ಶಿವಮೊಗ್ಗ: ಅಧಿಕಾರಕ್ಕೆ ಬಂದ ನಂತರ ನಿಷ್ಪಕ್ಷಪಾತವಾಗಿರಬೇಕು ಎಂಬ ಪ್ರಗತಿಪರರ ಧೋರಣೆಯೇ ಪೇಜಾವರ ಶ್ರೀಗಳು ಸಂವಿಧಾನಕ್ಕೆ ಹಾಕಿರುವ ಬೆದರಿಕೆಯ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಸೋತಿದೆ. ಈಗ ಅವರಲ್ಲಿ (ಪ್ರಗತಿಪರರು) ದಣಿವು ಆವರಿಸಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಒಡನಾಟ ಬಳಗದಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರಜಾಪ್ರಭುತ್ವ, ಮಾಧ್ಯಮ ಮತ್ತು ನಾವು‘ ವಿಷಯದ ಬಗ್ಗೆ ಮಾತನಾಡಿದ ಅವರು, ನಂತರ ನಡೆದ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದರು.
‘ಅಕಾಡೆಮಿ, ಪ್ರಾಧಿಕಾರಕ್ಕೆ ನೇಮಕ ಆದ ನಂತರ ಅದು ರಾಷ್ಟ್ರಪತಿ ಹುದ್ದೆ ಎಂದು ಭಾವಿಸುವ ಹಲವರು ನಾವು ಪಕ್ಷಾತೀತರಾಗಿ ಇರಬೇಕು ಎಂದು ಯೋಚಿಸುತ್ತಾರೆ. ಅಧಿಕಾರ ಪಡೆದವರು ಇಲ್ಲಿ ಸಿದ್ದರಾಮಯ್ಯ ಇಲ್ಲವೇ ಕಾಂಗ್ರೆಸ್ ಪರ ಮಾತನಾಡುವುದು ಬೇಡ. ಸಂವಿಧಾನಕ್ಕೆ ಬೆದರಿಕೆ ಬಂದಾಗ ಅದರ ವಿರುದ್ಧ ದನಿ ಎತ್ತಲು ಇವರಿಗೆ ಏನು ಸಮಸ್ಯೆ ಆಗಿದೆ. ಇಂತಹ ಸಂದರ್ಭ ನಮ್ಮ (ಪ್ರಗತಿಪರರ) ಧೋರಣೆ ಪಕ್ಷಪಾತಿಯೇ ಆಗಿರಬೇಕು’ ಎಂದರು.
‘ಸಂವಿಧಾನವನ್ನು ನಾವು ಗೌರವಿಸಬೇಕೇ ಹೊರತು, ನಮ್ಮನ್ನು ಗೌರವಿಸುವ ಸಂವಿಧಾನ ಬೇಕು ಎಂಬ ಪೇಜಾವರ ಶ್ರೀಗಳ ಮಾತು ಸಲ್ಲ. ಅವರು ಬಯಸಿರುವ ಸಂವಿಧಾನ ಮನುಸ್ಮೃತಿ. ಅದು ಇದ್ದಿದ್ದರೆ ಈ ಕಾರ್ಯಕ್ರಮದಲ್ಲಿ ಮಹಿಳೆಯರು ಕುಳಿತುಕೊಳ್ಳಲು ಸಾಧ್ಯವಿರಲಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅದನ್ನು 1927ರಲ್ಲಿಯೇ ಸುಟ್ಟುಹಾಕಿದ್ದರು. ಈಗ ಆ ಬೂದಿಯಿಂದ ಮತ್ತೆ ಹೊಗೆ ಆಡುತ್ತಿದೆ. ಸಂವಿಧಾನದ ರಕ್ಷಕರಾದ ರಾಜ್ಯಪಾಲರು ಈಗ ಏನು ಮಾಡುತ್ತಿದ್ದಾರೆ. ಪೇಜಾವರ ಶ್ರೀಗಳ ಈ ಹೇಳಿಕೆಗೆ ಅವರ ವಿರುದ್ಧ ಪ್ರಕರಣ ದಾಖಲಿಸಬೇಕಿತ್ತು’ ಎಂದರು.
ಅಂಬೇಡ್ಕರ್ ರಚಿಸಿದ್ದ ಸಂವಿಧಾನವನ್ನು ಮೊದಲ ಬಾರಿಗೆ ಆರ್‌ಎಸ್‌ಎಸ್ ವಿರೋಧಿಸಿತ್ತು. ಈಗ ಸಂವಿಧಾನವನ್ನು ಬದಲಾವಣೆ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಅದನ್ನು ದುರ್ಬಲ ಮಾಡುವ ಪ್ರಯತ್ನ ನಡೆದಿದೆ ಎಂದು ಹೇಳಿದರು.
‘ಪತ್ರಿಕೆಗಳಿಗೆ ಈಗ ಓದುಗರು ಒಡೆಯರಲ್ಲ. ಉದ್ಯಮಿಗಳು ಮಾಧ್ಯಮವನ್ನು ಕೈವಶ ಮಾಡಿಕೊಂಡಿದ್ದಾರೆ. ಆದರೆ ಅಲ್ಲಿ ಲಾಭ ಮಾಡುಕೊಳ್ಳುವ ಉದ್ದೇಶವಿಲ್ಲ. ಬದಲಿಗೆ ತಮ್ಮ ಉದ್ಯಮದ ಹಿತಾಸಕ್ತಿ ಕಾಪಾಡಿಕೊಳ್ಳುವ ಆಶಯ ಮಾತ್ರ ಇದೆ. ಹೀಗಾಗಿ ಓದುಗನ ಜಾಗದಲ್ಲಿ ಗ್ರಾಹಕ, ಸುದ್ದಿ ಇರಬೇಕಾದ ಜಾಗದಲ್ಲಿ ಜಾಹೀರಾತು ಕಾಣುತ್ತಿದ್ದೇವೆ. ಬಹಳಷ್ಟು ಪತ್ರಕರ್ತರು ಇಂದು ಹಣಕ್ಕೆ ಮಾತ್ರವಲ್ಲ ಸೈದ್ಧಾಂತಿಕವಾಗಿಯೂ ತಮ್ಮನ್ನು ಮಾರಿಕೊಂಡಿದ್ದಾರೆ’ ಎಂದು ಹೇಳಿದರು.
ಪತ್ರಕರ್ತರಾದ ಜಿ.ಟಿ.ಸತೀಶ್ ಹಾಗೂ ಬಿ.ಎಸ್.ಅಂಜುಂ ಪ್ರತಿಕ್ರಿಯೆ ನೀಡಿದರು. ಫ್ರಾನ್ಸಿಸ್ ಡಿಸೋಜಾ ನಿರ್ವಹಣೆ ಮಾಡಿದರು. ಕುವೆಂಪು ವಿ.ವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಕಾಲೇಜಿನ ಪ್ರಾಚಾರ್ಯ ಟಿ.ಅವಿನಾಶ್, ಒಡನಾಟ ಬಳಗದ ಅಕ್ಷತಾ ಹುಂಚದಕಟ್ಟೆ, ರೈತ ನಾಯಕರಾದ ಕೆ.ಟಿ.ಗಂಗಾಧರ, ಎಚ್.ಆರ್.ಬಸವರಾಜಪ್ಪ, ದಲಿತ ಸಂಘರ್ಷ ಸಮಿತಿಯ ಗುರುಮೂರ್ತಿ, ಅಂಕಣಕಾರ ಬಿ.ಚಂದ್ರೇಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.