ADVERTISEMENT

ಭದ್ರಾವತಿ | ‘ಪ್ರಭಾವಿ’ಗಳ ಆಶ್ರಯ: ಅಕ್ರಮಗಳದ್ದೇ ಕಾರುಬಾರು

ವೆಂಕಟೇಶ ಜಿ.ಎಚ್.
Published 16 ಫೆಬ್ರುವರಿ 2025, 6:19 IST
Last Updated 16 ಫೆಬ್ರುವರಿ 2025, 6:19 IST
ಭದ್ರಾವತಿ ತಾಲ್ಲೂಕಿನ ಸೀಗೆಬಾಗಿ ಬಳಿ ಭದ್ರಾ ನದಿಯಿಂದ ಮರಳು ತೆಗೆದು ಸಂಗ್ರಹಿಸಿರುವುದು
ಭದ್ರಾವತಿ ತಾಲ್ಲೂಕಿನ ಸೀಗೆಬಾಗಿ ಬಳಿ ಭದ್ರಾ ನದಿಯಿಂದ ಮರಳು ತೆಗೆದು ಸಂಗ್ರಹಿಸಿರುವುದು   

ಶಿವಮೊಗ್ಗ: ‘ಪ್ರಭಾವಿ’ಗಳ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಂದಾಗಿ ಭದ್ರಾವತಿ ತಾಲ್ಲೂಕು ಅಕ್ಷರಶಃ ನಲುಗಿದೆ. ಭದ್ರೆಯಿಂದ ಮರಳು ತೆಗೆಯುವ, ಹಗಲು–ರಾತ್ರಿ ಪಾಳಿಯಂತೆ (ಬ್ಯಾಚ್‌) ಇಸ್ಪೀಟ್ ಆಡಿಸುವ ದಂಧೆ, ಗಾಂಜಾ, ಮೀಟರ್ ಬಡ್ಡಿ ವಹಿವಾಟು ಹಾಗೂ ಅರಣ್ಯ ಒತ್ತುವರಿ ಕಾರ್ಯ ಇಲ್ಲಿ ರಾಜಾರೋಷವಾಗಿ ನಡೆಯುತ್ತಿದೆ.

ಅಕ್ರಮ ಚಟುವಟಿಕೆಗಳನ್ನು ಪೋಷಿಸುವುದೇ ‘ರಾಜಕೀಯ’ ಎಂಬ ಸ್ಥಿತಿ ಉಕ್ಕಿನ ನಗರಿಯಲ್ಲಿದೆ. ಪೊಲೀಸ್, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಈ ಅಕ್ರಮಗಳ ಬಗ್ಗೆ ಗೊತ್ತಿದ್ದರೂ ನಿಯಂತ್ರಿಸಲಾಗದೇ ದಿವ್ಯ ಮೌನ ವಹಿಸಿದ್ದಾರೆ ಎಂಬುದು ಸ್ಥಳೀಯರ ಆರೋಪ.

ಇಸ್ಪೀಟ್ ಆಟ ಖುಲ್ಲಂ ಖುಲ್ಲಾ: ಭದ್ರಾವತಿ ನಗರದ ಎಂಪಿಎಂ ವ್ಯಾಪ್ತಿ ಹಾಗೂ ದೊಡ್ಡೇರಿ ಕಾಡಿನಲ್ಲಿ ಪ್ಲಾಸ್ಟಿಕ್‌ ಶೀಟ್‌ನ ಗುಡಿಸಲು ಹಾಕಿ ಇಸ್ಪೀಟ್ ಆಡಿಸಲಾಗುತ್ತಿದೆ. ದೊಡ್ಡೇರಿ– ಬಿಸಿಲುಮನೆ ಆಸುಪಾಸು ಒಂದು ತಂಡ, ಕೆಂಚಮ್ಮನಗುಡ್ಡ ಮತ್ತು ಶಿವಪುರ ಸುತ್ತ ಮತ್ತೊಂದು ತಂಡ, ತಿಮ್ಲಾಪುರದ ರಬ್ಬರ್‌ಕಾಡು, ಗೊಂದಿ–ಕೈಮರ ಬಳಿ, ನಂಜಾಪುರದ ಕಾಡಿನಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನದ ಹೊತ್ತಿನಲ್ಲಿ ಒಂದೊಂದು ತಂಡಗಳು ಕೈ ಆಟ ಆಡಿಸುತ್ತಿವೆ. ಕಾಚಗೊಂಡನಹಳ್ಳಿಯಲ್ಲಿ ಭದ್ರಾವತಿ ನಗರಸಭೆಯ ಪ್ರತಿನಿಧಿಯೊಬ್ಬರು ಇಸ್ಪೀಟ್‌ ಆಡಿಸುತ್ತಿದ್ದಾರೆ. ಹೊಳೆಹೊನ್ನೂರು– ಜೋಳದಾಳ್‌ ರಸ್ತೆಯ ಭದ್ರಾ ಕಾಲೊನಿ ಬಳಿ ಹಾಗೂ ಕೋಡಿಹಳ್ಳಿ– ಮಾರುತಿನಗರ ಬಳಿಯ ಕಾಡಿನಲ್ಲಿ ಮತ್ತೊಂದು ತಂಡ ಇಸ್ಪೀಟ್ ಆಡಿಸುತ್ತಿದೆ.

