ADVERTISEMENT

ಮರಳು ದಂಧೆಗೆ ಆಡಳಿತದ್ದೇ ಶ್ರೀರಕ್ಷೆ? ತುಂಗೆ, ಮಾಲತಿಯ ಒಡಲು ಬಗೆದ ದಂಧೆಕೋರರು

ನಿರಂಜನ ವಿ.
Published 20 ಡಿಸೆಂಬರ್ 2024, 5:01 IST
Last Updated 20 ಡಿಸೆಂಬರ್ 2024, 5:01 IST
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮರಳು ಅಕ್ರಮ ದಂಧೆ ನಡೆಯುವ ಮಹಿಷಿ ಪ್ರದೇಶ
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮರಳು ಅಕ್ರಮ ದಂಧೆ ನಡೆಯುವ ಮಹಿಷಿ ಪ್ರದೇಶ   

ತೀರ್ಥಹಳ್ಳಿ: ತಾಲ್ಲೂಕಿನಲ್ಲಿ ಮರಳು ಅಕ್ರಮ ಸಾಗಾಣೆ ದಂಧೆ ಅವ್ಯಾಹತವಾಗಿದ್ದು, ಇದರಿಂದಾಗಿ ತುಂಗಾ, ಮಾಲತಿ ನದಿಗಳು ಹಾಗೂ ಈ ನದಿಗಳಿಗೆ ಜೀವದಾಯಿನಿ ಆಗಿರುವ ಹಳ್ಳಗಳ ಒಡಲು ಬರಿದಾಗುತ್ತಿದೆ. ಮರಳು ಅಕ್ರಮ ತಡೆಯಲು ಹೋದ ಅಧಿಕಾರಿಯೊಬ್ಬರು ಈಚೆಗೆ ₹60,000 ಲಂಚ ಪಡೆದು ಮರಳು ಲಾರಿ ಬಿಟ್ಟು ಕಳುಹಿಸಿದ ಆರೋಪವೂ ಕೇಳಿ ಬಂದಿದೆ.

ನಡುರಾತ್ರಿಗೆ ಆರಂಭವಾಗುವ ಮರಳು ದಂಧೆ ಬೆಳಗಿನ ಜಾವದವರೆಗೆ ಸದ್ದಿಲ್ಲದೆ ನಡೆಯುತ್ತದೆ. ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಮರಳು ಹೊರ ಜಿಲ್ಲೆ ಸೇರುತ್ತಿದ್ದು, ಮರಳು ಲಾರಿ ವಶಕ್ಕೆ ಪಡೆಯುವಲ್ಲಿ ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್‌, ಅರಣ್ಯ ಹಾಗೂ ಕಂದಾಯ ಇಲಾಖೆಗಳು ವಿಫಲವಾಗಿವೆ ಎಂದು ಸ್ಥಳೀಯರು ದೂರುತ್ತಿದ್ದಾರೆ. 

ತುಂಗಾ, ಮಾಲತಿ ನದಿ ಪಾತ್ರದಲ್ಲಿ ವಿಪರೀತ ಎನ್ನುವಷ್ಟರ ಮಟ್ಟಿಗೆ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇವುಗಳಿಗೆ ಸೇರುವ ಕುಶಾವತಿ, ಕುಂಟೇಹಳ್ಳ, ಗೋಪಿನಾಥ ಹಳ್ಳ, ಬ್ರಾಹ್ಮಿ ನದಿ, ಶಿರುಪತಿ, ಆರಗ, ಹೊರಬೈಲು ಮುಂತಾದ ಪ್ರಮುಖ ಹಳ್ಳಗಳಿಗೂ ದಂಧೆ ವ್ಯಾಪಿಸಿದೆ. ತುಂಗಾ ನದಿಗೆ ಹೊಂದಿಕೊಂಡಂತೆ ಇರುವ ಮಂಡಗದ್ದೆ ಹಿನ್ನೀರು ಪ್ರದೇಶ, ಹೊಳೆಕೊಪ್ಪ, ಹೆದ್ದೂರು, ಮಹಿಷಿ, ದಬ್ಬಣಗದ್ದೆ, ಅರೇಹಳ್ಳಿ, ಮಳಲೂರು, ಹುಣಸವಳ್ಳಿ ಪ್ರದೇಶದಲ್ಲಿ ದಂಧೆ ನಡೆಯುತ್ತಿದ್ದರೂ ಆಡಳಿತ ಮೌನ ವಹಿಸಿದೆ.

