ಕಾಡಾನೆ ದಾಳಿಯಿಂದ ಗಾಯಗೊಂಡ ಆನೆ ಸಾಗರನಿಗೆ ಸಕ್ರೆಬೈಲಿನ ಬಿಡಾರದಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ
ಶಿವಮೊಗ್ಗ: ಹೆಣ್ಣಾನೆಗಳ ಸಾಂಗತ್ಯ ಅರಸಿ ಭದ್ರಾ ಅಭಯಾರಣ್ಯದಿಂದ ಇಲ್ಲಿನ ಸಕ್ರೆಬೈಲು ಆನೆ ಬಿಡಾರದ ಪರಿಸರಕ್ಕೆ ಬರುವ ಕಾಡಾನೆಗಳು ಮೇಯಲು ಕಾಡಿಗೆ ಬಿಟ್ಟ ಹೆಣ್ಣಾನೆಗಳನ್ನು ವಾರ, ತಿಂಗಳುಗಟ್ಟಲೇ ಒತ್ತೆ ಇರಿಸಿಕೊಳ್ಳುತ್ತಿವೆ.
ಈ ವೇಳೆ ಹೆಣ್ಣಾನೆಗಳ ಜೊತೆ ಬಿಡಾರದಲ್ಲಿ ಇರುವ ಗಂಡಾನೆಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿ ಓಡಿಸುತ್ತಿವೆ. ಮೇಯಲು ಹೋದ ಆನೆಗಳನ್ನು ವಾಪಸ್ ಬಿಡಾರಕ್ಕೆ ಕರೆತರಲು ಕಾಡಿಗೆ ತೆರಳುವ ಮಾವುತ– ಕಾವಾಡಿಗಳ ಮೇಲೂ ಕಾಡಾನೆಗಳು ದಾಳಿ ನಡೆಸಿವೆ. ಕಾಡಿನಲ್ಲಿ ಹೆಣ್ಣಾನೆಗಳ ಕೊರತೆ ಹೆಚ್ಚಿರುವುದೇ ಇದಕ್ಕೆ ಕಾರಣವಾಗಿದೆ. ಇದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಕಾಡಾನೆ ದಾಳಿಯಿಂದ ಕಳೆದೊಂದು ತಿಂಗಳಲ್ಲಿ ಬಿಡಾರದ ಆನೆಗಳಾದ ಸಾಗರ, ಅಶ್ವತ್ಥಾಮ, ಬಹದ್ದೂರ್ ಹಾಗೂ ಬೆಂಗಳೂರು ಗಣೇಶ ಗಾಯಗೊಂಡಿದ್ದಾರೆ. ತೀವ್ರ ಗಾಯಗೊಂಡಿರುವ ಸಾಗರ ಹಾಗೂ ಅಶ್ವತ್ಥಾಮನಿಗೆ ಬಿಡಾರದಲ್ಲಿಯೇ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಸಕ್ರೆಬೈಲು ಬಿಡಾರದಲ್ಲಿ ಇರುವ ನಾಲ್ಕು ಹೆಣ್ಣಾನೆಗಳು (ನೇತ್ರಾವತಿ, ಹೇಮಾವತಿ, ಭಾನುಮತಿ ಹಾಗೂ ಕುಂತಿ) ಸೇರಿದಂತೆ 26 ಆನೆಗಳನ್ನು ನಿತ್ಯ ಮಧ್ಯಾಹ್ನ ಮೇಯಲು ಕಾಡಿಗೆ ಬಿಡಲಾಗುತ್ತದೆ. ಮತ್ತೆ ಮರುದಿನ ಬೆಳಿಗ್ಗೆ ಕರೆತಂದು ಪಕ್ಕದ ತುಂಗಾ ಜಲಾಶಯದ ಹಿನ್ನೀರಲ್ಲಿ ಸ್ನಾನ ಮಾಡಿಸಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಇದು ಇಲ್ಲಿನ ಗಜಪಡೆಯ ದಿನಚರಿ.
ಚಿಕಿತ್ಸೆ ಕೊಡಲು ಆಗಲಿಲ್ಲ:
ರಾತ್ರಿ ಕಾಡಿನಲ್ಲೇ ಉಳಿಯುವ ಹೆಣ್ಣಾನೆಗಳ ಸ್ನೇಹ ಅರಸಿ ಕಾಡಾನೆಗಳು ಬರುತ್ತಿವೆ. ನೇತ್ರಾವತಿ ಆನೆ ಕಳೆದ ಒಂದು ತಿಂಗಳಿನಿಂದ ಕಾಡಾನೆಯೊಟ್ಟಿಗೆ ಇದೆ. ಅದರೊಂದಿಗೆ ಹೋಗಿದ್ದ ಹೇಮಾವತಿ ಮಾರ್ಚ್ 7ರಂದು ಕಾಡಿನಲ್ಲೇ ಮರಿ ಹಾಕಿತ್ತು. ಚೊಚ್ಚಲ ಬಾಣಂತನದ ವೇಳೆ ಮರಿಗೆ ಹಾಲುಣಿಸಲು ತಾಯಿಯ ಕೆಚ್ಚಲ ಬಳಿ ಕರೆತಂದು ಅಭ್ಯಾಸ ಮಾಡಿಸಬೇಕಿದೆ. ಹತ್ತಿರ ಹೋದ ಕಾವಾಡಿ ಮೇಲೆ ಕಾಡಾನೆ ದಾಳಿ ನಡೆಸಿದೆ. ಗಾಯಗೊಂಡ ಕಾವಾಡಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿ ಹಾಲುಣಿಸದೇ ನಿತ್ರಾಣಗೊಂಡ ಮರಿ ಸಾವನ್ನಪ್ಪಿತು.
