ADVERTISEMENT

ಮುಂದಿನ ಚುನಾವಣೆಯಲ್ಲೂ ಬಿಜೆಪಿಗೆ ರಾಜ್ಯ ಗದ್ದುಗೆ: ಕೆ.ಎಸ್.ಈಶ್ವರಪ್ಪ

ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಆಶಯ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 14:45 IST
Last Updated 5 ಆಗಸ್ಟ್ 2021, 14:45 IST
ಶಿವಮೊಗ್ಗಕ್ಕೆ ಗುರುವಾರ ಆಗಮಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಸ್ವಾಗತಿಸಿದರು.
ಶಿವಮೊಗ್ಗಕ್ಕೆ ಗುರುವಾರ ಆಗಮಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಸ್ವಾಗತಿಸಿದರು.   

ಶಿವಮೊಗ್ಗ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪುರ್ಣ ಬಹುಮತ ಪಡೆಯಲಿದೆ. ಆರಗ ಜ್ಞಾನೇಂದ್ರ ಮತ್ತೆ ಉತ್ತಮ ಅವಕಾಶ ಪಡೆಯಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾದ ನಂತರ ಮೊದಲ ಬಾರಿ ಜಿಲ್ಲೆಗೆ ಆಗಮಿಸಿದ್ದ ಅವರಿಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಆರಗ ಅವರು ನಿರಂತರ ಹೋರಾಟ, ಸಂಘಟನೆಯ ಮೂಲಕ ಮೇಲೆ ಬಂದವರು. ನಿರಂತರವಾಗಿ ಜನರ ಒಡನಾಟವಿದೆ. ಸಚಿವರಾಗಿ ಎರಡು ವರ್ಷಗಳು ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ. ಬೇರೆ ಪಕ್ಷಗಳಿಂದ ಬಂದವರ ದಿಸೆಯಿಂದ ಈಗ ಅವಕಾಶ ಸಿಕ್ಕಿದೆ. ಕೊನೆಗೂ ಸಚಿವ ಸ್ಥಾನ ಅಲಂಕರಿಸಿದ್ದಾರೆ. ಮುಂದೆ ಇನ್ನಷ್ಟು ಉತ್ತಮ ಅವಕಾಶಗಳು ದೊರೆಯಲಿವೆ ಎಂದರು.

ADVERTISEMENT

ಮುಂದಿನ ಚುನಾವಣೆಯಲ್ಲಿ ಭದ್ರಾವತಿ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನೂ ಗೆಲ್ಲಬೇಕು. ಪಕ್ಷವನ್ನು ಮತ್ತಷ್ಟು ಬಲಗೊಳಿಸಲು, ಸ್ಪಷ್ಟಬಹುಮತ ತಂದುಕೊಡಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಕೋರಿದರು.

ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಮೂರು ದಶಕಗಳು ತೀರ್ಥಹಳ್ಳಿ ಕ್ಷೇತ್ರದ ಜನರ ಸೇವೆ ಮಾಡಿರುವೆ. ಈಗ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಲಭಿಸಿದೆ. ಕ್ಷೇತ್ರದ ಜನರ ಅನುಮತಿ ಪಡೆದು ರಾಜ್ಯದ ಕಾರ್ಯ ನೋಡಿಕೊಳ್ಳುವೆ. ಯಾವ ಖಾತೆ ಕೊಟ್ಟರೂ ನಿಭಾಯಿಸುವೆ ಎಂದರು.

ಕೋಟೆ ರಸ್ತೆಯ ಸೀತಾ ರಾಮಾಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ನಂತರ ಆರ್‌ಎಸ್‌ಎಸ್‌ ಕಚೇರಿಗೆ ಭೇಟಿ ನೀಡಿದರು. ಇಬ್ಬರೂ ಸಚಿವರಿಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಅದ್ದೂರಿ ಸ್ವಾಗತ ನೀಡಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಯಘೋಷ ಮೊಳಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.