ಶಿವಮೊಗ್ಗ: ‘ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ನೇತೃತ್ವದ ’ಇಂಡಿಯಾ’ ಒಕ್ಕೂಟ ಛಿದ್ರ ಆಗಲಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿ ಆಗಲಿದ್ದಾರೆ’ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಬಾಯಲ್ಲಿ ಇಷ್ಟು ದಿವಸ ಬಿರಡೆ ಇಟ್ಟುಕೊಂಡಿದ್ದರು. ಈಗ ಅಯೋಧ್ಯೆಯಲ್ಲಿ ರಾಮನ ಗರ್ಭಗುಡಿಗೆ ನರೇಂದ್ರ ಮೋದಿ ಹೋಗಿದ್ದೇ ತಪ್ಪು ಅಂದಿದ್ದಾರೆ. ಎಐಸಿಸಿ ಅಧಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಮೊಯ್ಲಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು’ ಎಂದು ಆಗ್ರಹಿಸಿದರು.
‘ಸಮುದ್ರದ ಅಲೆಯ ವಿರುದ್ಧ ಈಜಲು ಹೋದರೆ ಕೊಚ್ಚಿಕೊಂಡು ಹೋಗ್ತೀವಿ ಅಂತ ಕಾಂಗ್ರೆಸಿಗರು ರಾಮನಿಗೆ ಗೌರವ ಕೊಡಲು ಬಂದಿದ್ದಾರೆ. ಕನಿಷ್ಠ ವಿರೋಧ ಪಕ್ಷದ ಸ್ಥಾನ ಆದರೂ, ಸಿಗಲಿ ಅಂತ ವಾಪಸ್ ಬಂದಿದ್ದಾರೆ’ ಎಂದು ಕುಟುಕಿದರು.
’ಸಿದ್ದರಾಮಯ್ಯ ತಲೆಯಲ್ಲಿ ಮೆದುಳು ಇದೆಯೋ ಇಲ್ಲವೋ ಗೊತ್ತಿಲ್ಲ. ರಾಮನ ಪಕ್ಕದಲ್ಲಿ ಸೀತೆ, ಹನುಮಂತ ಇಲ್ಲ ಅಂದಿದ್ದಾರೆ. ಅಯೋಧ್ಯೆಯಲ್ಲಿ ಮಸೀದಿ ಒಡೆದಾಗ ಇದ್ದಿದ್ದು ಬಾಲ ರಾಮ ವಿಗ್ರಹ. ಹಳ್ಳಿ ಜನ ಕೂಡ ರಾಮ ಹುಟ್ಟಿದ್ದು ಅಯೋಧ್ಯೆ ಅಂತಾರೆ. ಬಾಲ ರಾಮನ ಪಕ್ಕ ಸೀತೆ ಇರಲ್ಲ ಅಂತಾನೂ ಗೊತ್ತಿಲ್ಲ‘ ಎಂದು ಲೇವಡಿ ಮಾಡಿದರು.
’ಸಿದ್ದರಾಮಯ್ಯ ತಾನು ಹಿಂದುಳಿದ, ದಲಿತ ನಾಯಕ ಅಂತ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ ಜಾತಿ ಗಣತಿ ವರದಿ ಸಿದ್ಧವಾಗಿದ್ದರೂ ಬಿಡುಗಡೆ ಮಾಡುತ್ತಿಲ್ಲ. ಮುಖ್ಯಮಂತ್ರಿ ಯಾವಾಗ ಕೇಳಿದರೂ ವರದಿ ಕೊಡುತ್ತೇನೆ ಎಂದು ಹಿಂದುಳಿದ ವರ್ಗಗಳ ಅಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಸಿಎಂ ಮೊದಲು ವರದಿ ಸ್ವೀಕಾರ ಮಾಡಲಿ‘ ಎಂದರು.
ಸಿದ್ದರಾಮಯ್ಯ ಈಗ ತಮ್ಮ ಹಿಂಬಾಲಕರ ಮೂಲಕ ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶ ಮಾಡಲು ಹೊರಟಿದ್ದಾರೆ. ಅದು ವೋಟಿಗಾಗಿ ಮಾತ್ರ ಎಂದು ಹೇಳಿದರು.
ಪ್ರಮುಖರಾದ ಗಿರೀಶ್ ಪಟೇಲ್, ಟಿ.ಡಿ.ಮೇಘರಾಜ್, ರಮೇಶ್, ಚಂದ್ರಶೇಖರ್, ಶಿವರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.