ADVERTISEMENT

ಕೈಗೆ ಮಚ್ಚಿನೇಟು:

ಇಸ್ಪೀಟ್ ದಂಧೆಯಿಂದ ಪೊಲೀಸರು ಮಾತ್ರವಲ್ಲ ರೌಡಿಗಳಿಗೂ ಮಾಮೂಲಿ ಹೋಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೂಡ್ಲಿಗೆರೆ ಭಾಗದ ಲಕ್ಕಪ್ಪನ ಕ್ಯಾಂಪ್ ಬಳಿಯ ಕಾಡಿನಲ್ಲಿ ಇಸ್ಪೀಟ್ ಅಡ್ಡೆಯ ಮೇಲೆ ಈಚೆಗೆ ರೌಡಿ ತಂಡವೊಂದು ದಾಳಿ ನಡೆಸಿತ್ತು. ಗಲಾಟೆ ವೇಳೆ ಇಸ್ಪೀಟ್ ಆಡಲು ಬಂದಿದ್ದವರೊಬ್ಬರ ಕೈಗೆ ಮಚ್ಚಿನೇಟು ಬಿದ್ದಿತ್ತು ಎಂಬುದು ತಿಳಿದುಬಂದಿದೆ.

ಐಜಿ ಸ್ಕ್ವಾಡ್ ಬಂದಿತ್ತಂತೆ?: ಅಕ್ರಮ ಚಟುವಟಿಕೆಗಳಿಗೆ ದಿಢೀರನೆ ಈಗ ಬ್ರೇಕ್ ಬಿದ್ದಿರುವುದನ್ನು ಕಂಡು ಸ್ಥಳೀಯರು ಅಚ್ಚರಿಗೊಳಗಾಗಿದ್ದಾರೆ. ಯಾವುದೇ ಕ್ಷಣದಲ್ಲಿ ಮತ್ತೆ ಆರಂಭವಾಗುವ ಆತಂಕವೂ ಅವರನ್ನು ಕಾಡುತ್ತಿದೆ.

‘ದಾವಣಗೆರೆ ಪೂರ್ವ ವಲಯದ ಐಜಿಪಿಯಾಗಿ ಹೊಸಬರು (ರವಿಕಾಂತೇಗೌಡರು) ಬಂದಿದ್ದಾರಂತೆ. ನಂತರ ಐಜಿ ಸ್ಕ್ವಾಡ್ ಬಂದು ಭದ್ರಾವತಿಯಲ್ಲಿ ಮೂರು ದಿನ ಓಡಾಟ ನಡೆಸಿ ಬಿಗಿ ಮಾಡಿದೆಯಂತೆ. ಇಸ್ಪೀಟ್ ಅಡ್ಡೆಗಳನ್ನು ಸದ್ಯ ಬಂದ್ ಮಾಡಿದ್ದಾರೆ’ ಎಂದು ದೊಡ್ಡೇರಿ ರಸ್ತೆಯಲ್ಲಿ ಎದುರಾದ ವ್ಯಕ್ತಿಯೊಬ್ಬರು ಹೇಳಿದರು.

ಸೀಗೆಬಾಗಿ ಬಳಿ ನದಿಯಿಂದ ಜೆಸಿಬಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವುದು 

‘ಇದೆಲ್ಲ ತಾತ್ಕಾಲಿಕ. ಜನ ಮರೆತ ಮೇಲೆ ಮತ್ತೆ ನಮ್ಮೂರು (ಭದ್ರಾವತಿ) ಮೊದಲಿನಂತೆ ಆಗುತ್ತದೆ’ ಎಂದು ನಕ್ಕರು.

