ADVERTISEMENT

ಶಿಕಾರಿಪುರ | ಭತ್ತದ ಬೆಲೆ ಪಾತಾಳಕ್ಕೆ; ಬೆಳೆಗಾರ ಕಂಗಾಲು

ಪ್ರಜಾವಾಣಿ ವಿಶೇಷ
Published 1 ಡಿಸೆಂಬರ್ 2024, 5:44 IST
Last Updated 1 ಡಿಸೆಂಬರ್ 2024, 5:44 IST
<div class="paragraphs"><p>ಶಿರಾಳಕೊಪ್ಪ ಹಾಗೂ ಸೊರಬ ರಸ್ತೆಯಲ್ಲಿ ಕಟಾವಿಗೆ ಬಂದಿರುವ ಭತ್ತದ ಪೈರು</p></div>

ಶಿರಾಳಕೊಪ್ಪ ಹಾಗೂ ಸೊರಬ ರಸ್ತೆಯಲ್ಲಿ ಕಟಾವಿಗೆ ಬಂದಿರುವ ಭತ್ತದ ಪೈರು

   

ಶಿರಾಳಕೊಪ್ಪ/ಶಿಕಾರಿಪುರ: ಕಳೆದ ವರ್ಷ ಬರದಿಂದ ನೀರಿನ ಕೊರತೆಯಾಗಿ ನಷ್ಟ ಅನುಭವಿಸಿದ್ದ ತಾಲ್ಲೂಕಿನ ಭತ್ತದ ಬೆಳೆಗಾರರು, ಪ್ರಸಕ್ತ ವರ್ಷ ಉತ್ತಮ ಮಳೆಯಾಗಿ ಚೆನ್ನಾಗಿ ಬೆಳೆ ಬಂದರೂ ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ.

ಕಳೆದ ಬಾರಿ ಕ್ವಿಂಟಲ್‌ಗೆ ₹3,500 ರವರೆಗೆ ಇದ್ದ ಭತ್ತದ ಬೆಲೆ ಬೆಳೆಗಾರರಲ್ಲಿ ಹೊಸ ಚೈತನ್ಯ ತಂದಿತ್ತು. ಆದರೆ, ಈ ವರ್ಷ ಮತ್ತೆ ₹2,200ಕ್ಕೆ ಕುಸಿದಿರುವುದು ಅವರ ಚಿಂತೆಗೆ ಕಾರಣವಾಗಿದೆ. 

ADVERTISEMENT

ಮಲೆನಾಡಿನಲ್ಲಿ ಈಗಾಗಲೇ ರೈತರು ಭತ್ತದ ಬೆಳೆಯನ್ನು ಮೊಟಕುಗೊಳಿಸಿ, ಅಧಿಕ ಲಾಭದ ಅಡಿಕೆ ಹಾಗೂ ಶುಂಠಿ ಕೃಷಿಯತ್ತ ಮುಖಮಾಡಿದ್ದಾರೆ. ಭತ್ತದ ಕೃಷಿ ಮಾಡುವ ಭೂಮಿ ಸಹ ಕಡಿಮೆಯಾಗಿದೆ. ಇಂತಹ ಸಂದಿಗ್ಧತೆಯಲ್ಲಿ ಬೆಲೆ ಪಾತಾಳಕ್ಕೆ ಕುಸಿದಿರುವುದು ಭತ್ತದ ಕೃಷಿಗೆ ಕುತ್ತು ತರುವ ಆತಂಕ ತಂದೊಡ್ಡಿದೆ.

ಕಷ್ಟಪಟ್ಟು ಬೆಳೆದ ಭತ್ತಕ್ಕೆ ಸೂಕ್ತ ಬೆಲೆ ಸಿಗದಿರುವುದು ಅವರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ. ವಿಪರೀತ ಮಳೆಯಿಂದಾಗಿ ಈಗಾಗಲೇ ಮೆಕ್ಕೆಜೋಳ ಬೆಳೆದ ರೈತರು ಹಾನಿ ಅನುಭವಿಸಿದ್ದಾರೆ. ಈಗ ಭತ್ತದ ಬೆಲೆ ಸಹ ಕುಸಿದಿರುವುದು ಕೃಷಿಕರಿಗೆ ಭರಿಸಲಾರದಷ್ಟು ನಷ್ಟವುಂಟು ಮಾಡಿದೆ.

