
ಶಿವಮೊಗ್ಗ: ಗುತ್ತಿಗೆದಾರರು ಪ್ರಸ್ತುತ ಗಂಭೀರ ಸಂಕಷ್ಟವನ್ನು ಎದುರಿಸುತ್ತಿದ್ದು, ಸರ್ಕಾರಿ ಹಾಗೂ ಖಾಸಗಿ ಕಾಮಗಾರಿಗಳಲ್ಲಿ ಪಾವತಿ ವಿಳಂಬ, ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ ಮತ್ತು ಕಾರ್ಮಿಕರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಅವರನ್ನು ಆರ್ಥಿಕವಾಗಿ ಕಂಗೆಡಿಸಿವೆ ಎಂದು ಕರ್ನಾಟಕ ರಾಜ್ಯ ಸ್ಟೇಟ್ ಕಂಟ್ರಾಕ್ಟರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಆರ್. ಮಂಜುನಾಥ್ ಆರೋಪಿಸಿದರು.
ಮಾ.5ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನಡೆಯಲಿರುವ ಪ್ರತಿಭಟನೆ ಅಂಗವಾಗಿ ನಗರದ ಸಾಗರ ರಸ್ತೆ ಕೆಎನ್‌ಎನ್‌ಎನ್‌ಎಲ್ ಆವರಣದಲ್ಲಿ ಮಲೆನಾಡು ಗುತ್ತಿಗೆದಾರರ ಸಂಘ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಎರಡು-ಅರ್ಧ ವರ್ಷಗಳಿಂದ ಮುಖ್ಯಮಂತ್ರಿಗಳು ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಸಚಿವರು ಹಾಗೂ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಯಾವುದೇ ಅಧಿಕೃತ ಸಭೆ ನಡೆಸಿಲ್ಲ ಎಂದು ದೂರಿದರು. ಎರಡು-ಮೂರು ಬಾರಿ ಸಭೆ ನಿಗದಿ ಮಾಡಿ ನಿರ್ದಿಷ್ಟ ಕಾರಣವಿಲ್ಲದೆ ಮುಂದೂಡಲಾಗಿದೆ. ಪ್ಯಾಕೇಜ್ ಟೆಂಡರ್ ಪದ್ಧತಿಗೆ ಅವಕಾಶ ನೀಡುವುದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸುಮಾರು 5 ಸಾವಿರ ಕೋಟಿ ರೂ. ಮೌಲ್ಯದ ಕಾಮಗಾರಿಗಳನ್ನು ಪ್ಯಾಕೇಜ್ ಟೆಂಡರ್ ಮೂಲಕ ನೀಡಲಾಗಿದೆ ಎಂದು ಆರೋಪಿಸಿದರು.
ಸರ್ಕಾರಿ ಕಾಮಗಾರಿಗಳ ಬಿಲ್ ಪಾವತಿಯಲ್ಲಿ ವರ್ಷಗಟ್ಟಲೇ ವಿಳಂಬವಾಗುತ್ತಿರುವುದರಿಂದ ಸಣ್ಣ ಮತ್ತು ಮಧ್ಯಮ ಮಟ್ಟದ ಗುತ್ತಿಗೆದಾರರು ಆರ್ಥಿಕ ಒತ್ತಡಕ್ಕೆ ಸಿಲುಕಿದ್ದಾರೆ. ಬ್ಯಾಂಕ್ ಸಾಲದ ಬಡ್ಡಿ ಹೆಚ್ಚಳವೂ ಮತ್ತೊಂದು ಹೊರೆ ತಂದಿದೆ. ಸರ್ಕಾರದಿಂದ ಬರುವ ಬಾಕಿ ಹಣದ ನಿರೀಕ್ಷೆಯಲ್ಲಿ ಅನೇಕರು ಮನೆ-ಮಠ, ಆಸ್ತಿ-ಪಾಸ್ತಿ ಹಾಗೂ ಆಭರಣಗಳನ್ನು ಬ್ಯಾಂಕ್‌ಗಳಲ್ಲಿ ಅಡವಿಟ್ಟು ಸಂಸಾರ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಸಿಮೆಂಟ್, ಉಕ್ಕು, ಮರಳು ಹಾಗೂ ಡೀಸೆಲ್ ದರ ಏರಿಕೆಯಿಂದ ಟೆಂಡರ್ ವೇಳೆ ನಿಗದಿಪಡಿಸಿದ ದರದಲ್ಲಿ ಕಾಮಗಾರಿ ಪೂರ್ಣಗೊಳಿಸುವುದು ಕಷ್ಟಕರವಾಗಿದೆ. ದರ ಪರಿಷ್ಕರಣೆ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದರು.
ರಾಜ್ಯದ ಎಂಟು ಜಿಲ್ಲೆಗಳಲ್ಲಿ ಈಗಾಗಲೇ ಭೇಟಿ ನೀಡಿ ಗುತ್ತಿಗೆದಾರರ ಸಮಸ್ಯೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ. ಬಾಕಿ ಬಿಲ್‌ಗಳ ತಕ್ಷಣದ ಪಾವತಿ, ದರ ಪರಿಷ್ಕರಣೆ ವ್ಯವಸ್ಥೆ ಬಲಪಡಿಸುವುದು ಹಾಗೂ ಆಡಳಿತಾತ್ಮಕ ಪ್ರಕ್ರಿಯೆ ಸರಳೀಕರಣ ಸೇರಿದಂತೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಪ್ರಸ್ತಾವಿತ ಮುಷ್ಕರದಲ್ಲಿ 25 ರಿಂದ 30 ಸಾವಿರ ಗುತ್ತಿಗೆದಾರರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಜಿ.ಎಂ. ಜಗದೀಶ್, ಧನಶೇಖರ್, ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಉಮೇಶ್ ಹೆಚ್.ಸಿ., ಕೆ. ಬಂಗಾರಪ್ಪ, ಪ್ರಭಾಕರ ಶೆಟ್ಟಿ, ದೇವೇಂದ್ರಪ್ಪ ಪಿ.ಎಸ್., ಬಿ.ಜಿ. ಜಗದೀಶ್, ಅರುಣ್ ಕುಮಾರ್ ಕೆ.ಸಿ., ಶಕುಂತಲಾ ಟಿ., ಚಂದ್ರು ಜಿ., ಎಸ್. ರಾಜೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸರ್ಕಾರದಿಂದ ಬರುವ ಗುತ್ತಿಗೆ ಕಾಮಗಾರಿಯ ಬಾಕಿ ಹಣದ ಮೇಲೆ ವಿಶ್ವಾಸವಿಟ್ಟು ಗುತ್ತಿಗೆದಾರರು ತಮ್ಮ ಮನೆ-ಮಠ, ಆಸ್ತಿ-ಪಾಸ್ತಿ, ಆಭರಣಗಳನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಸಂಸಾರ ನಡೆಸುವ ಪರಿಸ್ಥಿತಿ ಎದುರಾಗಿದೆ. ಬಾಕಿ ಹಣದ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿಗೆ 100 ಪುಟಗಳ ವರದಿ ಸಲ್ಲಿಸಿದ್ದೇವೆ. ಎಲ್ಲಾ ಸಚಿವರನ್ನು ಭೇಟಿಯಾದರೂ ಯಾವುದೇ ಪ್ರಯೋಜನವಾಗಿಲ್ಲಆರ್. ಮಂಜುನಾಥ್, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಸ್ಟೇಟ್ ಕಂಟ್ರಾಕ್ಟರ್ ಅಸೋಸಿಯೇಷನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.