ADVERTISEMENT

ಜಾತಿ ರಹಿತ, ಸಮ ಸಮಾಜ ಶೀಘ್ರ: ಈಶ್ವರಪ್ಪ

ವಿವಿಧೆಡೆ ನಾರಾಯಣಗುರು ಜಯಂತಿ ಕಾರ್ಯಕ್ರಮ, ಭಾವಚಿತ್ರಕ್ಕೆ ಪುಷ್ಪನಮನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 2:37 IST
Last Updated 11 ಸೆಪ್ಟೆಂಬರ್ 2022, 2:37 IST
ಶಿವಮೊಗ್ಗದಲ್ಲಿ ಶನಿವಾರ ನಡೆದ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿದರು.
ಶಿವಮೊಗ್ಗದಲ್ಲಿ ಶನಿವಾರ ನಡೆದ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿದರು.   

ಶಿವಮೊಗ್ಗ:‘ನಾರಾಯಣಗುರು ಅವರ ಆಶಯದಂತೆ ನಮ್ಮೆಲ್ಲರ ನಡುವಿನ ಜಾತಿಯ ವಿಷ ಬೀಜ ಕಿತ್ತು ಹಾಕಿ ನಾವೆಲ್ಲರೂ ಒಂದೇ ಎಂಬ ಭಾವನೆ ಸಮಾಜಕ್ಕೆ ಇಂದೆಲ್ಲ, ನಾಳೆ ಬರಲಿದೆ’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಆಶಿಸಿದರು.

ಇಲ್ಲಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಜಿಲ್ಲಾ ಆರ್ಯ ಈಡಿಗರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶನಿವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಮಹಾನ್ ಪುರುಷರು ಜಾತಿ ಸೂಚಕ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ. ಬಸವಣ್ಣ, ನಾರಾಯಣಗುರು, ಕನಕದಾಸ ಮುಂತಾದ ಆದರ್ಶಪುರುಷರನ್ನು ಜಾತಿಗೆ ಮೀಸಲಾಗಿಸುವುದು ದುರದೃಷ್ಟಕರ ಎಂದರು.

ADVERTISEMENT

‘ಬ್ರಹ್ಮಶ್ರೀ ನಾರಾಯಣಗುರುಗಳು ದೇವರಿಗೆ ದೇವರಾಗಿದ್ದವರು. ಅಂತಹ ಗುರುಗಳ ಆದರ್ಶಗಳನ್ನು ನಾವು ಬೆಳೆಸಿಕೊಳ್ಳಬೇಕು. ಸಮ ಸಮಾಜದ ಕನಸು ಕಂಡ ಗುರುಗಳ ಸಿದ್ಧಾಂತಗಳ ಅಳವಡಿಸಿಕೊಂಡಾಗ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ಹೇಳಿದರು.

ನಾರಾಯಣಗುರುಗಳು ಯುಗ ಪುರುಷರು. ಕೇರಳದಲ್ಲಿ ಹುಟ್ಟಿದ ಅವರು ಅಂದು ಅಲ್ಲಿ ಸವರ್ಣೀಯರು ಮತ್ತು ಅವರ್ಣೀಯರ ಮಧ್ಯೆ ಇರುವ ತಾರತಮ್ಯ ಹೋಗಲಾಡಿಸಿದವರು. ಅಲ್ಲಿ ಸವರ್ಣೀಯರು ಯಾವುದೇ ತೆರಿಗೆ ಕಟ್ಟುವ ಹಾಗಿರಲಿಲ್ಲ. ಮನೆಯನ್ನೂ ಎತ್ತರಕ್ಕೆ ಕಟ್ಟಲು ಅವಕಾಶ ನೀಡಲಾಗುತ್ತಿತ್ತು. ಆದರೆ, ಕೆಳವರ್ಗದವರು ಮನೆಯನ್ನು ಎತ್ತರಕ್ಕೆ ಕಟ್ಟುವಂತಿರಲಿಲ್ಲ. ಜೊತೆಗೆ ತೆರಿಗೆ ಕಟ್ಟಬೇಕಿತ್ತು. ಅಸಮಾನತೆ ಮಿತಿ ಮೀರಿತ್ತು. ಮನುಸ್ಮೃತಿ ಮತ್ತು ವರ್ಣಾಶ್ರಮ ಪದ್ಧತಿಗಳು ಅವರ ಬದುಕು ಅರಳಲು ಬಿಡುತ್ತಿರಲಿಲ್ಲ ಎಂದು ಉಪನ್ಯಾಸ ನೀಡಿದ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಎಸ್.ಎಂ. ಹರೀಶ್ ಹೇಳಿದರು.

ನಾರಾಯಣಗುರುಗಳು ಸಾಮಾಜಿಕ ಅಸಮಾನತೆ ಹೋಗಲಾಡಿಸಿದರು. ಸ್ವಾವಲಂಬಿ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟವರು. ಇಂತಹವರ ಆದರ್ಶಗಳು ಇಂದಿನ ಅಗತ್ಯ ಎಂದರು.

ಈಡಿಗ ಸಮಾಜ ಇಂದು ಅತ್ಯಂತ ಹಿಂದುಳಿದಿದೆ. ಇಲ್ಲಿ 26 ಪಂಗಡಗಳಿವೆ. ಎಲ್ಲರೂ ಬಡವರಾಗಿದ್ದಾರೆ. ಇವರಿಗೆ ಶೇ 5ರಷ್ಟು ಒಳ ಮೀಸಲಾತಿ ಬೇಕು. ಹಾಗೆಯೇ ನಾರಾಯಣಗುರು ಹೆಸರಲ್ಲಿ ಈಡಿಗ ಅಭಿವೃದ್ಧಿ ನಿಗಮ, ಆಧ್ಯಯನ ಕೇಂದ್ರ ಸ್ಥಾಪಿಸಬೇಕು ಎಂದುಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ
ಒತ್ತಾಯಿಸಿದರು.

ಸೂಡಾ ಅಧ್ಯಕ್ಷ ಎನ್.ಜಿ. ನಾಗರಾಜ್, ಮಹಾನಗರ ಪಾಲಿಕೆ ಸದಸ್ಯೆ ಲಕ್ಷ್ಮಿ ಶಂಕರನಾಯಕ್, ಹೆಚ್ಚುವರಿ ಜಿಲ್ಲಾಧಿಕಾರಿ ನಾಗೇಂದ್ರ ಎಫ್. ಹೊನ್ನಳ್ಳಿ, ಉಪವಿಭಾಗಾಧಿಕಾರಿ ದೊಡ್ಡೇಗೌಡರು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ್ ಇದ್ದರು.

ಭದ್ರಾವತಿ ವಾಸು ಮತ್ತು ತಂಡದವರಿಂದ ಭಕ್ತಿ ಸಂಗೀತ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಉಮೇಶ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.