ತಾಲ್ಲೂಕಿನಲ್ಲಿ ಅಂದಾಜು 10,000 ಹೆಕ್ಟೇರ್‌ನಲ್ಲಿ ರೈತರು ಭತ್ತ ಬೆಳೆಯುತ್ತಿದ್ದಾರೆ. ಪ್ರಸ್ತುತ 46,500 ಟನ್ ಭತ್ತ ಉತ್ಪಾದನೆಯ ನಿರೀಕ್ಷೆ ಇದೆ. ಕಳೆದ ವರ್ಷ ಬರಗಾಲದ ಕಾರಣ 35,000 ಟನ್ ಭತ್ತ ಉತ್ಪಾದನೆಯಾಗಿತ್ತು.

ಕಳೆದ ಕೆಲವು ವರ್ಷಗಳಿಂದ ಭತ್ತದ ಬೆಲೆ ಸ್ಥಿರವಾಗಿಲ್ಲ. ಒಂದು ಕಡೆ ಬೆಳೆ ಸಮೃದ್ಧವಾಗಿ ಬರುತ್ತಿದ್ದರೆ, ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯುತ್ತಿದೆ. ಅತಿಯಾದ ಉತ್ಪಾದನೆ, ಮಾರುಕಟ್ಟೆಯಲ್ಲಿ ಸ್ಪರ್ಧೆ, ಸರ್ಕಾರದ ನಿರ್ಲಕ್ಷ್ಯವು ಬೆಲೆ ಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ರೈತರು ಬೆಳೆದ ಭತ್ತವನ್ನು ಸರ್ಕಾರ ಖರೀದಿಸುವ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದಿರುವುದು ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. 

ಸರ್ಕಾರವು ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಬೆಂಬಲ ನೀಡಬೇಕು. ಭತ್ತದ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವುದು, ಮಾರುಕಟ್ಟೆಯಲ್ಲಿ ಸ್ಥಿರ ಬೆಲೆ ನಿಗದಿಪಡಿಸುವುದು, ರೈತರನ್ನು ಸಂಘಟಿಸಿ ಅವರಿಗೆ ಮಾರುಕಟ್ಟೆಯಲ್ಲಿ ಬಲ ತುಂಬುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಪುಟ್ಟನಗೌಡ ಆಗ್ರಹಿಸಿದರು.

ಭತ್ತದ ಬೆಳೆಗಾರರ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ದೇಶದ ಆಹಾರ ಭದ್ರತೆಗೆ ಅಪಾಯ ಎದುರಾಗಲಿದೆ. ತಕ್ಷಣ ಬೆಂಬಲ ಬೆಲೆ ಘೋಷಿಸಿ ಮಧ್ಯವರ್ತಿಗಳ ಹಾವಳಿಯಿಂದ ರೈತರನ್ನು ರಕ್ಷಿಸಬೇಕು’ ಎಂದು ಉಡುಗಣಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ. ಮಂಜುನಾಥ ಮನವಿ ಮಾಡಿದರು.

ಕಳೆದ ವರ್ಷ ಬರಗಾಲವಿದ್ದ ಕಾರಣ ಬೆಳೆ ಕಡಿಮೆ ಇತ್ತು. ಹೀಗಾಗಿ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿತ್ತು. ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗೋದಾಮುಗಳಲ್ಲಿ ಭತ್ತ ಸಂಗ್ರಹಣೆ ಮಾಡಿ ಬೆಲೆ ಹೆಚ್ಚಾದಾಗ ಮಾರಾಟ ಮಾಡಬಹುದಾಗಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕಿರಣ್ ಕುಮಾರ್ ಹರ್ತಿ ಸಲಹೆ ನೀಡಿದರು.

