಕ್ಷ ಮಹಿಳೆಯರು ಕಾಣೆಯಾಗಿದ್ದಾರೆ. ಅದು ಸಣ್ಣ ವಿಷಯ ಅಲ್ಲ. ಜೊತೆಗೆ ಕೊಲೆ, ದರೋಡೆಯಂತಹ ಅಪರಾಧ ಕೃತ್ಯಗಳು ಜಾಸ್ತಿಯಾಗುತ್ತಿವೆ. ಇದು ಸಮಾಜದ ನೈತಿಕತೆಯ ಪತನದ ಲಕ್ಷಣ. ನೈತಿಕತೆಯನ್ನು ಪುನರುತ್ಥಾನ ಮಾಡಲು ಭಗವದ್ಗೀತೆ ಶಕ್ತಿ ತುಂಬಲಿದೆ. ಅಪರಾಧ ಮಾಡದಂತೆ ತಡೆಯಲು ಅದರಲ್ಲಿ ಉತ್ತರವಿದೆ. ಹೀಗಾಗಿ ಭಗವದ್ಗೀತೆಯನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಹಾಗೂ ಅದನ್ನು ಕಲಿಸುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು.
ವ್ಯಕ್ತಿತ್ವ ವಿಕಸನ, ಸರ್ವ ಜನರ ಸುಖ, ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಈ ನಾಲ್ಕು ಅಂಶಗಳನ್ನು ಪ್ರಧಾನವಾಗಿಟ್ಟುಕೊಂಡು ಭಗವದ್ಗೀತಾ ಅಭಿಯಾನ ನಡೆಸಲಾಗುತ್ತಿದೆ. ಹೀಗಾಗಿ ಅಭಿಯಾನವು ಹೆಚ್ಚಿನ ಜನರನ್ನು ಒಳಗೊಳ್ಳುವ ಕೆಲಸವೂ ಆಗಬೇಕಿದೆ ಎಂದು ಆಶಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಕೃತ ಸಂಸ್ಕೃತ ವಿದ್ವಾಂಸ ವ್ಯಾಸನಕೆರೆ ಪ್ರಭಂಜನಾಚಾರ್ಯ ಮಾತನಾಡಿ, ‘ವಿಶ್ವದ ಮೂರು ವಿಶಿಷ್ಟ ಚಿಂತನ ಪ್ರಣಾಳಿಕೆಗಳಾದ ದ್ವೈತ, ಅದ್ವೈತ, ವಿಶಿಷ್ಟಾದ್ವೈತಕ್ಕೆ ಆಕರ ಗ್ರಂಥ ಭಗವದ್ಗೀತೆ. ಎಲ್ಲ ಆಪತ್ತುಗಳನ್ನು ಸುಟ್ಟು ಬೂದಿ ಮಾಡುವ ಶಕ್ತಿ ಇದಕ್ಕಿದೆ. ಪ್ರತಿ ಶ್ಲೋಕ, ಅಕ್ಷರವೂ ಉಪನಿಷತ್ ಆಗಿರುವುದು ಅದರ ವಿಶಿಷ್ಟ ಹಿರಿಮೆ’ ಎಂದರು.
ಭಗವದ್ಗೀತಾ ಅಭಿಯಾನದ ಕಾರ್ಯಾಧ್ಯಕ್ಷ ಅಶೋಕ್ ಜಿ.ಭಟ್ ಸ್ವಾಗತಿಸಿದರು. ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ, ತಾಳಗುಪ್ಪ ಕೂಡಲಿ ಮಠದ ಸಿದ್ದವೀರ ಸ್ವಾಮೀಜಿ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಭಗವದ್ಗೀತಾ ಅಭಿಯಾನದ ಪ್ರಧಾನ ಕಾರ್ಯದರ್ಶಿ ಕೆ.ಈ.ಕಾಂತೇಶ್, ಜಿಲ್ಲಾ ಪ್ರಧಾನ ಸಂಚಾಲಕರಾದ ಪಿ.ಪಿ.ಹೆಗಡೆ, ಲಕ್ಷ್ಮೀನಾರಾಯಣ ಭಟ್, ಭಜನಾ ಪರಿಷತ್‌ನ ಸಂದೇಶ ಉಪಾಧ್ಯಾಯ ಉಪಸ್ಥಿತರಿದ್ದರು.
25 ಸಾವಿರ ಜನರಿಂದ ಭಗವದ್ಗೀತೆ ಶ್ಲೋಕ..
ಭಗವದ್ಗೀತಾ ಅಭಿಯಾನದ ಅಂಗವಾಗಿ ನ.30ರಂದು ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಫ್ರೀಡಂ ಪಾರ್ಕ್‌ನಲ್ಲಿ 25 ಸಾವಿರ ಜನರು ಸೇರಿ ಭಗವದ್ಗೀತೆಯ ಶ್ಲೋಕ ಹೇಳುವ ಕಾರ್ಯಕ್ರಮ ಆಯೋಜಿಸಲಾಗಿದೆ. ನ.18ರಂದು ಕುವೆಂಪು ವಿಶ್ವವಿದ್ಯಾಲಯದಲ್ಲಿ ‘ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ’ ಕುರಿತ ವಿನೂತನ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಸೋಂದ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.