ADVERTISEMENT

ಉಚಿತ ಲಸಿಕೆ: ಸಚಿವ ಸಂಪುಟದಲ್ಲಿ ಚರ್ಚೆ

ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 1:26 IST
Last Updated 17 ಜನವರಿ 2021, 1:26 IST
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಶನಿವಾರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಕೊರೊನಾ ಲಸಿಕೆ ಹಾಕಿಸಿಕೊಂಡರು.
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಶನಿವಾರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಕೊರೊನಾ ಲಸಿಕೆ ಹಾಕಿಸಿಕೊಂಡರು.   

ಶಿವಮೊಗ್ಗ: ಭಾರತದಲ್ಲಿ ತಯಾರಿಸಿರುವ ಕೊರೊನಾ ಲಸಿಕೆ ಇತರ ದೇಶಗಳಿಂತ ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ದೊರಕುತ್ತಿದೆ. ಉಚಿತವಾಗಿ ನೀಡುವ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

‘ಬೇರೆ ದೇಶಗಳ ಲಸಿಕೆಯನ್ನು ಮೈನಸ್ ಡಿಗ್ರಿಯಲ್ಲಿ ಸಂಗ್ರಹಿಸಿಡುವ ಅನಿವಾರ್ಯತೆ ಇದೆ. ಆದರೆ, ನಮ್ಮ ದೇಶದಲ್ಲಿ ತಯಾರಿಸಿರುವ ಲಸಿಕೆಯನ್ನು ಸುಲಭವಾಗಿ ದಾಸ್ತಾನು ಮಾಡಬಹುದಾಗಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಿ ಯಶಸ್ವಿಯಾಗಿ ಎದುರಿಸಿದ್ದೇವೆ. ಇದೀಗ ಪ್ರತಿಯೊಬ್ಬರಿಗೂ ಲಸಿಕೆಯನ್ನು ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮ ವಿಜ್ಞಾನಿಗಳು ಯಶಸ್ವಿಯಾಗಿ ಲಸಿಕೆಯನ್ನು ಸಿದ್ಧಪಡಿಸಿರುವುದು ಹೆಮ್ಮೆಯ ಸಂಗತಿ’ ಎಂದರು.

ADVERTISEMENT

ಸಂಸದ ಬಿ.ವೈ. ರಾಘವೇಂದ್ರ, ‘ಬೇರೆ ದೇಶಗಳ ಮೇಲೆ ಅವಲಂಬಿತಾಗದೇ ನಮ್ಮ ವಿಜ್ಞಾನಿಗಳು ಸ್ವದೇಶಿಯಾಗಿ ಕೊರೊನಾ ಲಸಿಕೆಯನ್ನು ಸಿದ್ಧಪಡಿಸಿರುವುದು ಹೆಮ್ಮೆ ಮೂಡಿಸಿದೆ. ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್‍ಗಳಿಗೆ ಲಸಿಕೆ ಹಾಕಲಾಗುತ್ತಿದ್ದು, ಸುಮಾರು 3 ಕೋಟಿ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ನಮ್ಮ ಜಿಲ್ಲೆಯಲ್ಲಿ ವೈದ್ಯಾಧಿಕಾರಿಗಳು ಸೇರಿ ಸುಮಾರು 25 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು’ ಎಂದು ತಿಳಿಸಿದರು.

ಮುಂದಿನ ಹಂತದಲ್ಲಿ ಪ್ರತಿಯೊಬ್ಬರಿಗೂ ಲಸಿಕೆಯನ್ನು ಹಾಕುವ ಗುರಿ ಹೊಂದಲಾಗಿದ್ದು, ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು. ಲಸಿಕೆ ಬಂದಿದೆ ಎಂದು ನಿರ್ಲಕ್ಷ್ಯ ತೋರದೇ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು.ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಬಳಕೆ ಕಡ್ಡಾಯವಾಗಿ ಮುಂದುವರಿಸಬೇಕು ಎಂದು ಅವರು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಶಾಸಕ ಕೆ.ಬಿ. ಅಶೋಕ್‌ ನಾಯ್ಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಮೆಗ್ಗಾನ್ ನಿರ್ದೇಶಕ ಡಾ.ಸಿದ್ದಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಮೆಗ್ಗಾನ್ ನಿರ್ದೇಶಕರಾದ ಡಾ.ವಾಣಿ ಕೋರಿ, ಡಾ.ಗೌತಮ್, ದಿವಾಕರ ಶೆಟ್ಟಿ ಅವರೂ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.