ADVERTISEMENT

ತೀರ್ಥಹಳ್ಳಿಯಲ್ಲಿ ಸಂಗ್ರಹವಾದ ಮರಳು ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಸುಲಭವಾಗಿ ರವಾನೆಯಾಗುತ್ತಿದೆ. ಗಾಜನೂರು, ಮುಡುಬ, ಸಿರಿಗಣೆ, ಉಂಬ್ಳೆಬೈಲು ಚೆಕ್‌ ಪೋಸ್ಟ್‌ನಲ್ಲಿ ತಪಾಸಣೆ ಇಲ್ಲದೆ ಸಲೀಸಾಗಿ ಲಾರಿ ಮುಂದೆ ಸಾಗುತ್ತಿವೆ. ಮಳಲೂರು ಕ್ವಾರಿಯಲ್ಲೂ ಮರಳು ದಂಧೆ ನಡೆಯುತ್ತಿದೆ. ಅಧಿಕಾರಿಗಳಿಗೆ ಮಾಹಿತಿ ನೀಡಲು ಪ್ರಯತ್ನಿಸುವ ಸ್ಥಳೀಯರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ದಂಧೆಕೋರರ ಜೊತೆಗೆ ಆಡಳಿತದ ನಂಟು ಬೆಸೆದುಕೊಂಡಿದೆ ಎಂಬ ದೂರುಗಳು ಇವೆ.

ಮಧ್ಯರಾತ್ರಿ ಜೆಸಿಬಿ ವಶ: ನೆರಟೂರು, ಆರಗ ಹಳ್ಳ ಪ್ರದೇಶದಲ್ಲಿ ಮರಳು ಅಕ್ರಮ ದಂಧೆ ಸಂಬಂಧ ಸಾರ್ವಜನಿಕರ ದೂರು, ಲಿಖಿತ ಮಾಹಿತಿ ಪಡೆದ ತಹಶೀಲ್ದಾರ್‌ ಮಧ್ಯರಾತ್ರಿ 2 ಗಂಟೆಗೆ ದಾಳಿ ನಡೆಸಿ ಜೆಸಿಬಿ ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿದ್ದ ಲಾರಿ ಹಿಡಿಯಲು ಮುಂದಾದಾಗ ಬಲವಂತವಾಗಿ ಚಲಾಯಿಸಿಕೊಂಡು ದಂಧೆಕೋರರು ಪರಾರಿಯಾಗಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನ ಅರೇಹಳ್ಳಿ ಗ್ರಾಮದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮರಳು ಅಕ್ರಮ ಸಾಗಾಣೆ ತಡೆಯಲು ನದಿಗೆ ಅಡ್ಡಲಾಗಿ ಟ್ರಂಚ್‌ ನಿರ್ಮಿಸಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಅರೇಹಳ್ಳಿ ಗ್ರಾಮದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮರಳು ಅಕ್ರಮ ಸಾಗಾಣೆ ತಡೆಯಲು ನದಿಗೆ ಅಡ್ಡಲಾಗಿ ಟ್ರಂಚ್‌ ನಿರ್ಮಿಸಿರುವುದು

ಸಕ್ರಮಕ್ಕೆ ಹಿಂದೇಟು!

ನದಿಯಲ್ಲಿ ಸಂಗ್ರಹವಾದ ಉತ್ಕೃಷ್ಟ ಮರಳಿಗೆ ಮಾರುಕಟ್ಟೆಯಲ್ಲಿ ವಿಪರೀತ ಬೇಡಿಕೆ ಇದೆ. ಮಹಾನಗರಗಳಿಗೆ ಎಂ-ಸ್ಯಾಂಡ್‌ ಲಗ್ಗೆ ಇಟ್ಟಿದ್ದರೂ ಉತ್ತಮ ಮರಳಿನ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ದುಬಾರಿಯಾದರೂ ಮನೆ ಹೆಚ್ಚು ವರ್ಷ ಬಾಳಿಕೆ ಬರಬೇಕೆಂಬ ಉದ್ದೇಶದಿಂದ ಮರಳು ಬಳಕೆ ಮಾಡಲಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ದಂಧೆಕೋರರು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಹೆಚ್ಚು ಮರಳು ಸಾಗಾಣೆಯಾದರೆ ಆಯಕಟ್ಟಿನ ಸ್ಥಳಗಳಲ್ಲಿ ಕೆಲಸ ನಿರ್ವಹಿಸುವ ಸರ್ಕಾರಿ ಅಧಿಕಾರಿಗಳ ಆದಾಯದ ಪ್ರಮಾಣ ಹೆಚ್ಚಲಿದೆ. ಸರ್ಕಾರ ಅಧಿಕೃತವಾಗಿ ಕ್ವಾರಿಗಳ ಹರಾಜು ಪ್ರಕ್ರಿಯೆ ನಡೆಸಿದರೆ ಅಧಿಕಾರಿಗಳ ಆದಾಯಕ್ಕೆ ಕತ್ತರಿ ಬೀಳಲಿದೆ. ಹೀಗಾಗಿ ಇಲ್ಲಸಲ್ಲದ ನೆಪವೊಡ್ಡಿ ಹರಾಜು ಪ್ರಕ್ರಿಯೆ ಮುಂದಕ್ಕೆ ತಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನಿಷೇಧಿತ ಪ್ರದೇಶದಲ್ಲೂ ಮರಳು ಲೂಟಿ

