ADVERTISEMENT

ಹನುಮಂತದೇವರ ಜಾತ್ರೋತ್ಸವ ಸಂಭ್ರಮ

ಬೇರು ಸಹಿತ ಮರ ಕಿತ್ತು ತರುವ ಪವಾಡ ನೋಡಲು ಜನಸಾಗರ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 1:41 IST
Last Updated 12 ಏಪ್ರಿಲ್ 2022, 1:41 IST
ಸೊರಬ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮಂಚಿ ಗ್ರಾಮದಲ್ಲಿ ಹನುಮಂತ ದೇವರ ರಥೋತ್ಸವದ ಪ್ರಯಕ್ತ ಬೇರು ಸಹಿತ ಮರ ಕಿತ್ತು ತರುವ ಪವಾಡ ದೃಶ್ಯ ವೀಕ್ಷಿಸಲು ಸೇರಿದ್ದ ಜನಸ್ತೋಮ
ಸೊರಬ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮಂಚಿ ಗ್ರಾಮದಲ್ಲಿ ಹನುಮಂತ ದೇವರ ರಥೋತ್ಸವದ ಪ್ರಯಕ್ತ ಬೇರು ಸಹಿತ ಮರ ಕಿತ್ತು ತರುವ ಪವಾಡ ದೃಶ್ಯ ವೀಕ್ಷಿಸಲು ಸೇರಿದ್ದ ಜನಸ್ತೋಮ   

ಸೊರಬ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮಂಚಿ ಗ್ರಾಮದಲ್ಲಿ ಸೋಮವಾರ ಹನುಮಂತದೇವರ ಜಾತ್ರೋತ್ಸವ ಸಂಭ್ರಮದಿಂದ ನಡೆಯಿತು.

ಜಾತ್ರೆ ಅಂಗವಾಗಿ ಮರಗಳನ್ನು ಬೇರುಸಹಿತ ಕಿತ್ತು ತರುವ ಪವಾಡ ದೃಶ್ಯವನ್ನು ನೋಡಲು ಸಾವಿರಾರು ಜನರು ಸೇರಿದ್ದರು.

ಯುಗಾದಿ ಹಬ್ಬದ ನಂತರ ಮಂಚಿ ಗ್ರಾಮದಲ್ಲಿ ನಡೆಯುವ ಜಾತ್ರೆಯನ್ನು ತಾಲ್ಲೂಕು ಸೇರಿ ವಿವಿಧ ಭಾಗಗಳ ಜನರು ಕುತೂಹಲದಿಂದ ಎದುರು ನೋಡುತ್ತಾರೆ. ಜಾತ್ರೆ ಮರು ದಿನ ಮಂಚಿ ಗ್ರಾಮದಲ್ಲಿ ಮರಗಳನ್ನು ಬೇರು ಸಹಿತ ಕಿತ್ತು ತರುವ ಸಂಪ್ರದಾಯ ಇದೆ.ಬೇರು ಸಹಿತ ಬಿಲ್ವಪತ್ರೆ ಮರ ಕಿತ್ತು ತರುವ ಪವಾಡ ದೃಶ್ಯ ವಿಶೇಷ ಹಾಗೂ ಮಹತ್ವವನ್ನು ಪಡೆದಿದೆ. ಮರ ಹೇಗೆ ಬರುತ್ತದೆಯೋ ಹಾಗೇ ಮುಂಗಾರಿನ ಮಳೆ ಆಗುತ್ತದೆ ಎಂಬ ನಂಬಿಕೆ ಜನರದ್ದು. ಆದಕ್ಕಾಗಿ ಈ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ನೋಡಲು ಸೇರುತ್ತಾರೆ.

ADVERTISEMENT

ಗ್ರಾಮದ ದಾಸ ಮನೆತನದ ಆರು ಮಂದಿ ಹನುಮಂತ ದೇವರ ಭಕ್ತರು ಒಂದು ವಾರದಿಂದ ಹಾಲು, ಹಣ್ಣು ಸೇವಿಸುತ್ತಾರೆ. ಜಾತ್ರೆ ಮರು ದಿನ ಬೇರು ಸಹಿತ ಮರವನ್ನು ಕಿತ್ತು ತರಲು ಬೆಳಿಗ್ಗೆ ಗ್ರಾಮದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೈಯಲ್ಲಿ ಕತ್ತಿ ಹಿಡಿದು ಪ್ರತ್ಯೇಕವಾಗಿ ವಿವಿಧ ದಿಕ್ಕುಗಳಿಗೆ ಗ್ರಾಮದಿಂದ ತೆರಳುತ್ತಾರೆ. ನಂತರ ಬೇರು ಸಹಿತ ಮರ ಕಿತ್ತು ಹೊತ್ತುಕೊಂಡು ಒಂದೇ ದಿಕ್ಕಿನಲ್ಲಿ ಇಳಿದು ಬರುತ್ತಾರೆ.

ಆವರು ಬರುವುದನ್ನು ನೋಡಲು ಗ್ರಾಮದ ಕೆರೆ ಅಂಗಳ, ಹೊಲಗಳ ಸುತ್ತಮುತ್ತ ಸಾವಿರಾರು ಜನರು ಜಮಾಯಿಸುತ್ತಾರೆ. ಮರಗಳನ್ನು ಹೊತ್ತು ತರುವುದನ್ನು ಬೆಳಿಗ್ಗೆಯಿಂದಲೇ ಕುತೂಹಲದಿಂದ ಕಾಯುತ್ತಿರುವ ಜನರಿಗೆ ಸಂಜೆ ಹೊತ್ತಿಗೆ ಅವರು ಬರುತ್ತಿದ್ದಂತೆ ನೆರದಿರುವ ಭಕ್ತ ಸಮೂಹ ಹರ್ಷೋದ್ಗಾರದಿಂದ ಸ್ವಾಗತಿಸುತ್ತಾರೆ. ಮರಗಳಿಗೆ ಭಕ್ತಿಯಿಂದ ನಮಸ್ಕರಿಸುತ್ತ ಅರಳಿಕಟ್ಟೆವರೆಗೆ ಸಾಗಿಸಿ ಅಲ್ಲಿ ಪೂಜೆ ಸಲ್ಲಿಸುತ್ತಾರೆ. ಮಂಚಿ ಸೇರಿ ಸುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.