ಶಿರಾಳಕೊಪ್ಪ ಹಾಗೂ ಸೊರಬ ರಸ್ತೆಯಲ್ಲಿನ ಹೊಲದಲ್ಲಿ ಭತ್ತ ಕಟಾವು ಮಾಡಿ ರಾಶಿ ಹಾಕಿರುವುದು ಹಾಗೂ ಹುಲ್ಲಿನ ಪೆಂಡಿ ಕಟ್ಟಿರುವ ದೃಶ್ಯ
ಶಿಕಾರಿಪುರದಲ್ಲಿ ಯಂತ್ರದ ಮೂಲಕ ಭತ್ತ ಕಟಾವು ಮಾಡುತ್ತಿರುವುದು (ಸಂಗ್ರಹ ಚಿತ್ರ)

ಭತ್ತ ಕ್ವಿಂಟಲ್‌ಗೆ ₹3000 ಬೆಲೆ ನಿಗದಿಯಾಗಲಿ

ಭತ್ತದ ಬೆಲೆ ಕುಸಿತದ ಬಗ್ಗೆ ಶನಿವಾರ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಬಿ.ವೈ.ರಾಘವೇಂದ್ರ ‘ಕೇಂದ್ರ ಸರ್ಕಾರ ತನ್ನ ಆವರ್ತನಿಧಿಯಡಿ ಭತ್ತಕ್ಕೆ ಕ್ವಿಂಟಲ್‌ಗೆ ₹2300 ದರ ನಿಗದಿ ಮಾಡಿದೆ. ರಾಜ್ಯ ಸರ್ಕಾರ ಕೂಡ ಪ್ರತೀ ಕ್ವಿಂಟಲ್‌ಗೆ ₹700 ಸಹಾಯಧನ ಕೊಡಲಿ’ ಎಂದು ಒತ್ತಾಯಿಸಿದರು. ‘ಶಿಕಾರಿಪುರ–ಶಿರಾಳಕೊಪ್ಪ ಭಾಗದಲ್ಲಿ ಅವೈಜ್ಞಾನಿಕ ಬೆಲೆ ನಿಗದಿ ಮಾಡಿ ಭತ್ತ ಕಟಾವು ಮಾಡುವ ಯಂತ್ರದವರು ಬೆಳೆಗಾರರನ್ನು ಶೋಷಿಸುತ್ತಿದ್ದಾರೆ. ಕೃಷಿ ಇಲಾಖೆ ಮಧ್ಯಪ್ರವೇಶಿಸಿ ರೈತರಿಗೆ ಅನುಕೂಲವಾಗುವಂತೆ ಬೆಲೆ ನಿಗದಿಪಡಿಸಿಕೊಡಲಿ’ ಎಂದು ಆಗ್ರಹಿಸಿದರು.

ಭತ್ತಕ್ಕೆ ಸಹಾಯಧನ; ಸಚಿವರ ಗಮನ ಸೆಳೆಯುವೆ..

ಭತ್ತಕ್ಕೆ ಸಹಾಯಧನ ನೀಡುವ ವಿಚಾರವನ್ನು ಕೃಷಿ ಸಚಿವರ ಬಳಿ ಪ್ರಸ್ತಾಪಿಸುವೆ. ಭತ್ತದ ಬೆಳೆಗಾರರ ಸಮಸ್ಯೆಯ ಬಗ್ಗೆಯೂ ಅವರ ಗಮನ ಸೆಳೆಯುವೆ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ಜಿಲ್ಲೆಯಲ್ಲಿ ಭತ್ತ ಕಟಾವು ಯಂತ್ರಕ್ಕೆ ಬೆಲೆ ನಿಗದಿ ವಿಚಾರದಲ್ಲಿ ಆಯಾ ತಾಲ್ಲೂಕಿನ ಕೃಷಿ ಸಹಾಯಕ ನಿರ್ದೇಶಕರ ಕರೆದು ಚರ್ಚಿಸಿ ರೈತರಿಗೆ ಹೊರೆಯಾಗದಂತೆ ಬೆಲೆ ನಿಗದಿಪಡಿಸಿಕೊಡಿ ಎಂದು ಸಭೆಯಲ್ಲಿದ್ದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಸಚಿವ ಮಧು ಬಂಗಾರಪ್ಪ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.