
ತೀರ್ಥಹಳ್ಳಿ: ತಾಲ್ಲೂಕು ಕೇಂದ್ರಕ್ಕೆ ಹತ್ತಿರವಿರುವ ಆಲಗೇರಿ, ಹೊಳೆಮಾದ್ಲು, ಕಾಸರವಳ್ಳಿ ಗ್ರಾಮಗಳು ಇಂದಿಗೂ ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲದ ಕಾರಣ ಪಟ್ಟಣದಿಂದ ದೂರವೇ ಉಳಿದಿವೆ. 50 ವರ್ಷಗಳಿಂದ ಸೇತುವೆಗಾಗಿ ವಿವಿಧ ರೀತಿಯ ಹೋರಾಟಗಳು ನಡೆದಿದ್ದರೂ ಫಲ ಮಾತ್ರ ಸಿಕ್ಕಿಲ್ಲ.
ತುಂಗಾ ಮತ್ತು ಮಾಲತಿ ನದಿ ಸಂಗಮದ ಈ ಪ್ರದೇಶದಲ್ಲಿ ನೈಸರ್ಗಿಕವಾಗಿ ಡ್ಯಾಂ ಸೃಷ್ಟಿಯಾಗಿದೆ. ಎಂತಹ ಬಿರು ಬೇಸಿಗೆಯಲ್ಲಿಯೂ ಇಲ್ಲಿ ನೀರು ಕಡಿಮೆಯಾಗುವುದಿಲ್ಲ. ಅಪಘಾತ ಹಾಗೂ ಇತರೆ ಸಂದರ್ಭಗಳಲ್ಲಿ ತುರ್ತು ಸೇವೆಗಳನ್ನು ಪಡೆಯುವುದಕ್ಕೆ ವಿವಿಧ ಗ್ರಾಮಗಳನ್ನು ಸುತ್ತಿಕೊಂಡು ಅಂದಾಜು 30 ಕಿ.ಮೀ. ಕ್ರಮಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
1983ರಲ್ಲಿ ಅಂದಿನ ಶಾಸಕ ಡಿ.ಬಿ.ಚಂದ್ರೇಗೌಡ ಅವಧಿಯಲ್ಲಿ ಆಲಗೇರಿ ಗ್ರಾಮದಲ್ಲಿ ಸೇತುವೆ ನಿರ್ಮಾಣ ಮಾಡಲು ನೀಲನಕ್ಷೆ ಸಿದ್ಧಗೊಂಡು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆಡಳಿತಾತ್ಮಕ ಗೊಂದಲದಿಂದ ಅದು ನನೆಗುದಿಗೆ ಬಿದ್ದಿತ್ತು. ನಂತರ ಪ್ರತಿ ಚುನಾವಣೆಯಲ್ಲೂ ಈ ಭಾಗದಲ್ಲಿ ಸೇತುವೆ ಪ್ರಮುಖ ವಿಚಾರವಾಗಿ ಮಾರ್ಧನಿಸಿತ್ತು.
ಉದ್ದೇಶಿತ ಕಾಂಕ್ರೀಟ್ ಸೇತುವೆ ಕಾಮಗಾರಿ ಕೈಬಿಟ್ಟು, 2007ರಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದ ಪದ್ಮನಾಭ ಭಟ್ ₹25 ಲಕ್ಷ ಅನುದಾನ ನೀಡಿ ತೂಗು ಸೇತುವೆ ನಿರ್ಮಿಸಿದ್ದರು. ಕಾಮಗಾರಿಯ ಸಂದರ್ಭ ಈ ಸೇತುವೆಗೆ 25 ವರ್ಷ ಆಯಸ್ಸಿದೆ ಎಂದು ಹೇಳಲಾಗಿತ್ತು. ಪಾದಚಾರಿಗಳ ಬಳಕೆಗಷ್ಟೇ ಇದನ್ನು ಮುಕ್ತಗೊಳಿಸಲಾಗಿತ್ತು. ಆದರೆ ಇದರ ಮೇಲೆ ಪ್ರತಿನಿತ್ಯ ದ್ವಿಚಕ್ರ ವಾಹನಗಳು ಸಂಚರಿಸುತ್ತಿವೆ.
