ಹೊಸನಗರ: ಮಲೆನಾಡಿನ ದಟ್ಟ ಕಾನನದ ನಡುವೆ ಭೋರ್ಗರೆಯುವ ಈ ಜಲಧಾರೆ ತನ್ನ ಮನಮೋಹಕ ಸೌಂದರ್ಯದಿಂದ ಗಮನ ಸೆಳೆದಿದೆ. ಪ್ರಕೃತಿದತ್ತ ಹಸಿರು ವನಸಿರಿಯ ಮಧ್ಯೆ ಹಾಲ್ನೊರೆಯಂತೆ ಕಂಗೊಳಿಸುವ ಇದರ ರೂಪರಾಶಿಗೆ ಸರಿಸಾಟಿ ಇಲ್ಲ ಎನ್ನುವಷ್ಟು ಆಕರ್ಷಕವಾಗಿದೆ.
ಈ ಜಲರಾಶಿಯ ಹೆಸರು ಕುಂಚಿಕಲ್ ಜಲಪಾತ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಗರ ಹೋಬಳಿಯ ಖೈರಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡಗೋಡು ಸಮೀಪ ದಟ್ಟ ಅಡವಿಯ ನಡುವೆ ಭೋರ್ಗರೆಯುತ್ತಿದೆ. ಆದರೆ, ಇಲ್ಲಿಗೆ ಸಾರ್ವಜನಿಕರ ಪ್ರವೇಶ ನಿಷಿದ್ಧ.
ಆಗುಂಬೆ ಸಮೀಪದ ಕಾಡು ಪ್ರದೇಶದಲ್ಲಿ ಉಗಮಿಸುವ ವಾರಾಹಿ ನದಿ ಅಂದಾಜು 25 ಕಿ.ಮೀ. ಕ್ರಮಿಸಿ ನಂತರ ಕುಂದಾಪುರ ಸಮೀಪ ಅರಬ್ಬಿ ಸಮುದ್ರ ಸೇರುತ್ತದೆ. ಹೀಗೆ ಕ್ರಮಿಸುವ ಮಾರ್ಗಮಧ್ಯೆ ನಿಡಗೋಡು ಬಳಿಯ ಗುಡ್ಡಗಾಡು ಇಳಿಜಾರಿನಲ್ಲಿ ಕಲ್ಲುಬಂಡೆಗಳ ಅಡಿಯಲ್ಲಿ ತೊರೆ ತೊರೆಯಾಗಿ ಸುರಿಯುತ್ತದೆ.
1,493 ಅಡಿ ಎತ್ತರದಿಂದ 4 ಹಂತದಲ್ಲಿ ಧುಮ್ಮಿಕ್ಕುವ ನಯನ ಮನೋಹರ ಜಲರಾಶಿ ನೋಡುಗರನ್ನು ಕೈಬಿಸಿ ಕರೆಯುತ್ತಿದೆ. ಕೇವಲ ಎತ್ತರದಿಂದ ಮಾತ್ರ ಕುಂಚಿಕಲ್ ಜಲಪಾತ ಹೆಸರು ಪಡೆದಿಲ್ಲ. ಸಮೃದ್ಧ ವನರಾಶಿಯ ಮಧ್ಯೆ ಧುಮ್ಮಿಕ್ಕುವ ಸೊಗಸಿನ ಪರಿಯೇ ವರ್ಣನಾತೀತ.
ಅತೀ ಎತ್ತರದ ಫಾಲ್ಸ್:
ದೇಶದ ಅತಿ ಎತ್ತರದ ಜಲಪಾತ ಎಂಬ ಹಿರಿಮೆ ಇದ್ದರೂ ಈ ಸುಂದರ ಜಲಪಾತ ತೆರೆಮರೆಯಲ್ಲೇ ಉಳಿದಿದೆ. ಪ್ರಚಾರಕ್ಕೆ ಬಾರದೆ ಅಡವಿಯಲ್ಲೇ ಅಡಗಿದೆ. ಕುಂಚಿಕಲ್ ಎಲ್ಲ ಜಲಾಪಾತಗಳ ಹಾಗಲ್ಲ. ಈ ಜಲಪಾತವನ್ನು ನೋಡುವುದು ಅಷ್ಟು ಸುಲಭ ಅಲ್ಲ. ಅದಕ್ಕೆ ಕಾರಣ ಸಾಕಷ್ಟಿದೆ.
