ADVERTISEMENT

ಕೊರೊನಾಗೆ ಕೊಲ್ಲುವ ಶಕ್ತಿ ಕಡಿಮೆ: ಆಯುರ್ವೇದ ತಜ್ಞ ಡಾ.ಗಿರಿಧರ್ ಕಜೆ 

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 13:43 IST
Last Updated 29 ಜುಲೈ 2020, 13:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿವಮೊಗ್ಗ: ಕೊಲ್ಲುವ ಶಕ್ತಿ ಕಡಿಮೆ ಇರುವ ಕೊರೊನಾ ಹತೋಟಿಗೆ ತರಲು ಭಾರತೀಯ ಆಯುರ್ವೇದ ಸಹಕಾರಿ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಅಪಾಯ ದೂರವಾಗುತ್ತದೆ ಎಂದು ಆಯುರ್ವೇದ ತಜ್ಞ ಡಾ.ಗಿರಿಧರ್ ಕಜೆ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಕೋವಿಡ್ ಸುರಕ್ಷಾ ಪಡೆ ಆಯೋಜಿಸಿದ್ದ ರೋಗ ನಿರೋಧಕ ಶಕ್ತಿವರ್ಧಕಗಳ 4 ಲಕ್ಷ ಕಿಟ್‌ಗಳ ಉಚಿತ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯರು ತಪ್ಪು ಮಾಡಬಹುದು. ಔಷಧ ಸಸ್ಯಗಳು ತಪ್ಪು ಮಾಡುವುದಿಲ್ಲ. ನಮ್ಮ ದೇಹದಲ್ಲಿ ರೋಗ ಎಲ್ಲಿದೆ ಎಂದು ಹುಡುಕಿ ಚಿಕಿತ್ಸೆ ನೀಡುತ್ತವೆ. ಕೊರೊನಾಗೆ ಯಾರೂ ಹೆದರುವ ಅಗತ್ಯವಿಲ್ಲ. ಚೀನಾದ ಕಳಪೆ ವಸ್ತುಗಳಂತೆ ಅದು ಕೂಡ ಬಂದಿದೆ. ಭಾರತದ ಆಹಾರ ಪದ್ಧತಿ, ಜೀವನ ಕ್ರಮ ಅದರ ವಿರುದ್ಧ ಹೋರಾಡಲು ಶಕ್ತಿ ತುಂಬಿದೆ ಎಂದರು.

ADVERTISEMENT

ಸಚಿವ ಕೆ.ಎಸ್.ಈಶ್ವರಪ್ಪ ಅವರು ಒಂದು ಬಹುದೊಡ್ಡ ಕಾರ್ಯಕ್ರಮ ಆಯೋಜಿಸಿದ್ದಾರೆ. ಇಡೀ ರಾಜ್ಯದ ಜನತೆ ಶಿವಮೊಗ್ಗದತ್ತ ನೋಡುತ್ತಿದ್ದಾರೆ. ರೋಗ ನಿರೋಧಕ ಔಷಧಗಳನ್ನು ಉಚಿತವಾಗಿ ನೀಡುವ ಪುಣ್ಯದ ಕೆಲಸ ಕೋವಿಡ್ ಪಡೆ ಮಾಡುತ್ತಿದೆ. ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯ ಪ್ರತಿ ಮನೆಗೂ ತಲುಪಿಸಲಾಗುತ್ತಿದೆ ಎಂದು ಶ್ಲಾಘಿಸಿದರು.

ಪ್ರಾಸ್ತಾವಿಕ ಮಾತನಾಡಿದ ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್, ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯಲ್ಲಿ ಈ ಕಾಯಿಲೆ ಎದುರಿಸುವ ಶಕ್ತಿ ಇದೆ. ನಮ್ಮ ಊಟ, ಉಸಿರಾಟ, ಔಷಧ, ಮನೆ ಮದ್ದು, ವ್ಯಾಯಾಮ, ಧ್ಯಾನ, ಯೋಗಗಳಿಂದ ಕಾಯಿಲೆ ಸಮರ್ಥವಾಗಿ ಎದುರಿಸಬಹುದು ಎಂದರು.

ಕೋವಿಡ್ ಸುರಕ್ಷಾ ಪಡೆಯ ಅಧ್ಯಕ್ಷ, ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ವಿಧಾನ ಪರಿಷತ್ ಸದಸ್ಯರಾದ ಆರ್. ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಇ. ಕಾಂತೇಶ್, ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ವಾಸುದೇವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.