ಹಾಳು ಬಿದ್ದಿರುವ ವಸತಿಗೃಹ
ಕೋಣಂದೂರು: ಇಲ್ಲಿನ ಬಾಂಡ್ಯಾ–ಕುಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟ ಬಸವಾನಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 4 ತಿಂಗಳುಗಳಿಂದ ವೈದ್ಯರಿಲ್ಲದ ಕಾರಣ ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರುಕೈ, ಕಾನುಕೊಪ್ಪ, ನೇರಲೆ, ಬಿಳಿಗಿಮನೆ, ಜಡ್ಡಿನಗದ್ದೆ, ಹೊಳೆಗದ್ದೆ, ಕೌಟುಮನೆ, ಗುಂಡಗದ್ದೆ, ಏಳುಮನೆ, ಬಸವಾಪುರ ಸೇರಿದಂತೆ 15ಕ್ಕೂ ಹೆಚ್ಚು ಗ್ರಾಮಗಳ ನಿವಾಸಿಗಳು ಈ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ.
ಪ್ರಸ್ತುತ ತಾಪಮಾನ ಏರಿಕೆಯಿಂದಾಗಿ ಜನರು ಜ್ವರ, ಕೆಮ್ಮು, ತಲೆನೋವು, ಹೊಟ್ಟೆನೋವು ಸೇರಿದಂತೆ ಇತರೆ ವ್ಯಾಧಿಗಳಿಂದ ಬಳಲುವಂತಾಗಿದೆ. ವೈದ್ಯರಿಲ್ಲದಿರುವುದರಿಂದ ಶುಶ್ರೂಷಕಿಯರೇ ಚಿಕಿತ್ಸೆ ನೀಡುವಂತಾಗಿದೆ. ರೋಗ ಉಲ್ಬಣಗೊಂಡರೆ ತಾಲ್ಲೂಕು ಕೇಂದ್ರ ತೀರ್ಥಹಳ್ಳಿ, ಕೋಣಂದೂರು, ಮಳಲಿಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ.
‘ಈ ಭಾಗದ ರೋಗಿಗಳ ಸೇವೆಗೆ ಕಾಯಂ ವೈದ್ಯರ ನೇಮಕವಾಗಬೇಕು. ಆರೋಗ್ಯ ಕೇಂದ್ರಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಬಡರೋಗಿಗಳು ಚಿಕಿತ್ಸೆಗಾಗಿ ಅಲೆದಾಡುವುದನ್ನು ತಪ್ಪಿಸಲು ಉತ್ತಮ ಆರೋಗ್ಯ ಸೇವೆ ಈ ಕೇಂದ್ರದಲ್ಲೇ ಸಿಗುವಂತಾಗಬೇಕು’ ಎಂಬುದು ಗ್ರಾಮಸ್ಥರ ಆಗ್ರಹ.
‘ನಮ್ಮದು ಗುಡ್ಡಗಾಡು ಪ್ರದೇಶವಾದ್ದರಿಂದ ರಾತ್ರಿ ವೇಳೆ ಯಾರಿಗಾದರೂ ತೀವ್ರ ಅನಾರೋಗ್ಯ ಸಮಸ್ಯೆ ಉಂಟಾದರೆ ದೂರದ ಆಸ್ಪತ್ರೆಗೆ ಹೋಗಲು ಕಷ್ಟವಾಗುತ್ತದೆ. ಇದನ್ನು ತಪ್ಪಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಸೇವೆ ಒದಗಿಸಬೇಕು’ ಎಂದು ಬಾಂಡ್ಯಾ–ಕುಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಕೆ.ವೆಂಕಟೇಶ್ ಮನವಿ ಮಾಡಿದರು.
‘ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಸತಿ ಗೃಹವಿದ್ದು, ಹಾಳು ಬಿದ್ದಿದೆ. ಆದ್ದರಿಂದ ಶುಶ್ರೂಷಕಿಯರು ಕೆಲಸದ ಅವಧಿ ಮುಗಿದ ನಂತರ ಅವರ ಊರುಗಳಿಗೆ ಹೋಗುತ್ತಾರೆ. ರಾತ್ರಿ ಇಲ್ಲಿ ಯಾರೂ ಉಳಿಯುತ್ತಿಲ್ಲ. ತಕ್ಷಣಕ್ಕೆ ಪ್ರಾಥಮಿಕ ಚಿಕಿತ್ಸೆ ಪಡೆಯಲೂ ಸಾಧ್ಯವಾಗುತ್ತಿಲ್ಲ. ಶುಶ್ರೂಷಕಿಯರು ತಂಗಲು ಹಾಗೂ ಜನರಿಗೆ ರಾತ್ರಿ ಸೇವೆ ಲಭ್ಯವಾಗಬೇಕಾದರೆ ವಸತಿಗೃಹವನ್ನು ನವೀಕರಿಸಬೇಕು’ ಎಂದು ಗ್ರಾಮಸ್ಥರಾದ ರಾಜಗೋಪಾಲ, ಟಿ.ಎಸ್.ಉಮೇಶ್, ಮಹೇಶ, ಗೋಪಿ ಕಲ್ಲೇರಿ, ರಮೇಶ್, ರಾಮದಾಸ್ ಹಾಗೂ ಸಂತೋಷ್ ಒತ್ತಾಯಿಸುತ್ತಾರೆ.
‘ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿಶಾಲವಾದ ಪ್ರಾಂಗಣವಿದ್ದು, ರಾತ್ರಿ ವೇಳೆ ಜಾನುವಾರುಗಳ ವಾಸ ತಾಣವಾಗಿದೆ. ಆರೋಗ್ಯ ಕೇಂದ್ರದ ಸುತ್ತಲೂ ಕಾಂಪೌಂಡ್ ನಿರ್ಮಿಸಿ ಸ್ವಚ್ಛತೆ ಕಾಪಾಡಬೇಕು’ ಎಂದೂ ಇವರು ಮನವಿ ಮಾಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.