
ಶಿವಮೊಗ್ಗ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೊಗ ಖಾತರಿ (ಮನರೇಗಾ) ಯೋಜನೆಯ ಮೂಲ ಸ್ವರೂಪವನ್ನೇ ಬದಲಾಯಿಸಿರುವ ಕೇಂದ್ರ ಸರ್ಕಾರ ಗ್ರಾಮ ಪಂಚಾಯಿತಿಗಳ ಅಧಿಕಾರ ಕಿತ್ತುಕೊಂಡಿದೆ. ಅಧಿಕಾರ ವಿಕೇಂದ್ರೀಕರಣದ ಪ್ರಜಾಪ್ರಭುತ್ವದ ಆಶಯವನ್ನೇ ಬುಡಮೇಲು ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರೇಗಾ ಗ್ರಾಮೀಣ ಜನರಿಗೆ ಉದ್ಯೋಗದ ಖಾತರಿ ನೀಡಿತ್ತು. ಗ್ರಾಮ ಪಂಚಾಯಿತಿಗಳನ್ನು ಬಲಪಡಿಸಿತ್ತು. ಆದರೆ ಈಗ ಅದನ್ನು ಕಿತ್ತುಕೊಳ್ಳಲಾಗಿದೆ ಎಂದರು.
ಯೋಜನೆಯ ಅನುಷ್ಠಾನ ಇದುವರೆಗೂ ಗ್ರಾಮ ಪಂಚಾಯಿತಿ ಮೂಲಕ ಆಗುತ್ತಿತ್ತು. ಅಗತ್ಯಕ್ಕನುಸಾರ ಜನರಿಗೆ ಕೆಲಸ ಕೊಡಲಾಗುತ್ತಿತ್ತು. ಆದರೆ ಈಗ 6 ತಿಂಗಳು ಮೊದಲೇ ಯೋಜನಾ ವರದಿ ನೀಡಿ, ಆನಂತರ ಅನುಮತಿ ಪಡೆಯಬೇಕು. ಅಲ್ಲದೆ ಅನುದಾನಕ್ಕೆ ಕಾಯಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ದುರುದ್ದೇಶ ಪೂರ್ವಕವಾಗಿ ನರೇಗಾ ಹೆಸರು ಬದಲಾಯಿಸಿ, ಅದಕ್ಕೆ ರಾಮನ ಹೆಸರು ಜೋಡಿಸಿ ಅನಗತ್ಯ ಗೊಂದಲ ಸೃಷ್ಟಿಮಾಡಿದೆ. ರಾಮನೇ ಇಲ್ಲದ ಹೆಸರಲ್ಲಿ ರಾಜಕೀಯಕ್ಕಾಗಿ ರಾಮನನ್ನು ಸೇರಿಸಲಾಗಿದೆ. ವಿಬಿ–ಜಿ ರಾಮ್-ಜಿ ಹೆಸರಲ್ಲಿ ರಾಮ ಎಲ್ಲಿದ್ದಾನೆ? ಯೋಜನೆಯ ಪೂರ್ಣ ಹೆಸರಲ್ಲಿ ರಾಮನೇ ಇಲ್ಲ. ಅದಾಗ್ಯೂ ಕೂಡ ರಾಮನ ಹೆಸರಿಗೇಕೆ ಕಾಂಗ್ರೆಸ್ಸಿಗರ ವಿರೋಧ ಎಂದು ಬಿಜೆಪಿ ಶಾಸಕರೊಬ್ಬರು ಪ್ರಶ್ನಿಸುತ್ತಾರೆ. ಈಗ ರಾಮ, ಮುಂದೆ ಕೃಷ್ಣನನ್ನು ತರುತ್ತೇವೆ ಎನ್ನುತ್ತಾರೆ. ಇಂತಹ ಗೊಂದಲ ಸೃಷ್ಟಿಸುವ ಹೇಳಿಕೆ ನೀಡುವುದನ್ನು ಬಿಜೆಪಿ ನಾಯಕರು ಮೊದಲು ನಿಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.
ನರೇಗಾಕ್ಕೆ ಈ ಹಿಂದೆ ಕೇಂದ್ರ ಸರ್ಕಾರವೇ ಶೇ 100ರಷ್ಟು ಅನುದಾನ ನೀಡುತ್ತಿತ್ತು. ಈಗ ಹೊಸ ಯೋಜನೆಯಡಿ ರಾಜ್ಯದ ಪಾಲು ಶೇ 40ರಷ್ಟು ನಿಗದಿಪಡಿಸಿದೆ. ಆದರೆ ಯೋಜನೆಯ ಸಂಪೂರ್ಣ ನಿಯಂತ್ರಣ ಕೇಂದ್ರ ಸರ್ಕಾರದ್ದೇ ಆಗಿದೆ. ಇದು ಯಾಕೆ? ಪೂರ್ಣ ಪ್ರಮಾಣದಲ್ಲಿ ತಾನೇಕೆ ಹಣ ಹಾಕಬೇಕು ಎಂಬ ಧೋರಣೆಯಿಂದಲೇ ಕೇಂದ್ರ ಸರ್ಕಾರ ಈ ರೀತಿ ಮಾಡಿದೆ ಎಂದು ಆರೋಪಿಸಿದರು.