ಸಾಹಸಿಗರಿಗೆ ಮಾತ್ರ:
ಕುಂಚಿಕಲ್ ಜಲಪಾತ ವೀಕ್ಷಿಸುವುದೆಂದರೆ ಸಾಮಾನ್ಯದ ಮಾತಲ್ಲ. ಇದು ಎಲ್ಲರಿಂದಲೂ ಸಾಧ್ಯವಿಲ್ಲ. ಅಲ್ಲದೆ ಅಲ್ಲಿಗೆ ಒಬ್ಬಿಬ್ಬರು ಹೋಗೋ ಹಾಗಿಲ್ಲ. ಇದು ಸಾಹಸಿಗರಿಗೂ ಸವಾಲ್ ಆಗಿದೆ. ಮಾಸ್ತಿಕಟ್ಟೆ– ಹುಲಿಕಲ್ ಭಾಗದಿಂದ ಹೊರಟರೆ ಅಂದಾಜು 3 ಕಿ.ಮೀ. ದಟ್ಟ ಕಾಡಿನಲ್ಲಿ ಸಾಗಬೇಕು. ಕಾಡ ಹಾದಿಯಲ್ಲಿ ಭಯ ಹುಟ್ಟಿಸುವ ಇಳಿಜಾರಿನಲ್ಲಿ ಕ್ರಮಿಸಬೇಕು. ಆಗ ಮಾತ್ರ ಜಲಪಾತದ ಮೇಲ್ಭಾಗ ತಲುಪಬಹುದು.
ಕಷ್ಟಪಟ್ಟರೆ ಮಾತ್ರ ಈ ಜಲಧಾರೆಯ ಎರಡು ಹಂತಗಳನ್ನು ವೀಕ್ಷಿಸಬಹುದು. ಇನ್ನು ಪಕ್ಕದ ಉಡುಪಿ ಜಿಲ್ಲೆಯ ವಾರಾಹಿ ಪವರ್ ಹೌಸ್ ಇರುವ ಹೊಸಂಗಡಿ ಸಮೀಪದ ಹಳ್ಳಿಯಿಂದ ಕೂಡ ಜಲಪಾತದ ತಳಭಾಗವನ್ನು ತಲುಪಬಹುದು. ಆದರೆ ಇಲ್ಲಿಂದ ಜಲಧಾರೆಯ ಕೊನೆಯ ಒಂದು ಹಂತವನ್ನು ಮಾತ್ರ ನೋಡಬಹುದು. ಬೇಸಿಗೆಯಲ್ಲೇ ಫಾಲ್ಸ್ ದಾರಿಯಲ್ಲಿ ಸಾಗುವುದು ಕಷ್ಟ. ಮಳೆಗಾಲದಲ್ಲಂತೂ ದಟ್ಟಡವಿಯಲ್ಲಿ ನಡೆದು ಸಾಗುವುದು ಇನ್ನಷ್ಟು ಸವಾಲು. ಈ ಕಾರಣದಿಂದಲೂ ಪ್ರವಾಸಿಗರಿಂದ ದೂರ ಉಳಿದಿದೆ.
ಪ್ರವಾಸಿಗರಿಗೆ ನಿರ್ಬಂಧ:
ಕುಂಚಿಕಲ್ ಜಲಪಾತದ ಸುತ್ತಮುತ್ತಲಿನ ಗ್ರಾಮಗಳ ಹಿರಿಯ ತಲೆಮಾರಿಗೆ ಮಾತ್ರ ಇದರ ವೈಶಿಷ್ಟ ತಿಳಿದಿದೆ. ಇಲ್ಲಿ ವಾರಾಹಿ ಜಲ ವಿದ್ಯುತ್ ಯೋಜನೆ ಸಾಕಾರಗೊಂಡ ನಂತರ ಜಲಪಾತದ ಸುತ್ತಮುತ್ತಲ ಜಾಗವನ್ನು ಕೆಪಿಸಿ ನಿರ್ಬಂಧಿತ ಪ್ರದೇಶವನ್ನಾಗಿ ಘೋಷಿಸಿದೆ. ಅಭಯಾರಣ್ಯದ ಇರುವುದರಿಂದ ಪ್ರವಾಸಿಗರ ಓಡಾಟಕ್ಕೆ ತಡೆ ಬಿದ್ದಿದೆ.