‘ಇಸ್ಪೀಟ್ ಆಟದಲ್ಲಿ ಹಣ ಕಳೆದುಕೊಂಡವರು ಒಂದೋ ಊರು ಬಿಡುತ್ತಿದ್ದಾರೆ. ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಕ್ರಮಗಳನ್ನು ವಿರೋಧಿಸಿದರೆ, ‘ಪ್ರಭಾವಿ’ಗಳ ಮಾತು ಕೇಳದಿದ್ದರೆ ಅಂತಹವರ ಮೇಲೆ ಅಟ್ರಾಸಿಟಿ ಇಲ್ಲವೇ 307 ಪ್ರಕರಣ ದಾಖಲಿಸಲಾಗುತ್ತದೆ’ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಆರೋಪಿಸುತ್ತಾರೆ. 

ಕೂಡಲಿ ಹತ್ತಿರದ ಸನ್ಯಾಸಿಕೋಡಮಗ್ಗೆ ಬಳಿ ತುಂಗ ಹಾಗೂ ಭದ್ರಾ ನದಿಗಳ ಸಂಗಮ ಸ್ಥಳದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು 

ಭದ್ರೆ ಒಡಲು ಬಗೆಯುವುದು ಅವ್ಯಾಹತ..

ಭದ್ರಾವತಿಯ ಭದ್ರಾ ಸೇತುವೆಯಿಂದ ಮೊದಲುಗೊಂಡು ಕೂಡಲಿವರೆಗೂ ಅಕ್ರಮವಾಗಿ ಮರಳು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಭದ್ರಾವತಿ ಬಳಿಯ ಬಾಬಳ್ಳಿ, ತಡಸ, ಹಳೆ ಸೀಗೆಬಾಗಿ, ಗೌಡ್ರಹಳ್ಳಿ, ಸಿದ್ಲಿಪುರ, ಗಂಗೂರು, ರಬ್ಬರ್ ಕಾಡು ಭಾಗ, ಹೊಳೆಹೊನ್ನೂರು, ಕೂಡಲಿ ಬಳಿ ಯಂತ್ರೋಪಕರಣ ಬಳಸಿ ಭದ್ರೆಯ ಒಡಲು ಬಗೆಯಲಾಗುತ್ತಿದೆ.

ಅಲ್ಲೆಲ್ಲ ಹಗಲು ಹೊತ್ತು ಮರಳು ತೆಗೆಯುತ್ತಾರೆ. ರಾತ್ರಿ ವೇಳೆ ಸಾಗಣೆ ಆಗುತ್ತದೆ. ಸರ್ಕಾರದ ಅಧಿಕೃತ ಬ್ಲಾಕ್‌ಗಳನ್ನು ಹೊರತುಪಡಿಸಿ ಬೇರೆ ಎಲ್ಲಿಯೂ ನದಿಗಳಿಗೆ ಯಂತ್ರೋಪಕರಣ ಇಳಿಸುವಂತಿಲ್ಲ. ಆದರೆ, ಅಕ್ರಮದ ನೆಲೆಯಲ್ಲಿ ಜೆಸಿಬಿ, ಹಿಟಾಚಿ ಯಂತ್ರ ಸದ್ದು ಮಾಡುತ್ತವೆ.

ನೆಟ್ಟಕಲ್ಲಟ್ಟಿ ಕಿರು ಅರಣ್ಯವೂ ಒತ್ತುವರಿ?

ಭದ್ರಾವತಿ ತಾಲ್ಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ಭಾಗದಲ್ಲಿ ‘ಪ್ರಭಾವಿ’ಗಳಿಂದಾಗಿ ಅರಣ್ಯ ಭೂಮಿ ಒತ್ತುವರಿ ಕೂಡ ಅವ್ಯಾಹತವಾಗಿ ನಡೆದಿದೆ ಎಂಬುದು ಸ್ಥಳೀಯರ ಆರೋಪ.

ಇಲ್ಲಿನ ನೆಟ್ಟಕಲ್ಲಟ್ಟಿ 216 ಎಕರೆ ಕಿರು ಅರಣ್ಯ ‘ಒತ್ತುವರಿ’ಗೆ ಸಿಲುಕಿ ನಲುಗಿದೆ. ಈಗ ಇಲ್ಲಿ 60 ಎಕರೆಯಷ್ಟು ಭೂಮಿ ಉಳಿದಿಲ್ಲ. ಅಲ್ಲಿನ ಮರಗಳನ್ನು ಕಡಿದು ಸಾಗಣೆ ಮಾಡಿದ್ದು, ಕಟ್ಟಡ ತಲೆ ಎತ್ತಿದೆ. ನಂಬರ್ ಆಗಿರುವ ಸಾಗುವಾನಿ ಮರಗಳನ್ನು ಕಡಿದು ಸಾಗಿಸಲಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.