ನರೇಗಾ ಗ್ರಾಮ ಪಂಚಾಯಿತಿ ಹಂತದಲ್ಲಿ ಭಾರೀ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಕೆಲಸ ಮಾಡದಿದ್ದರೂ ಹಾಜರಾತಿ ತೋರಿಸಿ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಕಳೆದ 11 ವರ್ಷಗಳಿಂದ ಕೇಂದ್ರದಲ್ಲಿ, ಬಿಜೆಪಿಯೇ ಅಧಿಕಾರ ನಡೆಸುತ್ತಿದೆ. ಭ್ರಷ್ಟಾಚಾರ ನಡೆದಿದ್ದರೆ ಅದು ಆವರಿಗೆ ಗೊತ್ತಿರಲಿಲ್ಲವೇ ಎಂದು ಕಿಡಿಕಾರಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಚೇತನ್‌ಗೌಡ, ಮುಖಂಡರಾದ ಕಲಗೋಡು ರತ್ನಾಕರ್, ಎಸ್.ಕೆ.ಮರಿಯಪ್ಪ, ಪುಷ್ಪಾ ಶಿವಕುಮಾರ್, ವೈ.ಎಚ್. ನಾಗರಾಜ್, ಶ್ವೇತಾಬಂಡಿ, ಹರ್ಷಿತ್‌ಗೌಡ, ಧೀರರಾಜ್ ಹೊನ್ನವಿಲೆ, ಜಿ.ಡಿ.ಮಂಜುನಾಥ್, ರಾಘವೇಂದ್ರ, ಶಿವಣ್ಣ, ಹಾಲಪ್ಪ, ರಮೇಶ್ ಶಂಕರಘಟ್ಟ, ವಿಜಯಕುಮಾರ್, ಶಿವಾನಂದ, ಮಂಜುನಾಥ್ ಬಾಬು ಇದ್ದರು.
ಜಿಲ್ಲೆಗೆ ಸಚಿವ ಮಧು ಬಂಗಾರಪ್ಪ ಏನೂ ಕೊಡುಗೆ ಕೊಟ್ಟಿಲ್ಲ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆರೋಪಿಸಿದ್ದಾರೆ. ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷರಾಗಿ ಗ್ಯಾರಂಟಿ ಯೋಜನೆಗಳ ಮೂಲಕ ವರ್ಷಕ್ಕೆ ₹50 ಸಾವಿರ ಕೋಟಿ ನೇರವಾಗಿ ಬಡವರಿಗೆ ತಲುಪುವಂತೆ ಮಾಡಿದ ಶ್ರೇಯ ಮಧು ಬಂಗಾರಪ್ಪ ಅವರದ್ದುಆರ್.ಪ್ರಸನ್ನಕುಮಾರ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ
ಜಿಲ್ಲಾ ಮಟ್ಟದಲ್ಲಿ ಹೋರಾಟಕ್ಕೆ ರೂಪುರೇಷೆ; ಪ್ರಸನ್ನಕುಮಾರ್ ವಿಬಿ–ಜಿರಾಮ್‌ಜಿ ಯೋಜನೆ ರದ್ದುಪಡಿಸಿ ಮೊದಲಿನಂತೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಬ್ಲಾಕ್ ಮಟ್ಟದಿಂದ ಹೋರಾಟ ರೂಪಿಸಲಾಗುತ್ತಿದೆ ಎಂದು ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹೇಳಿದರು. ಮೊದಲ ಹಂತವಾಗಿ ಜ.20ರಂದು ಶಿವಮೊಗ್ಗದ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಜ.27ರಿಂದ ಫೆ.7ರವರೆಗೆ ಎಲ್ಲಾ ಬ್ಲಾಕ್ ಕಾಂಗ್ರೆಸ್ ಸಮಿತಿಗಳಿಂದ ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಸಲಾಗುತ್ತದೆ. ಜ.31ರಿಂದ ಫೆ.6ರವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು. ಫೆ.7ರಿಂದ 15ರವರೆಗೆ ಕೆಪಿಸಿಸಿ ನೇತೃತ್ವದಲ್ಲಿ ರಾಜ್ಯಮಟ್ಟದಲ್ಲಿ ಹೋರಾಟ ರೂಪಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.