‘ಬೈಕ್ ಸಂಚಾರ ಹೆಚ್ಚಾದಂತೆ ತೂಗು ಸೇತುವೆಗೆ ಹಾಕಿದ್ದ ಕಬ್ಬಿಣಗಳು ತುಕ್ಕು ಹಿಡಿಯುತ್ತಿವೆ. ಸಿಮೆಂಟ್ ಹಲಗೆ ಮುರಿದು ಬೀಳುತ್ತಿದೆ. ಸಣ್ಣ ಪುಟ್ಟ ನಿರ್ವಹಣೆಗೂ ಗ್ರಾಮ ಪಂಚಾಯಿತಿ ಆಡಳಿತದಿಂದ ಅನುದಾನ ಸಿಗುತ್ತಿಲ್ಲ. ಬಣ್ಣ, ಸವಕಳಿ ತಡೆಗೆ ಕೀಲೆಣ್ಣೆ ಸೇರಿ ಇತರೆ ನಿರ್ವಹಣೆ ಇಲ್ಲದೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತಿದೆ. ಹಲವು ವರ್ಷಗಳಿಂದ ಸೇತುವೆಗೆ ಬೇಡಿಕೆ ಸಲ್ಲಿಸುತ್ತಿದ್ದರೂ ಸರ್ಕಾರ ಈವರೆಗೂ ಗ್ರಾಮಸ್ಥರ ಕೂಗು ಕೇಳಿಸಿಕೊಂಡಿಲ್ಲ’ ಎಂದು ಆಲಗೇರಿ ರಾಜೇಶ್ ದೂರುತ್ತಾರೆ.
ತೀರ್ಥಹಳ್ಳಿ– ಮಲ್ಪೆ ರಾಷ್ಟ್ರೀಯ ಹೆದ್ದಾರಿ 169 ‘ಎ’ ಮಧ್ಯೆ ಬರುವ ರಂಜದಕಟ್ಟೆ ಮಾರ್ಗದಿಂದ ಆಲಗೇರಿಗೆ ಕೇವಲ 4 ಕಿ.ಮೀ ಅಂತರವಿದೆ. ನದಿ ಹರಿವಿನ ಕಾರಣದಿಂದ ಅಂದಾಜು 30 ಕಿ.ಮೀ ಕ್ರಮಿಸಬೇಕಿದೆ. ಆಲಗೇರಿ, ಹೊಳೆಮಾದ್ಲು ಬಳಿ ಸೇತುವೆ ನಿರ್ಮಾಣವಾದರೆ ಶೃಂಗೇರಿ ಸಂಪರ್ಕ ಇನ್ನಷ್ಟು ಹತ್ತಿರವಾಗಲಿದೆ. ಸೇತುವೆ ನಿರ್ಮಾಣಕ್ಕಾಗಿ ಹೆಗ್ಗೋಡು ಗ್ರಾಮ ಪಂಚಾಯಿತಿ ನಿರ್ಣಯ ಕೈಗೊಂಡಿದೆ.
ಪ್ರವಾಸಿ ತಾಣ ಮಾಡುವ ಅವಕಾಶ:
ತುಂಗಾ, ಮಾಲತಿ ಸಂಗಮದ ಭೀಮನಕಟ್ಟೆ ಪ್ರದೇಶದಲ್ಲಿ ಸಂಪರ್ಕ ಸೇತುವೆ ನಿರ್ಮಿಸುವ ಮೂಲಕ ಅದನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಅವಕಾಶ ಇದೆ. ದೂರ್ವಾಸಮುನಿಗಳು ತಪಸ್ಸು ಮಾಡಿದ ಸ್ಥಳವಾಗಿ ದೂರ್ವಾಸಪುರವಿದ್ದು, ಸುತ್ತಮುತ್ತ ಹತ್ತಾರು ದೇವಸ್ಥಾನಗಳಿವೆ. ಉದ್ಯಾನಗಳೂ ಇದ್ದು, ಬೋಟಿಂಗ್ ನಡೆಸಬಹುದಾದ ಅವಕಾಶಗಳಿವೆ. ತೂಗು ಸೇತುವೆ ದುರಸ್ತಿಯ ಜೊತೆಗೆ ಸಂಪರ್ಕ ವ್ಯವಸ್ಥೆ ಬಲಪಡಿಸಿದರೆ ಇದನ್ನು ಪ್ರವಾಸಿ ತಾಣವಾಗಿಯೂ ರೂಪುಗೊಳಿಸಬಹುದು. ಆಗ ತೀರ್ಥಹಳ್ಳಿಯ ಕೀರ್ತಿಯೂ ಹೆಚ್ಚುತ್ತದೆ ಎಂಬುದು ನಾಗರಿಕರ ಆಗ್ರಹ.
ಆಲಗೇರಿ ಹೊಳೆಮಾದ್ಲು ಗ್ರಾಮ ಸಂಪರ್ಕಕ್ಕೆ ಕಾಂಕ್ರೀಟ್ ಸೇತುವೆ ನಿರ್ಮಿಸಬೇಕೆಂದು 50 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಹಾಗಂತ ನಾವು ಸುಮ್ಮನಾಗುವುದಿಲ್ಲ. ಪುನಃ ಹೋರಾಟ ರೂಪಿಸುತ್ತೇವೆಯೋಗೇಂದ್ರ ನಾಯ್ಕ್ ಕೃಷಿಕ ಹೊಳೆಮಾದ್ಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.