ಕೆ.ಕಸ್ತೂರಿ ರಂಗನ್‌ ಅಧ್ಯಕ್ಷತೆಯ ಪಶ್ಚಿಮಘಟ್ಟ ಜೀವವೈವಿಧ್ಯ ತಜ್ಞರ ಸಮಿತಿ ಶೇ 37ರಷ್ಟು ಪ್ರಮಾಣದ ಪರಿಸರ ಸೂಕ್ಷ್ಮ ವಲಯ ಗುರುತಿಸಿದೆ. 2014ರಲ್ಲಿ ಅದೇ ವರದಿ ಆಧರಿಸಿ ಸರ್ಕಾರ ಗುರುತಿಸಿದ್ದ ಮಹಿಷಿ ಹೊಳೆಕೊಪ್ಪ ಮರಳು ಕ್ವಾರಿಗೆ ಅರಣ್ಯ ಇಲಾಖೆ ಅನುಮತಿ ನೀಡಲು ನಿರಾಕರಿಸಿತ್ತು. ಆದರೆ ಇಂದಿಗೂ  ಕ್ವಾರಿ ಮತ್ತು ಕ್ವಾರಿಗೆ ಹೊಂದಿಕೊಂಡ ಪ್ರದೇಶದಲ್ಲಿ ಸಾವಿರಾರು ಲಾರಿ ಲೋಡ್ ಮರಳು ಸಾಗಣೆಯಾಗುತ್ತಿದೆ.

ಮಣ್ಣು ತೊಳೆದು ಮರಳು!

ಶುದ್ಧವಾದ ಮರಳು ಸಾಗಾಣೆ ಮಾಡಬೇಕು. ಮರಳು ಕೊಳ್ಳುವವರು ಉತ್ತಮ ದರ ನೀಡಬೇಕು ಎಂಬ ಉದ್ದೇಶದಿಂದ ಮರಳನ್ನು ನೀರಿನಿಂದ ತೊಳೆದು ಶುದ್ಧೀಕರಿಸುವ ಪ್ರಕ್ರಿಯೆ ಹಿಂದೆ ನಡೆಯುತ್ತಿತ್ತು. ಆದರೀಗ ಮಣ್ಣನ್ನು ತೊಳೆದು ಮರಳು ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈಚೆಗೆ ಸಂಕದಹೊಳೆ ಸಮೀಪದ ನೆರಟೂರಿನಲ್ಲಿ ಮಣ್ಣು ತೊಳೆದು ಮರಳು ಮಾಡಿದ್ದಾರೆ. ಘಟನೆ ಬೆನ್ನಲ್ಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳ ಪರೀಶಿಲಿಸಿ ಅಕ್ರಮ ಎಸಗುವವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಮರಳು ಅಕ್ರಮ ಸಾಗಾಟ ತಡೆಯಲು ಅರೇಹಳ್ಳಿ ಕ್ವಾರಿಯಲ್ಲಿ ಟ್ರಂಚ್‌ ತೆಗೆಯಲಾಗಿದೆ. ದೂರುಗಳು ಬಂದ ತಕ್ಷಣ ಕ್ರಮ ಜರುಗಿಸುತ್ತಿದ್ದೇವೆ. ಮಂಡಗದ್ದೆ ಭಾಗದಲ್ಲಿ ಮರಳು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ದೂರು ಬಂದಿದ್ದು ಕ್ರಮ ಕೈಗೊಳ್ಳಲಾಗುವುದು.
- ಜ್ಯೋತಿ ಕೆ.ಕೆ., ಕಿರಿಯ ಭೂ ವಿಜ್ಞಾನಿ ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.