ADVERTISEMENT

ಸಾರಿಗೆ ನೌಕರರ ಮುಷ್ಕರ: ಶಿವಮೊಗ್ಗದಲ್ಲಿ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 3:57 IST
Last Updated 5 ಆಗಸ್ಟ್ 2025, 3:57 IST
   

ಶಿವಮೊಗ್ಗ: ವೇತನ ಪರಿಷ್ಕರಣೆ ಸೇರಿದಂತೆ ಬೇರೆ ಬೇರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ಒಕ್ಕೂಟಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಸಾರಿಗೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಸ್ಥೆಯ ಕಾಯಂ ನೌಕರರು ಕರ್ತವ್ಯಕ್ಕೆ ಹಾಜರಾಗದ ಕಾರಣ ಶೇ 60 ರಷ್ಟು ಕೆಎಸ್ ಆರ್ ಟಿಸಿ ಬಸ್ ಗಳು ರಸ್ತೆಗೆ ಇಳಿಯಲಿಲ್ಲ.

ಶಿವಮೊಗ್ಗ ಡಿಪೋದಲ್ಲಿ ರಾತ್ರಿ ಬಂದು ತಂಗಿದ್ದ ಬಸ್‌ಗಳು ಮಾತ್ರ ಮುಂಜಾನೆ ತೆರಳಿದವು. ದೈನಂದಿನ ಮಾರ್ಗಗಳ ಬಸ್‌ಗಳ ಓಡಾಟದಲ್ಲಿ ವ್ಯತ್ಯಯವಾಗಿತ್ತು. ಬಸ್‌ಗಳ ನಿರೀಕ್ಷೆಯಲ್ಲಿಯೇ ಪ್ರಯಾಣಿಕರು ನಿಲ್ದಾಣದಲ್ಲಿಯೇ ಉಳಿದಿದ್ದಾರೆ.

ಮುಷ್ಕರ ಇರುವುದು ಗೊತ್ತಿಲ್ಲದೇ ಬಸ್ ನಿಲ್ದಾಣಕ್ಕೆ ಬಂದಿದ್ದ ಬಹಳಷ್ಟು ಜನರು ಮನೆಗೆ ಮರಳಿದರೆ, ಹೆಚ್ಚಿನವರು ಖಾಸಗಿ ಬಸ್ ಗಳ ಮೊರೆ ಹೋದರು.

ADVERTISEMENT

ಬಲವಂತವಾಗಿ ಕರ್ತವ್ಯ ನಿರ್ವಹಣೆ?:

ಮುಷ್ಕರಕ್ಕೆ ಕಾಯಂ ನೌಕರರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಆದರೆ ತರಬೇತಿ ಅವಧಿಯಲ್ಲಿರುವ ಹಾಗೂ ಖಾಸಗಿ ಚಾಲಕರನ್ನು ಕರೆತಂದು ಬಲವಂತವಾಗಿ ಕೆಲವು ಬಸ್‌ಗಳನ್ನು ಓಡಿಸಲಾಗುತ್ತಿದೆ. ಮುಷ್ಕರಕ್ಕೆ ಬೆಂಬಲ ಕೊಟ್ಟಿರುವ ಚಾಲಕರು-ನಿರ್ವಾಹಕರ ಮೇಲೆ ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ. ಬೆದರಿಕೆ ಹಾಕುತ್ತಿದ್ದಾರೆ ಎಂದು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಬೆಂಬಲಿತ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಮಹಾದೇವು ಆರೋಪಿಸಿದರು.

‘ತರಬೇತಿ ನಿರತ 20 ಮಂದಿ ಚಾಲಕರನ್ನು ರಾತ್ರಿಯೇ ಕರೆತಂದು ಬಸ್ ನಿಲ್ದಾಣದಲ್ಲಿ ಕೂಡಿ ಹಾಕಿ ಈಗ ಬಲವಂತವಾಗಿ ಬಸ್ ಚಾಲನೆಗೆ ಕಳಿಸಿದ್ದಾರೆ. ಕೆಲಸ ಮಾಡಲು ಮುಂದಾಗಿರುವ ಚಾಲಕರು-ನಿರ್ವಾಹಕರಿಗೆ ತೊಂದರೆ ಮಾಡುವುದಿಲ್ಲ. ನಮ್ಮದು ಶಾಂತಿಯುತ ಪ್ರತಿಭಟನೆ’ ಎಂದು ಮಹಾದೇವು ಹೇಳಿದರು.

‘ಯಾರನ್ನೂ ಬಲವಂತಪಡಿಸಿಲ್ಲ’

'ಬಸ್ ಓಡಿಸುವಂತೆ ನ ನಾವು ಯಾರನ್ನೂ ಬಲಪಡಿಸಿಲ್ಲ. ಹಿಂದಿನ ದಿನವೇ (ಸೋಮವಾರ) ಚಾಲಕರು ಬಂದು ಸಹಿ ಮಾಡಿ ಸ್ವಯಂ ಪ್ರೇರಿತವಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮುಷ್ಕರ ನಿರತ ಉಳಿದವರೂ ಕೆಲಸಕ್ಕೆ ಹಾಜರಾಗುವ ವಿಶ್ವಾಸವಿದೆ. ಬಸ್ ಗಳ ದೈನಂದಿನ ಕಾರ್ಯಾಚರಣೆ ಶೀಘ್ರ ಸರಿಯಾಗಲಿದೆ' ಎಂದು ಕೆಎಸ್ ಆರ್ ಟಿಸಿ ಶಿವಮೊಗ್ಗ ವಿಭಾಗೀಯ ನಿಯಂತ್ರಕ ಟಿ.ಆರ್.ನವೀನ್ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ಮುಷ್ಕರ ಕರೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿರುವುದು ಕಂಡುಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.