
ಸಾಗರ: ‘ದೈನಂದಿನ ಜೀವನದ ಅಗತ್ಯಗಳನ್ನು ಕಡಿಮೆ ಮಾಡಿಕೊಂಡಷ್ಟೂ ನಮ್ಮ ಮಾನಸಿಕ ನೆಮ್ಮದಿ ಹೆಚ್ಚುತ್ತದೆ’ ಎಂದು ಮನಃಶಾಸ್ತ್ರಜ್ಞೆ ಡಾ.ಮಾಲಾ ಗಿರಿಧರ್ ಹೇಳಿದರು.
ಇಲ್ಲಿನ ವರದಶ್ರೀ ಹೋಟೆಲ್‌ನ ಮಲೆನಾಡು ಸಿರಿ ಸಭಾಂಗಣದಲ್ಲಿ ಜೀವನ್ಮುಖಿ ಸಂಸ್ಥೆ ತನ್ನ 5ನೇ ವರ್ಷದ ಕಾರ್ಯಚಟುವಟಿಕೆಗಳ ಆರಂಭದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಮಾನಸಿಕ ಆರೋಗ್ಯದ ಪ್ರಾಮುಖ್ಯತೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
‘ಮತ್ತೊಬ್ಬರನ್ನು ನೋಡಿ ಅವರಲ್ಲಿರುವ ಸೌಲಭ್ಯ, ಸವಲತ್ತುಗಳು ನಮ್ಮದಾಗಬೇಕು ಎಂದು ಹಂಬಲಿಸಿ ನಮ್ಮ ಮಿತಿಯನ್ನು ಮೀರಿದ ಅವಶ್ಯಕತೆಗಳ ಹಿಂದೆ ಹೋದರೆ ಅನಗತ್ಯ ತೊಂದರೆಗಳಿಗೆ ಸಿಲುಕಬೇಕಾಗುತ್ತದೆ. ನಮ್ಮ ಬೇಕು, ಬೇಡಗಳ ಬಗ್ಗೆ ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಸೇರಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ’ ಎಂದು ಸಲಹೆ ನೀಡಿದರು.
ಸಿಟ್ಟು ಬಂದಾಗ ಅದನ್ನು ಹೊರ ಹಾಕುವುದು ಒಳ್ಳೆಯದೆ. ಅದೇ ರೀತಿ ದುಃಖವಾದಾಗ ಅಳುವುದು ಕೂಡ ನಮ್ಮ ಮನಸ್ಸಿನ ದುಗುಡವನ್ನು ಕಡಿಮೆ ಮಾಡುತ್ತದೆ. ಒತ್ತಡಗಳನ್ನು ಮನಸ್ಸಿನಲ್ಲೆ ಇಟ್ಟುಕೊಂಡರೆ ಮನಸ್ಸು ಭಾರವಾಗಿ ಅದು ದೈಹಿಕ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಎಚ್ಚರಿಸಿದರು.
ಮನೆಯಲ್ಲೆ ಇರುವ ಮಹಿಳೆಯರು ಕೇವಲ ಅಡುಗೆ ಕೆಲಸಕ್ಕೆ ಸೀಮಿತವಾಗದೆ ನಡಿಗೆ, ನೃತ್ಯ, ಸಂಗೀತದ ಆಸ್ವಾದನೆ, ಲಘು ವ್ಯಾಯಾಮ, ಪುಸ್ತಕಗಳ ಓದಿನಂತಹ ಉತ್ತಮ ಅಭಿರುಚಿಯನ್ನು ರೂಢಿಸಿಕೊಂಡರೆ ಒತ್ತಡ ಮುಕ್ತರಾಗಬಹುದು ಎಂದರು.
ಸಂವಾದ ನಡೆಯಿತು. ಚರಕ ಸಂಸ್ಥೆಯ ಉಪಾಧ್ಯಕ್ಷೆ ನಾಗರತ್ನ ಎಂ. ಚೂಡಾಮಣಿ ರಾಮಚಂದ್ರ, ಎಂ.ವಿ.ಪ್ರತಿಭಾ, ಪದ್ಮಶ್ರೀ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.