
ಶಿವಮೊಗ್ಗ: ಕಳೆದ ಮೂರು ವರ್ಷಗಳಿಂದ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ₹39,000 ಕೋಟಿ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇರೆ ಉದ್ದೇಶಕ್ಕೆ ಬಳಸಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಆ ಹಣ ವಾಪಸ್ ಕೊಡಲಿ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.
ಶಿಕಾರಿಪುರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟರಿಗೆ ಮೀಸಲಾದ ಆ ಹಣವನ್ನು ಶಿಕ್ಷಣ, ಉದ್ಯೋಗ ಹಾಗೂ ಭೂ ಒಡೆತನಕ್ಕೆ ಬಳಸಲಿ ಎಂದು ಒತ್ತಾಯಿಸಿದರು.
ಸಿಎಂ, ಡಿಸಿಎಂ ಕುರ್ಚಿ ಕಚ್ಚಾಟದ ನಡುವೆ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ. ನೌಕರರಿಗೆ ಸಂಬಳ ಕೊಡಲು ಹಣ ಇಲ್ಲ. ಹೀಗಾಗಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಮುಂದೂಡಲು ಸರ್ಕಾರವೇ ತಂತ್ರ ರೂಪಿಸುತ್ತಿದೆ. ಮೀಸಲಾತಿ ವಿಚಾರ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ನೇಮಕಾತಿ ಪ್ರಕ್ರಿಯೆಗೆ ತಡೆಯಾಜ್ಞೆ ತರಲು ಪ್ರೇರಣೆ ನೀಡುತ್ತಿದೆ ಎಂದು ಆರೋಪಿಸಿದರು.
ಪರಿಶಿಷ್ಟರಿಗೆ ಒಳಮೀಸಲಾತಿ ನೀಡುವ ವಿಚಾರದಲ್ಲಿ ಗಿಮಿಕ್ ಮಾಡುತ್ತಿರುವ ರಾಜ್ಯ ಸರ್ಕಾರ, ನೇಮಕಾತಿ ವೇಳೆ ಹಳೆಯ ಮೀಸಲಾತಿಯನ್ನೇ ಅನ್ವಯಿಸುವುದಾಗಿ ಹೇಳುತ್ತಾ ಪರಿಶಿಷ್ಟರಿಗೆ ವಿಶ್ವಾಸ ದ್ರೋಹ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಸಚಿವ ಬಿ.ಶ್ರೀರಾಮುಲು, ವಿಧಾನಪರಿಷತ್ ಮಾಜಿ ಸದಸ್ಯರಾದ ಮಹಾಂತೇಶ ಕವಟಗಿಮಠ, ಅರುಣ್ ಶಹಾಪುರ ಹಾಜರಿದ್ದರು.
'ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನದ 50ನೇ ವರ್ಷದ ಪಯಣದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಮೇ ತಿಂಗಳಲ್ಲಿ ರಾಜ್ಯಮಟ್ಟದ ಬೃಹತ್ ಅಭಿನಂದನಾ ಸಮಾರಂಭ ಆಯೋಜಿಸಲಾಗುತ್ತಿದೆ' ಎಂದು ಗೋವಿಂದ ಕಾರಜೋಳ ತಿಳಿಸಿದರು.
ಕರ್ನಾಟಕದ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಶ್ರೇಯ ಯಡಿಯೂರಪ್ಪ ಅವರದ್ದು. ಹೀಗಾಗಿ ಕಾರ್ಯಕ್ರಮವನ್ನು ಸ್ಮರಣೀಯವಾಗಿಸುವ ಆಶಯದೊಂದಿಗೆ ನಾಡಿನ ಎಲ್ಲ ಮಠಾಧೀಶರನ್ನು ಸಮಾರಂಭಕ್ಕೆ ಆಹ್ವಾನಿಸಲಾಗುವುದು.
ಅಭಿನಂದನಾ ಸಮಿತಿ ಅಧ್ಯಕ್ಷರಾಗಿ ಬೆಳಗಾವಿಯ ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷರಾಗಿ ಮಾಜಿ ಸಚಿವ ಬಿ.ಶ್ರೀರಾಮುಲು ನೇಮಕಗೊಂಡಿದ್ದಾರೆ. ತಾವು ಗೌರವಾಧ್ಯಕ್ಷರಾಗಿದ್ದು, ಮಾರ್ಚ್ ಎರಡನೇ ವಾರ ಸಭೆ ನಡೆಸಿ ಸಮಾರಂಭದ ದಿನಾಂಕ ಅಂತಿಮಗೊಳಿಸಲಾಗುವುದು ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.