
ಶಿವಮೊಗ್ಗ: ಬದುಕಿನ ಸಾಧನೆಯ ಹಾದಿಯಲ್ಲಿ ಯಶಸ್ವಿಯಾಗಲು ಮಾತೃಭಾಷೆಯ ಕಲಿಕೆಯಲ್ಲಿ ಪರಿಪಕ್ವತೆ ಅತ್ಯವಶ್ಯಕ ಎಂದು ಹೈಕೋರ್ಟ್ ನ್ಯಾಯಧೀಶ ಎಚ್.ಪಿ. ಸಂದೇಶ್ ಅಭಿಪ್ರಾಯಪಟ್ಟರು.
ನಗರದ ಸಿ.ಭೀಮಸೇನರಾವ್ ಕಾನೂನು ಕಾಲೇಜಿನಲ್ಲಿ ಕಾನೂನು ವಿದ್ಯಾರ್ಥಿಗಳಿಗಾಗಿ ಶನಿವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಅನುಸಂಧಾನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಮಾತೃಭಾಷೆ ಎಂಬುದು ಅಭಿವ್ಯಕ್ತಿಯ ಅದ್ಭುತ ಸಾಧನ. ರಾಜ್ಯೋತ್ಸವದ ಆಚರಣೆಯ ಜೊತೆಗೆ ಭಾಷೆಯನ್ನು ಬೆಳೆಸಿ, ಸದಾ ಪ್ರಸ್ತುತವಾಗಿಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅರಿತುಕೊಳ್ಳಿ. ಮಾತೃಭಾಷೆಯಲ್ಲಿ ಸಾಧಿಸದವನು ಇತರೆ ಯಾವ ಭಾಷೆಯಲ್ಲಿಯೂ ಸಾಧಿಸಲಾರ. ಕನ್ನಡದ ಅಸ್ಮಿತೆ ಉಳಿಸಿಕೊಳ್ಳುವಲ್ಲಿ ಕುವೆಂಪು ಅವರ ಕೊಡುಗೆ ಅಪಾರ ಎಂದರು.
ಜಾತಿ, ಲಂಚ ಮತ್ತು ಅಪರಾಧಗಳು ದೇಶವನ್ನು ಬಾಧಿಸುತ್ತಿವೆ. ದೇಶದ ಹಿತಾಸಕ್ತಿಗಿಂತ ವೈಯಕ್ತಿಕ ಹಿತಾಸಕ್ತಿ ಹೆಚ್ಚಾಗುತ್ತಿದೆ. ಆಷಾಢಭೂತಿಗಳು ಜಾಸ್ತಿಯಾಗುತ್ತಿದ್ದು, ಮೌಲ್ಯಗಳು ಕಣ್ಮರೆಯಾಗುತ್ತಿವೆ. ಶಿಸ್ತು, ಶ್ರಮ, ಸಮಯ ಪ್ರಜ್ಞೆ, ಆತ್ಮವಿಶ್ವಾಸ, ಚೈತನ್ಯ, ನಿರ್ಭಯತೆ ಜೀವನದ ಸಾರವಾಗಿ ಅಳವಡಿಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎ.ಅನಲಾ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್. ಸಂತೋಷ, ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಎಂ.ಎಸ್.ಅನಂತದತ್ತ, ಗೋವಾದ ಸಲಗಾಂವ್ಕರ್ ಕಾನೂನು ಕಾಲೇಜಿನ ಸಹ ಪ್ರಾಧ್ಯಾಪಕ ಬಾಬು ಗೌಡ ಪಾಟೀಲ, ಕಾರ್ಯಕ್ರಮ ಸಂಯೋಜಕರಾದ ಎಚ್.ಎ.ಸೌಮ್ಯಾ, ಮೇಘಾ ವಿಜಯ ಉಪಸ್ಥಿತರಿದ್ದರು.
ಅನುಸಂಧಾನದಲ್ಲಿ ಪ್ರಾಮಾಣಿಕತೆ ಮತ್ತು ಸಮಗ್ರತೆ ಅತ್ಯಮೂಲ್ಯ. ವೃತ್ತಿ ಧರ್ಮದಲ್ಲಿ ಪ್ರಾಮಾಣಿಕತೆ ಉಳಿಸಿಕೊಂಡಾಗ ಮಾತ್ರ ಸವಾಲುಗಳನ್ನು ಎದುರಿಸುವ ಸ್ಥೈರ್ಯ ದೊರಕಲಿದೆಎಸ್.ಎನ್.ನಾಗರಾಜ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ
ಮೊಬೈಲ್ ಫೋನ್ ಎಂಬ ವ್ಯಾಮೋಹ ದೇಶದ ಮಾನವ ಸಂಪನ್ಮೂಲವನ್ನು ಹಾಳು ಮಾಡುತ್ತಿದೆ. ತಂತ್ರಾಂಶಕ್ಕಿಂತ ಪುಸ್ತಕಗಳನ್ನು ಅಧ್ಯಯನ ಮಾಡುವಲ್ಲಿ ಯುವಜನರು ಆಸಕ್ತಿ ವಹಿಸಿ.ಎಚ್.ಪಿ. ಸಂದೇಶ್. ಹೈಕೋರ್ಟ್ ನ್ಯಾಯಾಧೀಶ
ಪುತ್ತೂರು ಪ್ರಥಮ ಬೆಳಗಾವಿಗೆ ದ್ವಿತೀಯ
ಸ್ಥಾನ ರಾಜ್ಯಮಟ್ಟದ ಅನುಸಂಧಾನ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜು ತಂಡ ಪ್ರಥಮ ಬಹುಮಾನ ಪಡೆದರೆ ಬೆಳಗಾವಿಯ ಬಿ.ವಿ.ಬೆಲ್ಲದ್ ಕಾನೂನು ಕಾಲೇಜು ತಂಡ ದ್ವಿತೀಯ ಬಹುಮಾನ ಪಡೆಯಿತು. ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜು ತಂಡ ಸಮಾಧಾನಕರ ಬಹುಮಾನಕ್ಕೆ ಪಾತ್ರವಾಯಿತು. ರಾಜ್ಯದ ವಿವಿಧ ಕಾನೂನು ಕಾಲೇಜುಗಳ 20 ತಂಡಗಳು ಭಾಗವಹಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.