ADVERTISEMENT

ಬೆನ್ನಿಗೆ ಚೂರಿ ಹಾಕಿದವರ ಹೆಸರು ಬಹಿರಂಗಕ್ಕೆ ಈಶ್ವರಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 10:55 IST
Last Updated 19 ಡಿಸೆಂಬರ್ 2020, 10:55 IST
ಕೆ.ಎಸ್‌. ಈಶ್ವರಪ್ಪ 
ಕೆ.ಎಸ್‌. ಈಶ್ವರಪ್ಪ    

ಶಿವಮೊಗ್ಗ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಥಾನಮಾನ ನೀಡಿದ ತಮ್ಮ ಪಕ್ಷದ ಮುಖಂಡರನ್ನೇ ದೂಷಿಸುತ್ತಿದ್ದಾರೆ, ಅವರಿಗೆ ತಾಕತ್ತಿದ್ದರೆ ಬೆನ್ನಿಗೆ ಚೂರಿ ಹಾಕಿದವರ ಹೆಸರು ಬಹಿರಂಗಪಡಿಸಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.

ಮುಖ್ಯಮಂತ್ರಿಯಾಗಿದ್ದಾಗ ಜನಪರ ಕೆಲಸಗಳನ್ನು ಮಾಡಿದ್ದರೆ ಸೋಲು ಕಾಣುತ್ತಿರಲಿಲ್ಲ. ಎರಡೂವರೆ ವರ್ಷಗಳ ನಂತರ ಜ್ಞಾನೋದಯವಾಗಿದೆ. ಡಾ.ಜಿ.ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಶಾಸಕರು ಸೋತಾಗ ಏಕೆ ಕಾರಣಗಳನ್ನು ಹುಡುಕಲಿಲ್ಲ. ಸಿದ್ದರಾಮಯ್ಯ ಅವರಿಗೆ ಸೋತಾಗ ಮಾತ್ರ ಕಾಂಗ್ರೆಸ್‌ ನೆನಪಾಗುತ್ತದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಕುಟುಕಿದರು.

ಬಿಜೆಪಿ, ಜೆಡಿಎಸ್ ಜತೆಗೆ ನಮ್ಮ ಪಕ್ಷದ ಕೆಲವರು ಸೇರಿಕೊಂಡು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸಿದರು ಎನ್ನುವ ಅವರಿಗೆ ಬಿಜೆಪಿ ಮತ್ತು ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದ್ದರೆ ಬಾದಾಮಿ ಕ್ಷೇತ್ರದಲ್ಲೂ ಸೋಲುತ್ತಿದ್ದರು ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲ. ಅವರ ಹೇಳಿಕೆಯಲ್ಲಿ ಪ್ರಬುದ್ಧ ನಾಯಕತ್ವದ ಲಕ್ಷಣಗಳೂ ಇಲ್ಲ. ವೇದಿಕೆ ಮೇಲೆ ಬಾಯಿಗೆ ಬಂದಂತೆ ಮಾತನಾಡುವುದಷ್ಟೆ ಗೊತ್ತಿದೆ ಎಂದು ಹರಿಹಾಯ್ದರು.

ADVERTISEMENT

ಜೆಡಿಎಸ್‌ ತೊರೆದು ಬಂದಿದ್ದ ಅವರಿಗೆ ಕಾಂಗ್ರೆಸ್‌ ಎಲ್ಲ ಅಧಿಕಾರವನ್ನೂ ನೀಡಿದೆ. ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ, ವಿರೋಧ ಪಕ್ಷದ ನಾಯಕ ಸ್ಥಾನ ನೀಡಿದೆ. ಇಷ್ಟಿದ್ದರೂ ಕೂಡ ಕಾಂಗ್ರೆಸ್ ಹಾಗೂ ಪಕ್ಷದ ನಾಯಕರ ಮೇಲೆ ವಿಶ್ವಾಸವಿಲ್ಲ. ತಾವು ಜನರ ತೀರ್ಪಿನಿಂದ ಸೋತಿದ್ದರೂ ಒಪ್ಪಿಕೊಳ್ಳುವ ಸೌಜನ್ಯವಿಲ್ಲ. ಅವರ ನಡೆ ಗಮನಿಸಿದರೆ ಪಕ್ಷ ಬಿಟ್ಟು ಹೋಗಲಿದ್ದಾರೆ. ಇಲ್ಲಾ ಬೇರೆ ಪಕ್ಷ ಕಟ್ಟುವ ಯೋಚನೆಯಲ್ಲಿರಬಹುದು ಎಂದು ಕುಟುಕಿದರು.

ಜಾತಿವಾರು ಸಮೀಕ್ಷೆಯ ವರದಿ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಅವರೇ ಮುಖ್ಯಮಂತ್ರಿಯಾಗಿದ್ದಾಗ ಏಕೆ ಬಿಡುಗಡೆ ಮಾಡಲಿಲ್ಲ? ಈಗ ವರದಿ ಬಿಡುಗಡೆಗೆ ಆಗ್ರಹಿಸುವ ಮೂಲಕ ಅಲ್ಪಸಂಖ್ಯಾತು, ದಲಿತರು, ಹಿಂದುಳಿದ ವರ್ಗಗಳ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಕ್ಷಮೆ ಕೇಳಬೇಕು. ಇಲ್ಲ ತಮ್ಮ ಸಂಸ್ಕೃತಿ ಇದೇ ಎಂದು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.