ADVERTISEMENT

ರೈತರ ಅನುಕೂಲಕ್ಕಾಗಿ ಕೃಷಿ ಕಾಯ್ದೆ ಜಾರಿ: ಬಿ.ವೈ.ರಾಘವೇಂದ್ರ

ರೈತಭವನಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 3:09 IST
Last Updated 19 ಫೆಬ್ರುವರಿ 2021, 3:09 IST
ಶಿರಾಳಕೊಪ್ಪದಲ್ಲಿ ಗುರುವಾರ ರೈತಭವನ ಭೂಮಿಪೂಜೆ ಸಮಾರಂಭವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಿದರು
ಶಿರಾಳಕೊಪ್ಪದಲ್ಲಿ ಗುರುವಾರ ರೈತಭವನ ಭೂಮಿಪೂಜೆ ಸಮಾರಂಭವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಿದರು   

ಶಿರಾಳಕೊಪ್ಪ:ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಸಿಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ನೂತನ ಕಾಯ್ದೆಯನ್ನು ಜಾರಿಗೆ ತಂದಿದ್ದು, ರೈತರು ಆತಂಕಪಡುವ ಅಗತ್ಯ ಇಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.

ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಶಿರಾಳಕೊಪ್ಪ ಉಪಮಾರುಕಟ್ಟೆಯಲ್ಲಿ ಗುರುವಾರ ₹ 50 ಲಕ್ಷ ವೆಚ್ಚದ ರೈತ ಭವನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕೃಷಿ ಸನ್ಮಾನ ಯೋಜನೆಯ ಅಡಿಯಲ್ಲಿ ಪ್ರತಿ ರೈತನಿಗೆ ವಾರ್ಷಿಕ ₹ 10 ಸಾವಿರವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಸರ್ಕಾರ ನೀಡುತ್ತಿದೆ. ಸ್ಥಳೀಯವಾಗಿ ಎಫ್‌‌ಪಿಒಗಳ ಮೂಲಕ ರೈತರಿಗೆ ಅಗತ್ಯವಾಗಿರುವ ಶೀತಲೀಕರಣ ಘಟಕ, ದಾಸ್ತಾನು ಕೊಠಡಿಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ನೇರವಾಗಿ ಸಂಘಗಳಿಗೆ ಸಾಲ ಸೌಲಭ್ಯವನ್ನು ನೀಡುತ್ತಿದೆ ಎಂದರು.

ADVERTISEMENT

ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ‘ರಾಜ್ಯಕ್ಕೆ ವಿದ್ಯುತ್ ಹಾಗೂ ಬಯಲುಸೀಮೆಗೆ ನೀರಿನ ಸೌಲಭ್ಯ ಕಲ್ಪಿಸಲು ಸಾವಿರಾರು ಎಕರೆ ಜಮೀನನ್ನು ಜಿಲ್ಲೆಯ ರೈತರು ಕಳೆದುಕೊಂಡಿದ್ದಾರೆ. ಆದರೆ, ನಮ್ಮ ಜಿಲ್ಲೆಯ ರೈತರ ಅನುಕೂಲಕ್ಕೆ ನೀರಾವರಿ ಯೋಜನೆಯನ್ನು ರೂಪಿಸಿದರೆ ರಾಜಕೀಯ ಕಾರಣಕ್ಕಾಗಿ ವಿರೋಧಿಸುತ್ತಿರುವುದು ದುರಂತದ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೆ. ರೇವಣಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸುರೇಶ್ ನಾಯ್ಕ್, ಭೋವಿ ನಿಗಮದ ನಿರ್ದೇಶಕ ಹನುಮಂತಪ್ಪ, ಮೆಸ್ಕಾಂ ನಿರ್ದೇಶಕ ರುದ್ರೇಶ್, ಅಂಬಿಗರ ಚೌಡಯ್ಯ ನಿಗಮದ ನಿರ್ದೇಶಕ ಬಸವರಾಜ್, ಕೆಎಸ್‌ಡಿಎಲ್ ನಿರ್ದೇಶಕಿ ನಿವೇದಿತಾ ರಾಜು, ಟೌನ್ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ರಾಜು, ಉಪಾಧ್ಯಕ್ಷ ರಾಜೇಶ್ವರಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಮತ ಸಾಲಿ, ರೇಣುಕಮ್ಮ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಶಂಭು, ಸುಭ್ರಮಣ್ಯ, ಶಿವಶಂಕರಪ್ಪ, ಸತೀಶ್
ಇದ್ದರು.

ಎಪಿಎಂಸಿ ಅಧ್ಯಕ್ಷ ರುದ್ರಮುನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಡಗಣಿ ಮಂಜಣ್ಣ ಸ್ವಾಗತಿಸಿದರು. ಸುಧೀರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.