‘ಕಾಡಾನೆ ಕಾಟದಿಂದಾಗಿ ನಮಗೆ ಪುಟ್ಟ ಮರಿಯನ್ನು ಉಳಿಸಿಕೊಳ್ಳಲಾಗಲಿಲ್ಲ’ ಎಂದು ಬಿಡಾರದ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಾರೆ.
‘ಬಿಡಾರದ ಪರಿಸರದ ಸುತ್ತಮುತ್ತಲಿನ ಕಾಡಿನಲ್ಲಿ 12 ಕಾಡಾನೆಗಳು ಬೀಡುಬಿಟ್ಟಿವೆ. ಒಮ್ಮೆ ಹೆಣ್ಣಾನೆಯ ಸಾಂಗತ್ಯ ದೊರೆತರೆ ಅವುಗಳಿಗೆ ಇಷ್ಟವಾಗುವಷ್ಟು ದಿನ ಜೊತೆಗಿದ್ದು ಹೋಗುತ್ತವೆ. ಬಿಡಾರದಲ್ಲಿ ಸದ್ಯ 5 ಗಂಡಾನೆಗಳಿಗೆ 1 ಹೆಣ್ಣಾನೆ ಇದ್ದು, ಕಾಡಾನೆಗಳ ಕಾಟದಿಂದ ಇಲ್ಲಿ ಅನುಪಾತದ ನಿರ್ವಹಣೆ ಕಷ್ಟವಾಗಿ ಮದವೇರಿದ ನಮ್ಮ ಸಲಗಗಳನ್ನು ಸಲಹುವುದೂ ಸವಾಲಾಗಿದೆ’ ಎಂದು ಅವರು ಹೇಳುತ್ತಾರೆ.
ಮಳೆಗಾಲದಲ್ಲಿ ಹಿನ್ನೀರಿನಲ್ಲಿ ಈಜಿ ಬರುತ್ತವೆ..!
ಭದ್ರಾ ಅಭಯಾರಣ್ಯದಲ್ಲಿ ಹೆಣ್ಣಾನೆಗಳು ಕಡಿಮೆ ಸಂಖ್ಯೆಯಲ್ಲಿವೆ. ಹೀಗಾಗಿ ಅಲ್ಲಿನ ಕಾಡಾನೆಗಳು ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಸಕ್ರೆಬೈಲು ಆನೆ ಬಿಡಾರದತ್ತ ಬರುತ್ತವೆ. ಭದ್ರಾ ಶೆಟ್ಟಿಹಳ್ಳಿ ಶರಾವತಿ ಸೋಮೇಶ್ವರ ಹಾಗೂ ಮೂಕಾಂಬಿಕಾ ವನ್ಯಜೀವಿ ಧಾಮಗಳ ನಡುವೆ ಇದ್ದ ಆನೆ ಪಥ 1972ರಲ್ಲಿ ಗಾಜನೂರಿನ ತುಂಗಾ ಜಲಾಶಯ ನಿರ್ಮಾಣಗೊಂಡ ನಂತರ ಕಡಿತಗೊಂಡಿದೆ. ಹೆಣ್ಣಾನೆ ಅರಸಿ ಮಳೆಗಾಲದಲ್ಲಿ ಕಾಡಾನೆಗಳು ಜಲಾಶಯದ ಹಿನ್ನೀರಿನಲ್ಲಿ ಈಜಿಕೊಂಡು ಬರುತ್ತವೆ. ಬೇಸಿಗೆಯಲ್ಲಿ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಬೈರಾಪುರ ಚೌಡಿಗುಡ್ಡ ಉಂಬ್ಳೆಬೈಲು ಮಾರಿದಿಬ್ಬದ ಹಾದಿಯಲ್ಲಿ ಹಿನ್ನೀರು ಪ್ರದೇಶ ದಾಟುತ್ತವೆ ಎಂದು ಅರಣ್ಯಾಧಿಕಾರಿಯೊಬ್ಬರು ಹೇಳುತ್ತಾರೆ.
ಕಾಡಾನೆಗಳ ಕಣ್ತಪ್ಪಿಸಿ ಬಿಡಾರದ ಹೆಣ್ಣಾನೆಗಳನ್ನು ಬಿಡಿಸಿಕೊಂಡು ಬರುತ್ತೇವೆ. ಅವು ಜೊತೆಯಲ್ಲಿದ್ದಾಗ ಬಿಟ್ಟು ಬರುತ್ತೇವೆ. ಕಾಡಾನೆಗಳಿಗೆ ಪ್ರತಿರೋಧ ತೋರಿ ನಮ್ಮ ಆನೆಗಳು ಗಾಯಗೊಳ್ಳುತ್ತಿವೆ.-ಪ್ರಸನ್ನಕೃಷ್ಣ ಪಟಗಾರ್, ಡಿಸಿಎಫ್, ಶಿವಮೊಗ್ಗ ವನ್ಯಜೀವಿ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.