ತೀರ್ಥಹಳ್ಳಿ: ಇಲ್ಲಿನ ದೊಡ್ಡಮನೆಕೇರಿ ನಿವಾಸಿ ಪ್ರಮೀಳಾ ನಾರಾಯಣ ಭಟ್ ಅವರು ತಮ್ಮ 63ನೇ ವಯಸ್ಸಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.
‘ಶಿರಸಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಡೆದು ಅನುತೀರ್ಣಳಾಗಿದ್ದೆ. ಬಡತನದ ಕಾರಣಕ್ಕೆ ಪುನಃ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ನಂತರ ಮದುವೆ ಆಗಿದ್ದರಿಂದ ಶಿಕ್ಷಣದ ಕನಸುಗಳು ಅಲ್ಲಿಗೆ ಮುಗಿದಂಗಾಗಿದ್ದವು. ಕಳೆದ ವರ್ಷ ಮೊಮ್ಮಗನಿಗೆ ಮನೆ ಪಾಠಕ್ಕೆ ಕಳಿಸುವ ಸಂದರ್ಭ ತಮಾಷೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತೇನೆ ಎಂದು ಹೇಳಿದ್ದೆ. ಮನೆ ಪಾಠ ಮಾಡುತ್ತಿದ್ದ ಮಾನಸಾ ಮತ್ತು ಶ್ರೀದತ್ತ ಅವರಿಬ್ಬರೂ ನೀವು ಪರೀಕ್ಷೆ ಬರೆಯಲೇಬೇಕು ಎಂದು ಒತ್ತಾಯಿಸಿದ್ದರಿಂದ ನಾನೀಗ ಈ ಸಾಧನೆ ಮಾಡುವಂತಾಯಿತು’ ಎಂದು ಪ್ರಮೀಳಾ ಹೇಳಿದರು.
‘ಪರೀಕ್ಷೆ ತಯಾರಿಗೆ ಬೇಕಾದ ಪುಸ್ತಕ, ನೋಟ್ಸ್, ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿ ಕೊಟ್ಟರು. 6 ತಿಂಗಳು ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 44 ಅಂಕ ಪಡೆದಿದ್ದೇನೆ. ಇದೆಲ್ಲದಕ್ಕೂ ನನ್ನ ಪತಿ ಪ್ರಕಾಶ್ ಜಿ. ನಾಯಕ್ ಬೆಂಬಲ ಕೊಟ್ಟರು. 6 ತಿಂಗಳು ಅಡುಗೆ ಮಾಡುವಂತೆ ಒತ್ತಾಯಿಸುವ ಬದಲು ಹೋಟೆಲ್ ಊಟದ ಮೊರೆ ಹೋದರು. ನನಗೆ ಓದಲು ಇದು ಸಹಕಾರಿಯಾಯಿತು’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.
45 ವರ್ಷಗಳ ನಂತರ ಮತ್ತೆ ಓದು ಆರಂಭಿಸಿದ್ದು ಖುಷಿ ಕೊಟ್ಟಿದೆ. ಮನೆಯಲ್ಲೂ ಸಂಭ್ರಮದ ವಾತಾವರಣ ಮೂಡಿದೆ. ಮುಂದಿನ ಹಂತದ ಶಿಕ್ಷಣ ಪಡೆಯುವ ಬಗ್ಗೆ ಯೋಚಿಸುತ್ತಿದ್ದೇನೆ.-ಪ್ರಮೀಳಾ ನಾರಾಯಣ ಭಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.