ಸಾಮೂಹಿಕ ಹೊಣೆಗಾರಿಕೆ ನಿಗದಿ: ಡಿಸಿ

‘ಭದ್ರಾವತಿ ಸೇರಿ ಜಿಲ್ಲೆಯ ಎಲ್ಲ ಕಡೆ ಅಕ್ರಮಗಳನ್ನು ತಡೆಯಲು ಅಧಿಕಾರಿಗಳಿಗೆ ಸಾಮೂಹಿಕ ಹೊಣೆಗಾರಿಕೆ ನಿಗದಿಪಡಿಸಲಿದ್ದೇನೆ. ಒಬ್ಬರೇ ಹೋದರೆ ‘ಪ್ರಭಾವ’ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ಪೊಲೀಸ್, ಕಂದಾಯ, ಅರಣ್ಯ, ಜಿಲ್ಲಾ ಪಂಚಾಯಿತಿ, ಗಣಿ ಮತ್ತು ಭೂ ವಿಜ್ಞಾನ ಸೇರಿ ಸಂಬಂಧಿಸಿದ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಯಾವುದೇ ಅಕ್ರಮದ ಮಾಹಿತಿ, ದೂರುಗಳು ಬಂದ ಕಡೆ ತಂಡಗಳಾಗಿ ತೆರಳಿ ದಾಳಿ ನಡೆಸುವಂತೆ ಸೂಚಿಸಲಾಗಿದೆ. ಅಕ್ರಮಗಳನ್ನು ಗುರುತಿಸಿ ಅದಕ್ಕೆ ತಡೆ ಹಾಕಲು ಪೊಲೀಸ್ ಇಲಾಖೆಯೂ ಕಾರ್ಯೋನ್ಮುಖವಾಗಿದೆ’ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ದೇವಸ್ಥಾನಗಳ ಹೆಸರು ಬಳಕೆ!

ತಾಲ್ಲೂಕಿನಲ್ಲಿ ದೇವಸ್ಥಾನದ ಕಾಮಗಾರಿ ಹೆಸರು ಹೇಳಿ ಭದ್ರಾ ನದಿಯಿಂದ ಅಕ್ರಮವಾಗಿ ಮರಳು ಒಯ್ಯಲಾಗುತ್ತಿದೆ. ‘ಸಂಬಂಧಿಸಿದ ದೇವಸ್ಥಾನ ಕಮಿಟಿಯವರಿಗೆ ₹ 50,000 ಕೊಡುವ ದಂಧೆಕೋರರು, ಯಾವುದೇ ಪರ್ಮಿಟ್‌ ಇಲ್ಲದೇ ಒಂದು ದೇವಸ್ಥಾನದ ಹೆಸರಲ್ಲಿ ಕನಿಷ್ಠ 20 ಲಾರಿ ಲೋಡ್ ಮರಳನ್ನು ಹೊಳೆಯಿಂದ ಸಾಗಣೆ ಮಾಡುತ್ತಾರೆ. ಪ್ರತಿ ಲೋಡ್‌ಗೆ ₹ 17,000ದಿಂದ ₹ 18,000 ನಿಗದಿಪಡಿಸುತ್ತಿದ್ದು, ಡಬಲ್ ಫಿಲ್ಟರ್ ಮರಳಿಗೆ ಬೇರೆ ದರ ಇದೆ’ ಎಂದು ಸಿದ್ಲಿಪುರದ ಬಳಿ ಮಾತಿಗೆ ಸಿಕ್ಕ ಸ್ಥಳೀಯರೊಬ್ಬರು ಹೇಳಿದರು. 

‘ಕವಲಗುಂದಿ– ನೇರಲಕೆರೆ ಬಳಿ ನದಿಯ ಮೇರೆಯನ್ನೇ ಮುಚ್ಚಿ ಹಾಕಿದ್ದಾರೆ. ರೆವಿನ್ಯೂ ಇನ್‌ಸ್ಪೆಕ್ಟರ್, ತಹಶೀಲ್ದಾರ್, ಪೊಲೀಸರಿಗೆ ದೂರು ಕೊಟ್ಟರೂ, ಅಕ್ರಮ ನಡೆಯುತ್ತಿರುವ ಸ್ಥಳದ ಲೊಕೇಷನ್ ಕಳುಹಿಸಿದರೂ ಯಾರೂ ಬರೋಲ್ಲ’ ಎಂದು ಅವರು ಅಲವತ್ತುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.