ಕೆಪಿಸಿ ಕಡತದಲ್ಲಿ ದಾಖಲು:
ಇತ್ತೀಚಿನ ವರ್ಷಗಳಲ್ಲಿ ಕುಂಚಿಕಲ್ ಫಾಲ್ಸ್ ಮಹತ್ವದ ಬಗ್ಗೆ ಹಾಗೂ ಇದು ದೇಶದಲ್ಲೇ ಅತಿ ಎತ್ತರದ್ದು ಎಂಬ ಬಗ್ಗೆ ಒಂದಷ್ಟು ಮಾಹಿತಿ ದಾಖಲಿಸುವ ಕೆಲಸವಾಗಿದೆ. ವಾರಾಹಿ ಯೋಜನೆ ಸಾಕಾರಗೊಳ್ಳುವ ಸಂದರ್ಭದಲ್ಲಿ ಕುಂಚಿಕಲ್ ಫಾಲ್ಸ್ ಎತ್ತರದ ಬಗ್ಗೆ ಅಂದಾಜಿಸಲಾಗಿದ್ದು, 455 ಮೀಟರ್ (1,493 ಅಡಿ) ಎಂದು ಕೆಪಿಸಿ ತನ್ನ ಕಡತದಲ್ಲಿ ದಾಖಲಿಸಿದೆ.
ಕುಂಚಿಕಲ್ ಜಲಪಾತ
ಮಳೆಗಾಲದಲ್ಲಿ ಜೀವಕಳೆ
ಕುಂಚಿಕಲ್‌ಗೆ ವಾರಾಹಿ ನೀರೇ ಜೀವಾಳ. ಈ ಭಾಗದಲ್ಲಿ ಮಳೆ ಹೆಚ್ಚು. ಈ ದಿನಗಳಲ್ಲಿ ಜಲಪಾತ ನೋಡುವುದೇ ಚೆಂದ. ಮಳೆಗಾಲದಲ್ಲಿ ಜೀವಂತಿಕೆ ಪಡೆಯುವ ಕುಂಚಿಕಲ್ ಬೇಸಿಗೆ ಬಂತೆಂದರೆ ಕುಂಚಿ ‘ಕಲ್ಲಿನ ಚಿತ್ತಾರ’ ಮಾತ್ರ ಕಂಡು ಬರುತ್ತದೆ. ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ ಕೊಡಚಾದ್ರಿ ದೇಶದಲ್ಲೇ ಪ್ರಸಿದ್ಧವಾಗಿದೆ. ಆದರೆ ವಿಶ್ವಪ್ರಸಿದ್ದ ಸ್ಥಾನ ಪಡೆಯಬೇಕಿದ್ದ ಕುಂಚಿಕಲ್ ಜಲಪಾತ ಪ್ರವಾಸಿಗರಿಂದ ದೂರ ಉಳಿಯುವಂತಾಗಲು ವಾರಾಹಿ ಯೋಜನೆ ಕಾರಣ.
ನಾನು ಮೂರ್ನಾಲ್ಕು ಬಾರಿ ಕುಂಚಿಕಲ್‌ಗೆ ಭೇಟಿ ನೀಡಿದ್ದೇನೆ. ಕಾಡದಾರಿಯಲ್ಲಿ ಕ್ರಮಿಸುವುದು ಸವಾಲಿನ ಕೆಲಸ. ಇಂದಿನ ತಲೆಮಾರಿನ ಜನರಿಗೆ ಅಷ್ಟು ಅರಿವಿಲ್ಲ. ವಾರಾಹಿ ಯೋಜನೆಯಿಂದಾಗಿ ನಿರ್ಬಂಧಿತ ಪ್ರದೇಶವಾಗಿರುವುದು ಕೂಡ ಇದಕ್ಕೆ ಕಾರಣ.ಅನಂತಮೂರ್ತಿ ಶೆಣೈ, ಸ್ಥಳೀಯ ನಿವಾಸಿ
ದೇಶದ ಅತಿ ದೊಡ್ಡ ಜಲಪಾತ ಜಿಲ್ಲೆಯಲ್ಲಿ ಇರುವುದು ಹೆಮ್ಮೆ. ಅಲ್ಲಿಯ ಪ್ರಕೃತಿಯನ್ನು ಕಾಪಾಡಿಕೊಂಡು ವೀಕ್ಷಣೆಗೆ ಅವಕಾಶ ಸಿಗಬೇಕಿದೆ. ಈ ನಿಟ್ಟಿನಲ್ಲಿ ಸಮಾನ ಮನಸ್ಕರು ಒಟ್ಟಾಗಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ.ಕೃಷ್ಣಮೂರ್ತಿ ಖೈರಗುಂದ, ಗ್ರಾಮ ಪಂಚಾಯಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.