ADVERTISEMENT

ಶಿವಮೊಗ್ಗ | ಅಡಿಕೆ ಆಮದು ಸ್ಥಗಿತಗೊಳಿಸಲು ಆಗ್ರಹ

ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 6:30 IST
Last Updated 20 ಡಿಸೆಂಬರ್ 2022, 6:30 IST
ಅಡಿಕೆ ಆಮದು ಸ್ಥಗಿತಗೊಳಿಸುವಂತೆ ಆದೇಶಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಎಎಪಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಅಡಿಕೆ ಆಮದು ಸ್ಥಗಿತಗೊಳಿಸುವಂತೆ ಆದೇಶಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಎಎಪಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.   

ಶಿವಮೊಗ್ಗ: ಅಡಿಕೆ ಆಮದು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಸೋಮವಾರ ಗೋಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಕೇಂದ್ರ ಸರ್ಕಾರ ವಿದೇಶದಿಂದ 17 ಸಾವಿರ ಮೆಟ್ರಿಕ್ ಟನ್ ಅಡಿಕೆ ಆಮದು ಮಾಡಿಕೊಳ್ಳಲು ಒಪ್ಪಿಕೊಂಡಿರುವುದರಿಂದ ದೇಶೀಯ ಅಡಿಕೆ ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದಾರೆ. ಈಗಾಗಲೇ ಅಡಿಕೆ ಬೆಲೆ ಪ್ರತಿ ಟನ್‌ಗೆ ₹ 20 ಸಾವಿರದಷ್ಟು ಕುಸಿತ ಕಂಡಿದ್ದು, ಆಮದು ನೀತಿಯಿಂದಾಗಿ ಮತ್ತಷ್ಟು ಬೆಲೆ ಕುಸಿಯುವ ಭೀತಿ ಎದುರಾಗಿದೆ ಎಂದರು.

ಒಂದೆಡೆ ಬೆಲೆ ಕುಸಿತ, ಇನ್ನೊಂದೆಡೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗಗಳಿಂದ ಬೆಳೆ ನಾಶವಾಗಿದ್ದು, ರೈತರ ಸ್ಥಿತಿ ಚಿಂತಾಜನಕವಾಗಿದೆ. ರೋಗ ನಿಯಂತ್ರಣಕ್ಕೆ ಅಡಿಕೆ ಕಾರ್ಯಪಡೆ ರಚಿಸಿ ₹ 10 ಕೋಟಿ ಮೀಸಲಿಟ್ಟು ಗೃಹ ಸಚಿವರನ್ನು ಕಾರ್ಯಪಡೆ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆದರೆ, ಅವರು ಬೆಳೆಗಾರರ ಹಿತ ಕಾಯುವಲ್ಲಿ ವಿಫಲರಾಗಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ ಅಡಿಕೆ ಆಮದು ನಿಲ್ಲಿಸಬೇಕು. ಅಡಿಗೆ ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಇಲ್ಲವಾದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಈ ಸಂದರ್ಭದಲ್ಲಿ ಮುಖಂಡರಾದ ರವಿಕುಮಾರ್, ನಜೀರ್‌ ಅಹಮ್ಮದ್, ರಾಮಕೃಷ್ಣ, ಸುರೇಶ್ ಕೋಟೆಕಾರ್, ಸೋಮಶೇಖರ್, ಟಿ. ನೇತ್ರಾವತಿ, ಮಾಲತೇಶ್, ಸ್ಟೀವನ್, ಹರೀಶ್, ಪ್ರದೀಪ್, ಪುಪ್ಪಲತಾ, ಪ್ರವೀಣ್, ರೋಹಿತ್, ಮುಕ್ಬಲ್ ಅಹಮ್ಮದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.