ಕಾರ್ಗಲ್: ಲಿಂಗನಮಕ್ಕಿ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದ 2 ಘಟಕಗಳ ಪೈಕಿ 1 ಘಟಕದಲ್ಲಿ ರನ್ನರ್ ಬ್ಲೇಡ್‌ನಲ್ಲಿ ಬಿರುಕು ಮೂಡಿದ ಕಾರಣ ಒಂದು ವರ್ಷದಿಂದ ವಿದ್ಯುತ್ ಉತ್ಪಾದನಾ ಕಾರ್ಯ ಸ್ಥಗಿತಗೊಳಿಸಿದೆ.
ಲಿಂಗನಮಕ್ಕಿಯಲ್ಲಿ ಪ್ರತಿ ಘಟಕಗಳು 27.5 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತ, ರಾಜ್ಯಕ್ಕೆ ಒಟ್ಟು 55 ಮೆಗಾ ವ್ಯಾಟ್ ವಿದ್ಯುತ್ ಅನ್ನು 1964ರಲ್ಲಿ ನಿರ್ಮಾಣಗೊಂಡ ಈ ಎರಡು ಘಟಕಗಳು ಪೂರೈಸುತ್ತಾ ಬಂದಿವೆ.
ರಷ್ಯಾ ದೇಶದ ತಂತ್ರಜ್ಞಾನದೊಂದಿಗೆ ಅಡಕಗೊಂಡು ವಿದ್ಯುತ್ ಘಟಕಗಳು ಲಿಂಗನಮಕ್ಕಿ ಜಲವಿದ್ಯುದಾಗರದಲ್ಲಿ ಸ್ಥಾಪನೆಗೊಂಡು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿವೆ.
ಹಾಲಿ ರನ್ನರ್ ಬ್ಲೇಡ್‌ನಲ್ಲಿ ದೋಷ ಕಂಡ ನಂತರ ದುರಸ್ತಿ ಕಾರ್ಯದ ಬಗ್ಗೆ ಗಮನಹರಿಸಿದ್ದ ಕರ್ನಾಟಕ ವಿದ್ಯುತ್ ನಿಗಮಕ್ಕೆ ಇದು ಸವಾಲಿನ ಕೆಲಸವಾಗಿ ಕಂಡು ಬಂದಿತ್ತು. ದೋಷಪೂರಿತ ರನ್ನರ್ ಬ್ಲೇಡ್ ಅನ್ನು ಹೊರತೆಗೆಯಲು ಇಡೀ ಘಟಕವನ್ನೇ ಬಿಚ್ಚಿ ಹೊರ ತರಬೇಕಾದ ಅನಿವಾರ್ಯತೆ ಎದುರಾಗಿದೆ. ಘಟಕಗಳ ಕೆಳಭಾಗದ ಟೇಲ್ ರೇಸ್‌ನಿಂದ ರನ್ನರ್ ಬ್ಲೇಡ್‌ಗಳನ್ನು ಹೊರತೆಗೆಯಲು ಸಾಧ್ಯವಿಲ್ಲದ ಕಾರಣ ಘಟಕದ ಮೇಲ್ಭಾಗದಿಂದಲೇ ತಾಂತ್ರಿಕವಾಗಿ ಅಳವಡಿಸಿರುವ ಒಂದೊಂದು ಕ್ರೇನ್ ಸಹಾಯದಿಂದ ಮೇಲೆ ತರಬೇಕಾಗಿದೆ.
ವಿದ್ಯುತ್ ಘಟಕಗಳ ಅಡಿಯಲ್ಲಿ ನೀರಿನ ರಭಸಕ್ಕೆ ತಿರುಗುವ ರನ್ನರ್ ಬ್ಲೇಡ್‌ಗಳು ಸುಮಾರು 1.3 ಮೀಟರ್ ಅಗಲವಿದ್ದು ಅದನ್ನು ಅತ್ಯಂತ ನಾಜೂಕಾಗಿ ಹೊರ ತರುವ ಕಾರ್ಯಕ್ಕೆ ದೇಶದ ಹಲವಾರು ಸಂಸ್ಥೆಗಳು ಮುಂದೆ ಬಂದು ಪರಿಶೀಲನೆ ಮಾಡಿ ಹಿಂದೇಟು ಹಾಕಿವೆ ಎನ್ನಲಾಗುತ್ತಿದೆ.
ಈ ನಿಟ್ಟಿನಲ್ಲಿ ಹಾಲಿ ಕೆಪಿಸಿ ನಿಗಮ ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆದಿದ್ದು, ದುರಸ್ತಿಗೊಳಗಾಗಿರುವ ಘಟಕವನ್ನು ಅತಿ ಶೀಘ್ರ ದುರಸ್ತಿಪಡಿಸಿ ವಿದ್ಯುತ್ ಉತ್ಪಾದನೆಯಲ್ಲಿ ಮರು ತೊಡಗಬಹುದು ಎಂದು ಕೆಪಿಸಿ ನಿಗಮದ ಅಧಿಕಾರಿಗಳು ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.